ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಎಸ್ ಬರಲಿ; ಟಾಸ್ ಕೈಬಿಡಿ

ದೇಶಿ ಕ್ರಿಕೆಟ್‌ ಆಟಗಾರರು, ಕೋಚ್‌ಗಳ ವಾರ್ಷಿಕ ಸಮಾವೇಶದಲ್ಲಿ ಆಗ್ರಹ
Last Updated 17 ಮೇ 2019, 19:33 IST
ಅಕ್ಷರ ಗಾತ್ರ

ಮುಂಬೈ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲೂ ಅಂಪೈರ್ ತೀರ್ಪು ಮರುಪರಿಶೀಲನೆ ಪದ್ಧತಿ (ಡಿಆರ್‌ಎಸ್) ಜಾರಿಗೆ ತರುವಂತೆಯೂ ನಾಣ್ಯ ಚಿಮ್ಮಿಸಿ ಟಾಸ್ ಹಾಕುವುದನ್ನು ಕೈಬಿಡುವಂತೆಯೂ ದೇಶಿ ಕ್ರಿಕೆಟ್ ತಂಡಗಳ ಆಟಗಾರರು ಮತ್ತು ಕೋಚ್‌ಗಳು ಒತ್ತಾಯಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ದೇಶಿ ಕ್ರಿಕೆಟ್‌ಗೆ ಸಂಬಂಧಿಸಿದ ವಾರ್ಷಿಕ ಸಮಾವೇಶದಲ್ಲಿ ಈ ಎರಡು ವಿಷಯಗಳನ್ನು ಪ್ರಮುಖವಾಗಿ ಮಂಡಿಸಲಾಯಿತು. ಡಿಆರ್‌ಎಸ್‌ ಅನ್ನು ಸದ್ಯ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಬಳಸಲಾಗುತ್ತಿದೆ. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಕಳೆದ ಬಾರಿ ಕಳಪೆ ಮಟ್ಟದ ತೀರ್ಪುಗಳು ವಿವಾದ ಸೃಷ್ಟಿಸಿದ್ದವು. ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಔಟಾಗಿದ್ದರೂ ಅಂಪೈರ್‌ ನಾಟೌಟ್ ತೀರ್ಪು ನೀಡಿದ್ದರು. ನಂತರ ಪೂಜಾರ ಶತಕ ಗಳಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತ್ತು.

ಇಂಥ ಪ್ರಮಾದಗಳು ಮರುಕಳಿಸದೇ ಇರಲು ರಣಜಿ ಟೂರ್ನಿಯಲ್ಲೂ ಡಿಆರ್‌ಎಸ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು. ಲಭ್ಯವಿರುವ ಸೌಕರ್ಯಗಳನ್ನು ಬಳಸಿ ಸದ್ಯ ಇದನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.

ನಾಣ್ಯ ಚಿಮ್ಮಿಸಿ ಯಾರು ಮೊದಲು ಬ್ಯಾಟಿಂಗ್ ಮಾಡಬೇಕು ಎಂದು ನಿರ್ಣಯಿಸುವುದನ್ನೂ ಕೈಬಿಡುವಂತೆಯೂ ಆಗ್ರಹಿಸಲಾಯಿತು. ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿ ಅಗತ್ಯವಿದೆಯೇ ಎಂದು ಕೆಲವು ರಾಜ್ಯ ತಂಡಗಳ ನಾಯಕರು ಪ್ರಶ್ನಿಸಿದರು.

‘ಭಾರತ ಕ್ರಿಕೆಟ್‌ ದೇಶದ ಮೂಲೆ ಮೂಲೆಗೆ ಹಬ್ಬಿದೆ. ಮುಂಬೈ, ಕರ್ನಾಟಕದಂಥ ತಂಡಗಳು ಪ್ರಮುಖ ಟೂರ್ನಿಗಳಲ್ಲಿ ಆಧಿಪತ್ಯ ಸ್ಥಾಪಿಸಿವೆ. ಒಂದೆರಡು ವರ್ಷಗಳಲ್ಲಿ ವಿದರ್ಭದಂಥ ತಂಡಗಳು ಕೂಡ ಅತ್ಯುತ್ತಮ ಸಾಧನೆ ಮಾಡಿವೆ. ಇದು, ನಮ್ಮಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಬೆಳೆಯುತ್ತಿದೆ ಎಂಬುದನ್ನು ಸಾಬೀತು ಮಾಡಿದೆ. ಈಶಾನ್ಯ ರಾಜ್ಯಗಳ ತಂಡಗಳು ಕೂಡ ದೇಶಿ ಕ್ರಿಕೆಟ್‌ಗೆ ಸೇರಿದ್ದರಿಂದ ದೇಶಿ ಕ್ರಿಕೆಟ್‌ನ ಶಕ್ತಿ ಇನ್ನಷ್ಟು ಬಲವಾಗಿದೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಹೇಳಿದರು.

ಸಮಾವೇಶದಲ್ಲಿ ಕೇಳಿ ಬಂದ ಒತ್ತಾಯಗಳಿಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಳ್ಳುವುದು ಬಿಸಿಸಿಐನ ತಾಂತ್ರಿಕ ಸಮಿಯ ಹೊಣೆ. ನಂತರ ಬಿಸಿಸಿಐ ಆಡಳಿತ ಸಮಿತಿಯ ಒಪ್ಪಿಗೆ ಬೇಕು. ಸದ್ಯ ಇವೆರಡೂ ಇಲ್ಲ. ಬಿಸಿಸಿಐ ಆಡಳಿತ ಅಡ್‌ ಹಾಕ್ ಸಮಿತಿಯ ಮೇಲುಸ್ತುವಾರಿಯಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT