ಬೆಂಗಳೂರು: ಅನಂತಪುರದಲ್ಲಿ ನಡೆಯಬೇಕಿದ್ದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭಿಕ ಸುತ್ತಿನ ಪಂದ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಈ ಪಂದ್ಯಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ಭಾಗವಹಿಸುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 5ರಿಂದ ಮೊದಲ ಸುತ್ತಿನ ಪಂದ್ಯಗಳು ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯಬೇಕಿತ್ತು. ಈಗ ಆ ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
‘ಭಾರತ ತಂಡದ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅವರ ಪ್ರಯಾಣ, ವಸತಿ ಸೌಲಭ್ಯಗಳಿಗಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಅವರು ಟೆಸ್ಟ್ ಮಾದರಿಯ ಪಂದ್ಯಗಳನ್ನು ಆಡುವ ಅನುಭವ ಪಡೆಯಲು ಸಾಧ್ಯವಾಗಲಿದೆ. ಇದರ ನಂತರ ಅವರು ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ಮತ್ತು ಬಾಂಗ್ಲಾ ತಂಡಗಳು ಎರಡು ಟೆಸ್ಟ್ ಪಂದ್ಯಗಳನ್ನು ಚೆನ್ನೈ (ಸೆ. 19) ಮತ್ತು ಕಾನ್ಪುರ (ಸೆ 27) ನಗರಗಳಲ್ಲಿ ಆಡಲಿವೆ.
ಬೆಂಗಳೂರಿನಿಂದ ಅನಂತಪುರವು 230 ಕಿ.ಮೀ ದೂರದಲ್ಲಿದೆ. ಉಭಯ ನಗರಗಳ ನಡುವಣ ವಿಮಾನಯಾನ ಸೌಲಭ್ಯವಿಲ್ಲ.
ಈ ಟೂರ್ನಿಯಲ್ಲಿ ತಾವು ಆಡುವ ಕುರಿತು ನಿರ್ಧರಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಿವೇಚನೆಗೆ ಬಿಡಲಾಗಿದೆ. ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್ ಮತ್ತಿತರರು ಆಡುವ ಸಾಧ್ಯತೆ ಇದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ರಿಯಾಯಿತಿ ನೀಡಲಾಗಿದೆ.
ರಿಷಭ್ ಪಂತ್ ಅವರಿಗೂ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲು ಆಯ್ಕೆ ಸಮಿತಿಯು ಸೂಚಿಸುವ ಸಾಧ್ಯತೆ ಇದೆ. ಒಂದೊಮ್ಮೆ ಪಂತ್ ಆಡಲು ಕಣಕ್ಕಿಳಿದರೆ 2022ರ ನಂತರ ಇದು ಅವರಿಗೆ ಮೊದಲ ಕೆಂಪು ಚೆಂಡಿನ ಮಾದರಿಯ ಟೂರ್ನಿಯಾಗಲಿದೆ.
ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಬೌಲರ್ ಮೊಹಮ್ಮದ್ ಶಮಿ ಅವರು ಟೂರ್ನಿಯಲ್ಲಿ ಆಡುವುದಿಲ್ಲ. ಟೆಸ್ಟ್ ಸರಣಿಗಾಗಿ ಪೂರ್ವಸಿದ್ಧತಾ ಶಿಬಿರವು ಚೆನ್ನೈನಲ್ಲಿ ನಡೆಯಲಿದ್ದು, ದಿನಾಂಕಗಳು ನಿಗದಿಯಾಗಿಲ್ಲ. ಆದ್ದರಿಂದ ಶಿಬಿರದ ದಿನಾಂಕಗಳು ನಿರ್ಧಾರವಾದ ನಂತರವಷ್ಠೇ ಪ್ರಮುಖ ಆಟಗಾರರು ದುಲೀಪ್ ಟ್ರೋಫಿ ಆಡುವ ಬಗ್ಗೆ ನಿರ್ಧಾರ ಕೈಗೊಳ್ಳುವರು ಎಂದೂ ಹೇಳಲಾಗುತ್ತಿದೆ.
ಸೀನಿಯರ್ ಆಟಗಾರರಿಗೆ ಅಂತರರಾಷ್ಟ್ರೀಯ ಟೂರ್ನಿಗಳು ಇಲ್ಲದ ಸಂದರ್ಭದಲ್ಲಿ ದೇಶಿ ಟೂರ್ನಿಗಳಲ್ಲಿ ಆಡಬೇಕು ಎಂದು ಬಿಸಿಸಿಐ ಈಚೆಗೆ ಹೇಳಿದೆ. ಆದ್ದರಿಂದ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ (ಮುಂಬೈ) ಮತ್ತು ವಿಕೆಟ್‌ಕೀಪರ್ ಇಶಾನ್ ಕಿಶನ್ (ಜಾರ್ಖಂಡ್) ಅವರು ಇದೇ 15ರಿಂದ ಆರಂಭವಾಗಲಿರುವ ಬುಚಿಬಾಬು ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.