ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾರ್ಪಣೆ ಪಂದ್ಯದಲ್ಲೇ ದಾಖಲೆ; ಕಿವೀಸ್ ಆಟಗಾರನಿಂದ ಭಾರತಕ್ಕೆ ಎಚ್ಚರಿಕೆಯ ಸಂದೇಶ

Last Updated 3 ಜೂನ್ 2021, 15:39 IST
ಅಕ್ಷರ ಗಾತ್ರ

ಲಂಡನ್‌: ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೆವೊನ್‌ ಕಾನ್ವೇ ಅವರು ಟೆಸ್ಟ್‌ ಕ್ರಿಕೆಟ್‌ನತಮ್ಮ ಮೊದಲ ಪಂದ್ಯದಲ್ಲೇ ಭರ್ಜರಿ ದ್ವಿಶತಕ ಸಿಡಿಸಿದರು. ಮಾತ್ರವಲ್ಲದೆ ಇಂಗ್ಲೆಂಡ್‌ ನೆಲದಲ್ಲಿ ಪದಾರ್ಪಣೆಪಂದ್ಯದಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನೂ ಬರೆದರು.

ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಕ್ರಿಕೆಟ್‌ ಕಾಶಿ ʼಲಾರ್ಡ್ಸ್‌ʼ ಮೈದಾನದಲ್ಲಿ ಆರಂಭವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌, 122.4 ಓವರ್‌ಗಳಲ್ಲಿ378 ರನ್‌ ಗಳಿಸಿ ಆಲೌಟ್‌ ಆಗಿದೆ.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಕಾನ್ವೇ, ನಾಯಕ ಕೇನ್‌ ವಿಲಿಯಮ್ಸನ್‌ ಪಡೆಯನ್ನು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತದತ್ತ ಕೊಂಡೊಯ್ದರು. ಅವರನ್ನು ಹೊರತುಪಡಿಸಿ ಹೆನ್ರಿ ನಿಕೋಲಸ್‌ (61) ಮಾತ್ರವೇ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಉಳಿದಂತೆ, ಟಾಮ್‌ ಲಾಥಮ್‌23, ವೇಗಿ ನೀಲ್‌ ವ್ಯಾಗ್ನರ್‌ ಅಜೇಯ25, ಅನುಭವಿ ರಾಸ್‌ ಟೇಲರ್‌14, ಆಲ್‌ರೌಂಡರ್‌ಕೈಲ್‌ ಜೇಮಿಸನ್‌9 ಮತ್ತು ವೇಗಿಟಿಮ್‌ ಸೌಥಿ 8 ರನ್‌ ಗಳಿಸಿದರು. ಟೆಸ್ಟ್‌ ಕ್ರಿಕೆಟ್‌ನ ನಂಬರ್‌1 ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌ ಕೇವಲ13 ರನ್‌ ಹೊಡೆದು ವಿಕೆಟ್‌ ಒಪ್ಪಿಸಿದರು.ಬಿಜೆ ವಾಟ್ಲಿಂಗ್‌1 ರನ್‌ ಗಳಿಸಿದರೆ, ಕಾಲಿನ್‌ ಡಿ ಗ್ರಾಂಡ್‌ ಹೋಮ್‌ ಮತ್ತು ಮಿಚೇಲ್‌ ಸ್ಯಾಂಟ್ನರ್‌ ಸೊನ್ನೆ ಸುತ್ತಿದರು.

ದ್ವಿಶತಕ ಬಾರಿಸಿದ ಕಾನ್ವೇ, ರನೌಟ್‌ ಆಗುವುದರೊಂದಿಗೆ ಕಿವೀಸ್ ಇನಿಂಗ್ಸ್‌ಗೆ ತೆರೆ ಬಿದ್ದಿತು.

ಇಂಗ್ಲೆಂಡ್‌ ಪರ ಓಲಿ ರಾಬಿನ್ಸನ್‌ ನಾಲ್ಕು, ಮಾರ್ಕ್‌ವುಡ್‌ ಮೂರು ವಿಕೆಟ್‌ ಪಡೆದರು. ಇನ್ನೆರಡು ವಿಕೆಟ್‌ ಜೇಮ್ಸ್‌ ಆ್ಯಂಡರ್ಸನ್‌ ಪಾಲಾದವು.

ಇಂಗ್ಲೆಂಡ್‌ನಲ್ಲಿ ಕಾನ್ವೇ ದಾಖಲೆ: ಅನುಭವಿ ಲಾಥಮ್‌ ಜೊತೆಗೆ ಆರಂಭಿಕರಾಗಿ ಕ್ರೀಸ್‌ಗೆ ಇಳಿದ ಡೆವೊನ್‌ ಕಾನ್ವೇ 200 ರನ್‌ ಗಳಿಸಿಮಿಂಚಿದರು. ಬರೋಬ್ಬರಿ 347 ಎಸೆತಗಳನ್ನು ಎದುರಿಸಿದ ಅವರು 22 ಬೌಂಡರಿ ಮತ್ತು1 ಸಿಕ್ಸರ್‌ ಸಿಡಿಸಿ ಲೀಲಾಜಾಲವಾಗಿ ಬ್ಯಾಟಿಂಗ್‌ ಮಾಡಿದರು.

1896ರಲ್ಲಿ ಇಂಗ್ಲೆಂಡ್‌ ತಂಡದ ಪರ ಕೆ.ಎಸ್‌.ರಂಜಿತ್‌ಸಿನ್ಹ ಅವರು, ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ154ರನ್‌ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇಂಗ್ಲೆಂಡ್‌ ತಂಡದವರೇ ಆದ ಡಬ್ಯೂ.ಜಿ. ಗ್ರೇಸ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಅವರು1880ರಲ್ಲಿ ಓವಲ್‌ ಮೈದಾನದಲ್ಲಿ 152ರನ್‌ ಗಳಿಸಿದ್ದರು. ಈ ಇಬ್ಬರೂಆಸ್ಟ್ರೇಲಿಯಾ ವಿರುದ್ಧವೇ ದಾಖಲೆ ಬರೆದಿದ್ದರು.

ಲಾರ್ಡ್ಸ್‌ನಲ್ಲಿಪದಾರ್ಪಣೆ ಪಂದ್ಯ ಆಡಿದವರ ಪೈಕಿ ಗರಿಷ್ಠ ರನ್‌ ಗಳಿಸಿದ ಮತ್ತು ಒಟ್ಟಾರೆ ಇಲ್ಲಿ ಮೂರಂಕಿ ದಾಟಿದಏಳನೇ ಬ್ಯಾಟ್ಸ್‌ಮನ್‌ ಕಾನ್ವೇ. ಭಾರತದ ಸೌರವ್‌ ಗಂಗೂಲಿ1996ರಲ್ಲಿ 131 ರನ್‌ ಗಳಿಸಿದ್ದರು. ಇದು ಈವರೆಗೆ ಗರಿಷ್ಠ ರನ್‌ ಆಗಿತ್ತು.

ಮೊದಲ ಪಂದ್ಯದಲ್ಲಿ ದ್ವಿಶತಕ
ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಈವರೆಗೆ ಒಟ್ಟುಆರು ಬ್ಯಾಟ್ಸ್‌ಮನ್‌ಗಳು ದ್ವಿಶತಕ ಸಾಧನೆ ಮಾಡಿದ್ದಾರೆ. 1903ರಲ್ಲಿ ಇಂಗ್ಲೆಂಡ್‌ ತಂಡದ ಟಿಪ್‌ ಫಾಸ್ಟೆರ್‌ ಆಸ್ಟ್ರೇಲಿಯಾ (287), 2003ರಲ್ಲಿ ದಕ್ಷಿಣ ಆಫ್ರಿಕಾದ ಜಾಕ್ಯೂಸ್‌ ರುಡಾಲ್ಫ್‌ (ಅಜೇಯ 222) ಬಾಂಗ್ಲಾದೇಶದ ವಿರುದ್ಧ,1971ರಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಲಾರೆನ್ಸ್‌ ರೋವ್‌ (214) ನ್ಯೂಜಿಲೆಂಡ್‌ ವಿರುದ್ಧ, 1999ರಲ್ಲಿ ನ್ಯೂಜಿಲೆಂಡ್‌ನ ಮ್ಯಾಥ್ಯೂಸ್‌ ಸಿಂಕ್ಲೇರ್‌‌ (214)ವಿಂಡೀಸ್‌ ವಿರುದ್ಧ,1987ರಲ್ಲಿ ಶ್ರೀಲಂಕಾದ ಬ್ರೆಂಡನ್‌ ಕುರುಪ್ಪು (201) ನ್ಯೂಜಿಲೆಂಡ್‌ ವಿರುದ್ಧ ದ್ವಿಶತಕ ಸಿಡಿಸಿದ್ದರು.

ಭಾರತಕ್ಕೆ ಎಚ್ಚರಿಕೆ
ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲೂಟಿಸಿ) ಫೈನಲ್‌ ಪಂದ್ಯವು ಇದೇ ತಿಂಗಳು18 ರಿಂದ 22ರ ವರೆಗೆ ನಡೆಯಲಿದ್ದು,ಭಾರತ ಮತ್ತುನ್ಯೂಜಿಲೆಂಡ್‌ ಪಡೆಗಳು ಮುಖಾಮುಖಿಯಾಗಲಿವೆ.ಈ ಪಂದ್ಯಕ್ಕೆ ಕೆಲವೇ ದಿನಗಳಿರುವಾಗಕಾನ್ವೇ ಅಮೋಘಸಾಮರ್ಥ್ಯ ತೋರುತ್ತಿರುವುದು ಕಿವೀಸ್‌ ತಂಡದ ವಿಶ್ವಾಸ ಹೆಚ್ಚಿಸಿದೆ.

ಏಕದಿನ ಮತ್ತು ಟಿ20 ಮಾದರಿಯಲ್ಲೂಕಾನ್ವೇ ಉತ್ತಮ ದಾಖಲೆ ಹೊಂದಿದ್ದಾರೆ.ಟಿ20 ಕ್ರಿಕೆಟ್‌ನಲ್ಲಿ14 ಪಂದ್ಯಗಳನ್ನು ಆಡಿರುವ ಅವರು,11 ಇನಿಂಗ್ಸ್‌ಗಳಲ್ಲಿ 59.12ರ ಸರಾಸರಿಯಲ್ಲಿ4 ಅರ್ಧಶತಕ ಸಹಿತ473 ರನ್‌ ಕಲೆಹಾಕಿದ್ದಾರೆ. ಮೂರು ಏಕದಿನ ಪಂದ್ಯಗಳಲ್ಲಿತಲಾ ಒಂದು ಶತಕ ಮತ್ತು ಅರ್ಧಶತಕ ಸಹಿತ 75ರ ಸರಾಸರಿಯಲ್ಲಿ225 ರನ್‌ ಗಳಿಸಿದ್ದಾರೆ.ಡಬ್ಲೂಟಿಸಿ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತಕ್ಕೂ ಇದರಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT