ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತು ಮಾಡಬೇಕು: ಸಂದೀಪ್‌ ಲಮಿಚಾನೆ

ಸೋಮವಾರ, ಮೇ 27, 2019
27 °C

ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತು ಮಾಡಬೇಕು: ಸಂದೀಪ್‌ ಲಮಿಚಾನೆ

Published:
Updated:
Prajavani

ನವದೆಹಲಿ: ‘ಐಪಿಎಲ್‌ನಲ್ಲಿ ಆಡುವ ಎಲ್ಲಾ ತಂಡಗಳಲ್ಲೂ ಪ್ರತಿಭಾನ್ವಿತ ಆಟಗಾರರ ದೊಡ್ಡ ದಂಡು ಇರುತ್ತದೆ. ಹೀಗಾಗಿ ಎಲ್ಲರಿಗೂ ಎಲ್ಲಾ ಪಂದ್ಯಗಳಲ್ಲೂ ಆಡುವ ಬಳಗದಲ್ಲಿ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆ ಕೆಲಸವನ್ನು ನಾನು ಮಾಡುತ್ತಿದ್ದೇನೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಂದೀಪ್‌ ಲಮಿಚಾನೆ ತಿಳಿಸಿದ್ದಾರೆ.

ನೇಪಾಳದ ಸಂದೀಪ್‌, ಶನಿವಾರ ನಡೆದಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್‌, ಕ್ರಿಸ್‌ ಗೇಲ್‌ ಮತ್ತು ಸ್ಯಾಮ್ ಕರನ್‌ ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಡೆಲ್ಲಿ ತಂಡ 5 ವಿಕೆಟ್‌ಗಳಿಂದ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

ಪಂದ್ಯದ ಬಳಿಕ ಮಾತನಾಡಿದ ಅವರು ‘ತಂಡದ ಆಡಳಿತ ಮಂಡಳಿ ನನ್ನ ಮೇಲೆ ನಂಬಿಕೆ ಇಟ್ಟು ಆಡುವ ಬಳಗದಲ್ಲಿ ಸ್ಥಾನ ನೀಡುತ್ತದೆ. ಅದನ್ನು ಉಳಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದರು.

‘ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗದಿದ್ದಾಗ ತುಂಬಾ ಬೇಸರವಾಗುತ್ತದೆ. ತಂಡದ ಆಡಳಿತ ಮಂಡಳಿಯ ಆ ನಿರ್ಧಾರವನ್ನು ಎಲ್ಲರೂ ಗೌರವಿಸಲೇಬೇಕಾಗುತ್ತದೆ. ನಮ್ಮ ಸರದಿಗಾಗಿ ಕಾಯಬೇಕಾಗುತ್ತದೆ. ಕಠಿಣ ಅಭ್ಯಾಸ ನಡೆಸಿ ಹೊಸ ಕೌಶಲಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು ಮೈಗೂಡಿಸಿಕೊಂಡು ಮುಂದಡಿ ಇಡಬೇಕಾಗುತ್ತದೆ’ ಎಂದು 18 ವರ್ಷದ ಆಟಗಾರ ಹೇಳಿದ್ದಾರೆ.

ಗೆಲುವಿಗೆ ಅಡಿಗಲ್ಲು ಇಟ್ಟ ಧವನ್‌: ‘ಶಿಖರ್‌ ಧವನ್‌ ಅಮೋಘ ಆಟ ಆಡಿದರು. ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಅಡಿಗಲ್ಲು ಹಾಕಿದರು’ ಎಂದು ಡೆಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ತಂಡಕ್ಕೆ ಧವನ್‌, ಉತ್ತಮ ಆರಂಭ ನೀಡಿದರು. ‘ಪವರ್‌ ಫ್ಲೇ’ಯಲ್ಲೇ ತಂಡದ ಖಾತೆಗೆ 60ರನ್‌ ಜಮೆಯಾಗಿದ್ದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಒತ್ತಡ ರಹಿತವಾಗಿ ಆಡಲು ಸಾಧ್ಯವಾಯಿತು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !