ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ರಾವಿಡ್‌ಗಾಗಿ ಕಪ್ ಜಯಿಸಿ

Published 28 ಜೂನ್ 2024, 20:25 IST
Last Updated 28 ಜೂನ್ 2024, 20:25 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಪುಸ್ತಕ ಮಳಿಗೆಯೊಂದರಲ್ಲಿ ವಾಚನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಬಂದಿದ್ದರು. ಆದರೆ ಅವರು ವೇದಿಕೆಯ ಮೇಲೆ ಇರಲಿಲ್ಲ. ಜನರು ಕುಳಿತಿದ್ದ ಹಿಂದಿನ ಸಾಲಿನಲ್ಲಿ ನಿರುಮ್ಮಳವಾಗಿ ಆಸೀನರಾಗಿದ್ದರು. 

ಇದನ್ನು ಗಮನಿಸಿದ ಆಯೋಜಕರು ಅವರನ್ನು ವೇದಿಕೆಯ ಮುಂಭಾಗದ ಸಾಲಿಗೆ ಆಹ್ವಾನಿಸಿದರು. ಆದರೆ ದ್ರಾವಿಡ್ ಅವರು ಸೌಜನ್ಯಯುತವಾಗಿ ನಿರಾಕರಿಸಿ ಹಿಂದಿನ ಆಸನದಲ್ಲಿಯೇ ಉಳಿದರು.  ದ್ರಾವಿಡ್ ಅವರು ಯಾವತ್ತೂ ಆಡಂಬರದ ತಳಕು ಬಳುಕಿನಲ್ಲಿ ಗುರುತಿಸಿಕೊಂಡವರು ಅಲ್ಲ. ಅದು ಅವರ ಜಾಯಮಾನವೂ ಅಲ್ಲ. 

ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶ ಏನೇ ಆಗಲಿ, ಭಾರತ ತಂಡದ ಮುಖ್ಯ ಕೋಚ್ ಆಗಿರುವ ದ್ರಾವಿಡ್ ಅವರ ಕ್ರಿಕೆಟ್‌ ಜೀವನದ ಒಂದು ಸುತ್ತು ಪೂರ್ಣವಾಗಲಿದೆ. ಈ ಪಂದ್ಯದ ನಂತರ ಅವರು ಈ ಹುದ್ದೆಯಿಂದ ನಿರ್ಗಮಿಸುವರು. 

ಅದಕ್ಕಾಗಿಯೇ ಅವರಿಗೆ ವಿಜಯದ ವಿದಾಯ ನೀಡಬೇಕು ಎಂಬುದು ಅಭಿಮಾನಿಗಳ ಮನದಿಂಗಿತ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ #ಡೂಇಟ್‌ಫಾರ್‌ದ್ರಾವಿಡ್  ಎಂಬ ಹ್ಯಾಷ್‌ಟ್ಯಾಗ್ ರಚಿಸಲಾಗಿದ್ದು ಅಪಾರ ಸ್ಪಂದನೆ ವ್ಯಕ್ತವಾಗಿದೆ. ಆದರೆ ದ್ರಾವಿಡ್ ಇದನ್ನು ಒಪ್ಪುವುದಿಲ್ಲ. ತಂಡಕ್ಕಾಗಿ ಕಪ್ ಜಯಿಸಬೇಕು ಎಂಬುದು ಅವರ ದೃಢನಂಬಿಕೆ. 

ಈ ಬಗ್ಗೆ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಗೆ ಪ್ರತಿಕ್ರಿಯಿಸಿರುವ ದ್ರಾವಿಡ್, ‘ಅತ್ಯುತ್ತಮ ದರ್ಜೆಯ ಕ್ರಿಕೆಟ್ ಆಡುವುದು ನಮ್ಮ ಗುರಿ. ನನ್ನ ವೈಯಕ್ತಿಕ ಸ್ವಭಾವ ಮತ್ತು ವ್ಯಕ್ತಿತ್ವಕ್ಕೆ ವಿರುದ್ಧವಾದುದನ್ನು ಬಯಸುವುದಿಲ್ಲ. ಈ ಕುರಿತು ನಾನು ಮಾತನಾಡುವುದು ಇಲ್ಲ’ ಎಂದರು. 

‘ಯಾರೋ ಒಬ್ಬರಿಗಾಗಿ ಸಾಧಿಸುವುದು ಎಂಬ ಭಾವನೆಯ ಬಗ್ಗೆ ನನಗೆ ನಂಬಿಕೆಯಿಲ್ಲ. ನೀವು ಪರ್ವತಾರೋಹಿಗೆ ಹೋಗಿ ಮೌಂಟ್ ಎವರೆಸ್ಟ್ ಏಕೆ ಏರುತ್ತೀರಿ ಎಂದು ಕೇಳಬಹುದು. ಅದಕ್ಕೆ ಆ ವ್ಯಕ್ತಿಯು ಮೌಂಟ್ ಎವರೆಸ್ಟ್ ಅಲ್ಲಿರುವುದರಿಂದ ಏರಲು ಬಯಸುತ್ತೇನೆ ಎಂದೇ ಹೇಳುತ್ತಾರೆ. ವಿಶ್ವಕಪ್ ಇರುವುದರಿಂದ ಅದನ್ನು ಗೆಲ್ಲಲು ಬಯಸುವೆ. ಅದನ್ನು ಯಾರಿಗೋಸ್ಕರವೂ ಅಲ್ಲ’ ಎಂದು ದ್ರಾವಿಡ್ ಮಾರ್ಮಿಕವಾಗಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT