ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ನಿಂದಾಚೆಯ ಬದುಕಿನ ಪ್ರಾಮುಖ್ಯತೆ ಹೇಳಿಕೊಟ್ಟ ದ್ರಾವಿಡ್‌

ಹಿರಿಯ ಆಟಗಾರನಿಗೆ ಕೃತಜ್ಞತೆ ಸಲ್ಲಿಸಿದ ಚೇತೇಶ್ವರ ಪೂಜಾರ
Last Updated 27 ಜೂನ್ 2020, 6:41 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಮೇಲೆ ರಾಹುಲ್‌ ದ್ರಾವಿಡ್‌ ಅವರು ಬೀರಿದ ಪ್ರಭಾವ ವರ್ಣಿಸಲು ಭಾರತ ತಂಡದ ಕಲಾತ್ಮಕ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅವರಿಗೆ ಪದಗಳೇ ಸಾಲದಂತೆ. ಕ್ರಿಕೆಟ್‌ನಿಂದಾಚೆಯ ಜೀವನದ ಕುರಿತು ಹಿರಿಯ ಆಟಗಾರ ನೀಡಿದ ಸಲಹೆಗಳಿಗೆ ಯಾವಾಗಲೂ ಕೃತಜ್ಞ ಎಂದು ಪೂಜಾರ ನುಡಿದಿದ್ದಾರೆ.

ಪೂಜಾರ ಬ್ಯಾಟಿಂಗ್‌ಅನ್ನು ‘ಭಾರತ ಕ್ರಿಕೆಟ್‌ ತಂಡದ ಗೋಡೆ’ ಎಂದು ಹೆಸರಾಗಿರುವ ದ್ರಾವಿಡ್‌ ಅವರ ಶೈಲಿಗೆ ಹೋಲಿಸಲಾಗುತ್ತಿದೆ. ವೃತ್ತಿ ಬದುಕು ಹಾಗೂ ವೈಯಕ್ತಿಕ ಜೀವನವನ್ನು ಹೇಗೆ ಪ‍್ರತ್ಯೇಕವಾಗಿ ನೋಡಬೇಕೆಂದು ದ್ರಾವಿಡ್‌ ಅವರು ಹೇಳಿಕೊಟ್ಟಿದ್ದನ್ನು ಪೂಜಾರ ತುಂಬು ಹೃದಯದಿಂದ ನೆನೆಯುತ್ತಾರೆ.

‘ಕ್ರಿಕೆಟ್‌ ಹೊರತುಪಡಿಸಿದ ಬದುಕಿನ ಬಗ್ಗೆ ಅರಿಯಲು ದ್ರಾವಿಡ್‌ ಅವರ ಸಲಹೆಗಳು ನೆರವಾದವು. ಹೆಚ್ಚು ಕಮ್ಮಿ ಅವರು ಹೇಳಿಕೊಟ್ಟ ಸಲಹೆಗಳನ್ನು ನಾನು ಮೊದಲೇ ಪಾಲಿಸುತ್ತಿದ್ದೆ. ಆದರೆ ಅವರೊಂದಿಗೆ ಚರ್ಚಿಸಿದ ಬಳಿಕ ಬದುಕಿನ ರೀತಿಗೆ ಇನ್ನಷ್ಟು ಸ್ಪಷ್ಟತೆ ಸಿಕ್ಕಿತು ಮತ್ತು ನಾನು ಮಾಡಬೇಕಾದ ಕಾರ್ಯದ ಕುರಿತು ಖಚಿತತೆ ಲಭಿಸಿತು’ ಎಂದು ಪೂಜಾರ ಹೇಳಿದ್ದಾರೆ.

ಭಾರತ ತಂಡದ ಪರ 164 ಟೆಸ್ಟ್‌ ಪಂದ್ಯಗಳನ್ನು ಆಡಿರುವ ದ್ರಾವಿಡ್‌ 13,288 ರನ್‌ ಕಲೆ ಹಾಕಿದ್ದಾರೆ. 344 ಏಕದಿನ ಪಂದ್ಯಗಳ ಮೂಲಕ 10,889 ರನ್‌ ಗಳಿಸಿದ್ದಾರೆ. 79 ಏಕದಿನ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದ ಅವರು 42ರಲ್ಲಿ ಗೆಲುವು ತಂದುಕೊಟ್ಟಿದ್ದರು. ಚೇಸಿಂಗ್‌ ಮೂಲಕ ಸತತ 14 ಪಂದ್ಯಗಳಲ್ಲಿ ವಿಜಯ ದೊರಕಿಸಿಕೊಟ್ಟ ವಿಶ್ವದಾಖಲೆಯೂ ಇದರಲ್ಲಿ ಸೇರಿದೆ.

‘ರಾಹುಲ್‌ ಬಾಯ್‌ ಬಗ್ಗೆ ಒಂದು ಸಾಲಿನ ವಾಕ್ಯದಲ್ಲಿ ಹೇಳಲು ಸಾಧ್ಯವಿಲ್ಲ. ನನಗೆ ಅವರು ಯಾವಾಗಲೂ ಸ್ಫೂರ್ತಿಯ ಚಿಲುಮೆ. ನನ್ನ ಬ್ಯಾಟಿಂಗ್‌ ಶೈಲಿಯನ್ನು ಅವರೊಂದಿಗೆ ಹೋಲಿಸಿದರೂ, ಅವರ ಶೈಲಿಯನ್ನು ನಾನು ಅನುಕರಿಸುವುದಿಲ್ಲ’ ಎಂದು ಪೂಜಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT