ಭಾನುವಾರ, ಸೆಪ್ಟೆಂಬರ್ 22, 2019
27 °C
ದುಲೀಪ್ ಟ್ರೋಫಿ ಫೈನಲ್ ಇಂದಿನಿಂದ: ಇಂಡಿಯಾ ರೆಡ್ ಮತ್ತು ಇಂಡಿಯಾ ಗ್ರೀನ್ ನಡುವಣ ಹಣಾಹಣಿ

ದುಲೀಪ್ ಟ್ರೋಫಿ: ಕರುಣ್ ಇಶಾನ್ ಮೇಲೆ ಕಣ್ಣು

Published:
Updated:
Prajavani

ಬೆಂಗಳೂರು:  ಹೋದ ಮೂರು ದಿನಗಳಿಂದ ಮಧ್ಯಾಹ್ನದ ಮಳೆಯಲ್ಲಿ ತೊಯ್ಯುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಿಂದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಪ್ರಿಯಾಂಕ್ ಪಾಂಚಾಲ್ ನಾಯಕತ್ವದ ಇಂಡಿಯಾ ರೆಡ್ ಮತ್ತು ಫೈಜ್ ಫಜಲ್ ಮುಂದಾಳತ್ವದ ಇಂಡಿಯಾ ಗ್ರೀನ್ ತಂಡಗಳು ಮುಖಾಮುಖಿಯಾಗಲಿವೆ. 2016ರಿಂದ ಈಚೆಗೆ ರೆಡ್ ತಂಡವು ಒಂದು ಬಾರಿ ಚಾಂಪಿಯನ್ ಮತ್ತು ಎರಡು ಸಲ ರನ್ನರ್ಸ್ ಅಪ್ ಆಗಿದೆ. ಅದೇ ಗ್ರೀನ್ ತಂಡವು ಇನ್ನೂ ಒಂದು ಸಲವೂ ಪ್ರಶಸ್ತಿ ಗೆದ್ದಿಲ್ಲ. ಎರಡು ಸಲ ಚಾಂಪಿಯನ್ ಆಗಿದ್ದ ಬ್ಲೂ ತಂಡವು ರೌಂಡ್‌ ರಾಬಿನ್ ಲೀಗ್ ಹಂತದಲ್ಲಿ ಹೊರಬಿದ್ದಿತ್ತು.

ರೆಡ್ ತಂಡದಲ್ಲಿರುವ ಕನ್ನಡಿಗ ಕರುಣ್ ನಾಯರ್ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ. ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ತಂಡದ ವಿಕೆಟ್‌ಕೀಪರ್ ಇಶಾನ್ ಕಿಶನ್ ಕೂಡ ಗಮನ ಸೆಳೆದಿದ್ದಾರೆ. ಆದ್ದರಿಂದ ಇವರಿಬ್ಬರೂ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಭರವಸೆ ಮೂಡಿದೆ.

ಗ್ರೀನ್ ತಂಡದ ಬೌಲರ್ ಧರ್ಮೇಂದ್ರಸಿಂಹ ಜಡೇಜ ಅವರೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡುವ ಸಮರ್ಥರು. ಅಕ್ಷತ್ ರೆಡ್ಡಿ, ಅಕ್ಷಯ್ ವಾಡಕರ್, ಮಯಂಕ್ ಮಾರ್ಕಂಡೆ ಕೂಡ ಉತ್ತಮ ಲಯದಲ್ಲಿದ್ಧಾರೆ. ಆದ್ದರಿಂದ ಮೊದಲ ಬಾರಿ ದುಲೀಪ್ ಟ್ರೋಫಿ ಗೆದ್ದು ಬೀಗುವ ವಿಶ್ವಾಸದಲ್ಲಿ ತಂಡವಿದೆ.

ತಂಡಗಳು:  ಇಂಡಿಯಾ ರೆಡ್: ಪ್ರಿಯಾಂಕ್ ಪಾಂಚಾಲ್ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಅಭಿಮನ್ಯು ಈಶ್ವರನ್, ಅಕ್ಷರ್ ಪಟೇಲ್, ಮಹಿಪಾಲ್ ಲೊಮ್ರೊರ್, ಕರುಣ್ ನಾಯರ್, ಅಕ್ಷಯ್ ವಾಖರೆ, ವರುಣ್ ಆ್ಯರನ್, ಆದಿತ್ಯ ಸರವಟೆ, ಹರಪ್ರೀತ್ ಸಿಂಗ್ ಭಾಟಿಯಾ, ಆವೇಶ್ ಖಾನ್, ಅಂಕಿತ್ ಆರ್. ಖಲ್ಸಿ, ಸಂದೀಪ್ ವಾರಿಯರ್, ಜಯದೇವ್ ಉನದ್ಕತ್.

ಇಂಡಿಯಾ ಗ್ರೀನ್: ಫೈಜ್ ಫಜಲ್ (ನಾಯಕ), ಅಕ್ಷತ್ ರೆಡ್ಡಿ, ಧ್ರುವ್ ಶೋರೆ, ಸಿದ್ಧೇಶ್ ಲಾಡ್, ಧರ್ಮೇಂದ್ರಸಿಂಹ ಜಡೇಜ, ತನ್ವೀರ್ ಉಲ್ ಹಕ್, ಮಿಲಿಂದ್ ಕುಮಾರ್, ಪ್ರಿಯಂ ಗಾರ್ಗ್, ಅಕ್ಷದೀಪ್ ನಾಥ್, ಅಂಕಿತ್ ರಜಪೂತ್, ಅಕ್ಷಯ್ ವಾಡಕರ್ (ವಿಕೆಟ್‌ಕೀಪರ್), ರಾಜೇಶ್ ಮೊಹಾಂತಿ, ಮಯಂಕ್ ಮಾರ್ಕಂಡೆ, ಜಯಂತ್ ಯಾದವ್.

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ

ಆರಂಭ: ಬೆಳಿಗ್ಗೆ 9.30.

Post Comments (+)