ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಧೋನಿ ಗಮನ ಸೆಳೆಯಲು ಪ್ರಯತ್ನಿಸಿದ್ದೆ : ರವಿಚಂದ್ರನ್‌ ಅಶ್ವಿನ್‌

ನೆನಪುಗಳನ್ನು ಮೆಲುಕು ಹಾಕಿದ ಹಿರಿಯ ಆಟಗಾರ ರವಿಚಂದ್ರನ್‌ ಅಶ್ವಿನ್‌
Last Updated 18 ಜೂನ್ 2020, 8:57 IST
ಅಕ್ಷರ ಗಾತ್ರ

ನವದೆಹಲಿ: ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಚೊಚ್ಚಲ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆಗ ಮಹೇಂದ್ರ ಸಿಂಗ್‌ ಧೋನಿ ಅವರ ಗಮನ ಸೆಳೆಯಲು ಸಾಕಷ್ಟು ಪ್ರಯತ್ನಿಸಿದ್ದೆ’ ಎಂದು ಭಾರತ ಕ್ರಿಕೆಟ್‌ ತಂಡದ ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.

ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅಶ್ವಿನ್‌, ಹಳೆಯ ನೆನ‍ಪುಗಳನ್ನು ಮೆಲುಕು ಹಾಕಿದ್ದಾರೆ.

‘ಐಪಿಎಲ್‌ ಮತ್ತು ಸಿಎಸ್‌ಕೆ ತಂಡದಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆರಂಭದಲ್ಲಿ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ನನ್ನಲ್ಲಿತ್ತು. ಧೋನಿ, ಮ್ಯಾಥ್ಯೂ ಹೇಡನ್‌ ಮತ್ತು ಮುತ್ತಯ್ಯ ಮುರಳೀಧರನ್‌ ಅವರಿಗೆ ನನ್ನ ಪರಿಚಯವೇ ಇರಲಿಲ್ಲ. ನಾನು ಯಾರು, ನನ್ನ ಸಾಮರ್ಥ್ಯವೇನು ಎಂಬುದನ್ನು ಅವರಿಗೆ ತೋರಿಸಬೇಕೆಂದು ನಿಶ್ಚಯಿಸಿದ್ದೆ. ತಂಡದಲ್ಲಿ ಮುರಳೀಧರನ್‌ಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿತ್ತು. ಒಂದಲ್ಲ ಒಂದು ದಿನ ಅವರನ್ನು ಹಿಂದಿಕ್ಕಿ ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕೆಂಬ ಆಲೋಚನೆಯೂ ಮೂಡಿತ್ತು’ ಎಂದು ಅವರು ತಿಳಿಸಿದ್ದಾರೆ.

‘ನನ್ನ ವೃತ್ತಿ ಬದುಕಿನ ಮೇಲೆ ಧೋನಿ ಅವರು ಸಾಕಷ್ಟು ಪ್ರಭಾವ ಬೀರಿದ್ದಾರೆ. ನೆಟ್ಸ್‌ನಲ್ಲಿ ಹೇಡನ್‌, ಜೇಕಬ್‌ ಓರಮ್‌ ಮತ್ತು ಸ್ಟೀಫನ್‌ ಫ್ಲೆಮಿಂಗ್‌ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದೆ. ಆದರೆ ಧೋನಿಗೆ ಬೌಲಿಂಗ್‌ ಮಾಡಲು ಆಗಿರಲಿಲ್ಲ. ಶುರುವಿನಲ್ಲಿ ಅವರ ಜೊತೆ ಸುದೀರ್ಘ ಮಾತುಕತೆ ನಡೆಸಲೂ ಅವಕಾಶ ಸಿಕ್ಕಿರಲಿಲ್ಲ. ಒಮ್ಮೆ ನೆಟ್ಸ್‌ನಲ್ಲಿ ಧೋನಿ ಅಭ್ಯಾಸ ಮಾಡುತ್ತಿದ್ದರು. ಮುರಳೀಧರನ್‌ ಅವರ ಎಸೆತಗಳನ್ನು ಬೌಂಡರಿಯ ಆಸೆ ಬಾರಿಸುತ್ತಿದ್ದುದ್ದು ಗಮನಕ್ಕೆ ಬಂತು. ಮುರಳಿಗಿಂತಲೂ ಚೆನ್ನಾಗಿ ಬೌಲಿಂಗ್‌ ಮಾಡಿದರೆ ಖಂಡಿತಾ ತಂಡದಲ್ಲಿ ಅವಕಾಶ ಪಡೆಯಬಹುದು ಎಂಬ ಆಲೋಚನೆ ಆಗ ನನ್ನ ಮನದಲ್ಲಿ ಮೊಳೆತಿತ್ತು’ ಎಂದಿದ್ದಾರೆ.

‘ಚಾಲೆಂಜರ್‌ ಟ್ರೋಫಿಯ ವೇಳೆ ಧೋನಿ ಅವರ ಕಣ್ಣು ನನ್ನ ಮೇಲೆ ಬೀಳುವಂತೆ ಮಾಡಿದ್ದೆ. ಅವರ ವಿಕೆಟ್‌ ಉರುಳಿಸಿ ಮೈದಾನದಲ್ಲಿ ಚಿಕ್ಕ ಮಗುವಿನ ಹಾಗೆ ಸಂಭ್ರಮಿಸಿದ್ದೆ’ ಎಂದು ನುಡಿದಿದ್ದಾರೆ.

‘2010ರ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ವಿಕ್ಟೋರಿಯಾ ಬುಷ್‌ರೇಂಜರ್ಸ್‌ ವಿರುದ್ಧದ ಪಂದ್ಯದ ವೇಳೆ ಸೂಪರ್‌ ಓವರ್‌ನಲ್ಲಿ ಬೌಲಿಂಗ್ ಮಾಡುವುದಾಗಿ ನಾನು ಧೋನಿ ಬಳಿ ಕೇಳಿದೆ. ಅವರು ಅರೆ ಕ್ಷಣವೂ ಯೋಚಿಸದೆ ನನ್ನ ಕೈಗೆ ಚೆಂಡು ನೀಡಿದ್ದರು. ಆ ಓವರ್‌ನಲ್ಲಿ 23 ರನ್‌ ಬಿಟ್ಟುಕೊಟ್ಟಿದ್ದೆ. ಪಂದ್ಯ ಸೋತ ನಂತರ ನನ್ನ ಬಳಿ ಬಂದಿದ್ದ ಧೋನಿ, ನೀವು ಕೇರಂ ಬಾಲ್‌ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದರು. ಹೀಗೆ ಅವರು ಎಲ್ಲರಲ್ಲೂ ಉತ್ಸಾಹ ತುಂಬುತ್ತಿದ್ದರು’ ಎಂದು ಅಶ್ವಿನ್‌ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT