ಸೋಮವಾರ, ಮಾರ್ಚ್ 27, 2023
22 °C
ಫೈನಲ್‌ ಹಣಾಹಣಿಯಲ್ಲಿ ಐದು ವಿಕೆಟ್ ಕಬಳಿಸಿದ ಅಕ್ಷಯ್ ವಖ್ರೆ: ಕುಸಿದ ಇಂಡಿಯಾ ಗ್ರೀನ್

ಇಂಡಿಯಾ ರೆಡ್‌ ಬಳಗಕ್ಕೆ ದುಲೀಪ್ ಟ್ರೋಫಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಫ್‌ಸ್ಪಿನ್ನರ್ ಅಕ್ಷಯ್ ವಖ್ರೆ ದಾಳಿಗೆ ಇಂಡಿಯಾ ಗ್ರೀನ್ ತತ್ತರಿಸಿತು. ಫೈನಲ್ ಪಂದ್ಯದಲ್ಲಿ ಇನ್ನೂ ಒಂದು ದಿನ ಬಾಕಿಯಿರುವಂತೆಯೇ ಇಂಡಿಯಾ ರೆಡ್ ತಂಡವು ದುಲೀಪ್ ಟ್ರೋಫಿ ಜಯಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯವಾದ ಫೈನಲ್‌ನಲ್ಲಿ ರೆಡ್ ತಂಡವು ಇನಿಂಗ್ಸ್ ಮತ್ತು 38 ರನ್‌ಗಳಿಂದ ಗೆದ್ದಿತು.

ಸುಂದರವಾದ ಟ್ರೋಫಿ ಮತ್ತು ₹ 40 ಲಕ್ಷವನ್ನು  ತನ್ನದಾಗಿಸಿಕೊಂಡಿತು. ರೆಡ್ ತಂಡವು  ಎರಡನೇ ಬಾರಿ ಚಾಂಪಿಯನ್  ಆಗಿದೆ. 2017–18ರಲ್ಲಿ ಮೊದಲ ಸಲ ಗೆದ್ದಿತ್ತು. ಹೋದ ಋತುವಿನಲ್ಲಿ ರನ್ನರ್ಸ್ ಅಪ್ ಆಗಿತ್ತು. ಈ ಬಾರಿ ಫೈನಲ್‌್ ಸೋತ  ಗ್ರೀನ್‌ ತಂಡವು ₹ 20 ಲಕ್ಷ ಪಡೆಯಿತು.

ಇಂಡಿಯಾ ರೆಡ್ ತಂಡವು ಬೆಳಿಗ್ಗೆ 388 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನಿಂಗ್ಸ್ ಮುಗಿಸಿತು. 157 ರನ್‌ಗಳ ಮುನ್ನಡೆಯಷ್ಟೇ ರೆಡ್ ಗೆಲುವಿಗೆ ಸಾಕಾಯಿತು.

ಉತ್ತಮ ಬ್ಯಾಟ್ಸ್‌ಮನ್‌ಗಳು ಇರುವ ಗ್ರೀನ್ ತಂಡದಿಂದ ಹೆಚ್ಚು ಪ್ರತಿರೋಧವೇ ವ್ಯಕ್ತವಾಗಲಿಲ್ಲ. ಫೈಜ್ ಫಜಲ್ (10), ಅಕ್ಷತ್ ರೆಡ್ಡಿ (33) ಮತ್ತು ಸಿದ್ದೇಶ್ ಲಾಡ್ (42; 80ಎಸೆತ, 6ಬೌಂಡರಿ) ಬಿಟ್ಟರೆ ಉಳಿದವರು ಎರಡಂಕಿ ದಾಟಲಿಲ್ಲ. ಅದರಿಂದಾಗಿ ತಂಡವು 39.5 ಓವರ್‌ಗಳಲ್ಲಿ 119 ರನ್ ಗಳಿಸಿ ಆಟ ಮುಗಿಸಿತು.

ಕೇವಲ ಮೂರು ಗಂಟೆಗಳ ಆಟದಲ್ಲಿ ಗ್ರೀನ್ ತಂಡಕ್ಕೆ ಸೋಲು ಎದುರಾಯಿತು.

ಐದು ವಿಕೆಟ್ ಗಳಿಸಿದ ಅಕ್ಷಯ್, ರೆಡ್ ತಂಡದ ಜಯವನ್ನು ಸುಲಭಗೊಳಿಸಿದರು. ಅವರು ಲಾಡ್, ಅಕ್ಷಯ್ ವಾಡಕರ್, ಧರ್ಮೇಂದ್ರಸಿಂಹ ಜಡೇಜ,  ತನ್ವೀರ್ ಉಲ್ ಹಕ್ ಮತ್ತು ಅಂಕಿತ್ ರಜಪೂತ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ (ಔಟಾಗದೆ 76) ಗಳಿಸಿದ್ದ ಮಯಂಕ್ ಮಾರ್ಕಂಡೆಗೆ ಗಾಯದಿಂದಾಗಿ ಈ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.

ರೆಡ್ ತಂಡದ ಬೌಲರ್ ಆವೇಶ್ ಖಾನ್ (38ಕ್ಕೆ3) ಗ್ರೀನ್ ತಂಡಕ್ಕೆ ಇನಿಂಗ್ಸ್‌ ಆರಂಭದಲ್ಲಿಯೇ  ಆಘಾತ ನೀಡಿದರು. ಸ್ಪಿನ್ನರ್‌ಗಳಿಗೆ ಸಹಕರಿಸುತ್ತಿದ್ದ ಪಿಚ್‌ನಲ್ಲಿ ಅಕ್ಷಯ್ ಉಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು.

‘ಮೊದಲ ಮೂರು ದಿನಗಳಿಗಿಂತ ಇವತ್ತು (ಶನಿವಾರ) ಪಿಚ್‌ ಬೌಲರ್‌ಗಳಿಗೆ ನೆರವಾಗುತ್ತಿತ್ತು. ಚೆಂಡು ತಿರುವು ಪಡೆಯುತ್ತಿತ್ತು. ಆದರೂ ಗ್ರೀನ್ ತಂಡದ ಬ್ಯಾಟ್ಸ್‌ಮನ್‌ಗಳು ಕೂಡ ತಮ್ಮ  ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಅನಿಸುತ್ತದೆ. ಒಂದೊಮ್ಮೆ ಅವರಲ್ಲಿ ಒಂದೆರಡು ದೊಡ್ಡ ಪಾಲುದಾರಿಕೆ ಆಟಗಳು ದಾಖಲಾಗಿದ್ದರೆ ಪಂದ್ಯ ರೋಚಕವಾಗುತ್ತಿತ್ತು. ಆದರೆ ಸುಲಭವಾಗಿ ಗೆದ್ದಿದ್ದೇವೆ’ ಎಂದು ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷಯ್ ಹೇಳಿದರು.

ಗುರುವಾರ ಮಧ್ಯಾಹ್ನ ಮಳೆ ಬರುವ ಮುನ್ನವೇ ರೆಡ್ ತಂಡವು ಮುನ್ನಡೆ ಗಳಿಸಿತ್ತು. ಮಂದಬೆಳಕಿನಿಂದ ಅಟ ನಿಂತಾಗ  116 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 345 ರನ್‌ ಗಳಿಸಿತು. ನಾಲ್ಕನೇ ದಿನ ಆಟ ಮುಂದುವರಿಸಿದ ಜಯದೇವ್ ಉನದ್ಕತ್ (32; 69ಎಸೆತ, 3ಬೌಂಡರಿ) ಮತ್ತು ಆವೇಶ್ ಖಾನ್ (12 ರನ್) ತಂಡದ ಮೊತ್ತವನ್ನು ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಇಂಡಿಯಾ ಗ್ರೀನ್: 231, ಇಂಡಿಯಾ ರೆಡ್:388; ಎರಡನೇ ಇನಿಂಗ್ಸ್: ಇಂಡಿಯಾ ಗ್ರೀನ್: 39.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 199 (ಫೈಜ್ ಫಜಲ್ 10, ಅಕ್ಷತ್ ರೆಡ್ಡಿ 33, ಸಿದ್ಧೇಶ್ ಲಾಡ್ 42, ಜಯದೇವ್ ಉನದ್ಕತ್ 35ಕ್ಕೆ1, ಆವೇಶ್ ಖಾನ್ 38ಕ್ಕೆ3, ಅಕ್ಷಯ್ ವಖ್ರೆ 13ಕ್ಕೆ 5).

ಫಲಿತಾಂಶ: ಇಂಡಿಯಾ ರೆಡ್ ತಂಡಕ್ಕೆ ಇನಿಂಗ್ಸ್ ಮತ್ತು 38 ರನ್‌ಗಳಿಂದ ಜಯ ಮತ್ತು ಪ್ರಶಸ್ತಿ.

***

ದೇಶಿ ಋತುವಿನ ಆರಂಭವು ಗೆಲುವಿನೊಂದಿಗೆ ಆಗಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂದಿನ ಟೂರ್ನಿಗಳಲ್ಲಿ ಉತ್ತಮವಾಗಿ ಆಡುವ ಹುಮ್ಮಸ್ಸು ಹೆಚ್ಚಿದೆ.

– ಅಕ್ಷಯ್ ವಖ್ರೆ, ರೆಡ್ ತಂಡದ ಬೌಲರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು