ಶುಕ್ರವಾರ, ಆಗಸ್ಟ್ 19, 2022
22 °C

19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ವೇಳೆ ಭೂಕಂಪ

ಪಿಟಿಐ Updated:

ಅಕ್ಷರ ಗಾತ್ರ : | |

ಪೋರ್ಟ್‌ ಆಫ್ ಸ್ಪೇನ್‌: ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಜಿಂಬಾಬ್ವೆ ಮತ್ತು ಐರ್ಲೆಂಡ್‌ ನಡುವಿನ ಪಂದ್ಯದ ಸಂದರ್ಭದಲ್ಲಿ ಭೂಕಂಪ ಸಂಭವಿಸಿ ಕೆಲಕಾಲ ಆತಂಕ ನಿರ್ಮಾಣವಾಯಿತು.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಪಂದ್ಯ ನಡೆಯುತ್ತಿತ್ತು. ಭೂಕಂಪವಾದುದು ಆಟಗಾರರ ಗಮನಕ್ಕೆ ಬರಲಿಲ್ಲ. ಆದ್ದರಿಂದ ಆಟಕ್ಕೆ ಧಕ್ಕೆಯಾಗಲಿಲ್ಲ. ಆದರೆ ವೀಕ್ಷಕ ವಿವರಣೆಕಾರರ ಬಾಕ್ಸ್‌ ಅಲುಗಾಡಿತು. ಭೂಕಂಪವು ರಿಕ್ಟರ್ ಮಾಪನದಲ್ಲಿ 5.2 ಮ್ಯಾಗ್ನಿಟ್ಯೂಡ್ ದಾಖಲಾಗಿದೆ. ಸುಮಾರು 20 ಸೆಕೆಂಡುಗಳ ಕಾಲ ಕಂಪನ ಅನುಭವವಾಗಿತ್ತು.

'ನಮಗೀಗ ಭೂಕಂಪದ ಅನುಭವ ಆಗುತ್ತಿದೆ. ನಾವು ಕುಳಿತಿರುವ ಬಾಕ್ಸ್ ಆಲುಗಾಡುತ್ತಿದೆ. ನಮ್ಮ ಹಿಂದೆ, ಸಮೀಪದಲ್ಲೇ ರೈಲು ಸಂಚರಿಸಿದಂತೆ ಆಗುತ್ತಿದೆ. ನಮಗೆ ಮಾತ್ರವಲ್ಲ, ಕ್ವೀನ್ಸ್ ಪಾರ್ಕ್‌ ಓವಲ್‌ನ ಮಾಧ್ಯಮ ಕೇಂದ್ರವಿಡೀ ಅಲುಗಾಡುತ್ತಿದೆ’ ಎಂದು ವೀಕ್ಷಕ ವಿವರಣೆ ನೀಡುತ್ತಿದ್ದ ಆ್ಯಂಡ್ರ್ಯೂ ಲಿಯೊನಾರ್ಡ್‌ ‘ಲೈವ್‌‘ ಆಗಿ ಹೇಳಿದರು. 

ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆರಿಸಿಕೊಂಡಿತ್ತು. ಆರನೇ ಓವರ್‌ನ ಐದನೇ ಎಸೆತವನ್ನು ಐರ್ಲೆಂಡ್ ಸ್ಪಿನ್ನರ್ ಮ್ಯಾಥ್ಯೂ ಹಂಫ್ರೆಯಸ್‌ ಹಾಕಿದ್ದರು. ಅದನ್ನು ಬ್ರಯಾನ್ ಬೆನೆಟ್ ಎದುರಿಸಿದ್ದರು. ಆದರೆ ಇದನ್ನು ಸೆರೆಹಿಡಿಬೇಕಾಗಿದ್ದ ಕ್ಯಾಮೆರಾ ಅಲುಗಾಡಿತು. ಬೆನೆಟ್‌ ರಕ್ಷಣಾತ್ಮಕ ಆಟವಾಡಿ ಚೆಂಡನ್ನು ಮಿಡ್‌ ಆಫ್ ಕಡೆಗೆ ತಳ್ಳಿದರು. ಮುಂದಿನ ಎಸೆತದಲ್ಲಿ ಬೌಂಡರಿ ಸಿಡಿಸಿದರು. 

167 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಐರ್ಲೆಂಡ್‌ ಆರಂಭಿಕ ಬ್ಯಾಟರ್‌ ಜ್ಯಾಕ್ ಡಿಕ್ಸನ್ (78; 88 ಎಸೆತ, 8 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ, ನಾಲ್ಕನೇ ಕ್ರಮಾಂಕದ ಟಿಮ್ ಟೆಕ್ಟರ್‌ (76; 94 ಎ, 8 ಬೌಂ, 1 ಎ) ಅವರ ಅಮೋಘ ಆಟದ ಬಲದಿಂದ ಎಂಟು ವಿಕೆಟ್‌ಗಳಿಂದ ಜಯ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 48.4 ಓವರ್‌ಗಳಲ್ಲಿ 166 (ಸ್ಟೀವನ್‌ ಸಾಲ್ 24, ಬ್ರಯಾನ್ ಬೆನೆಟ್‌ 37, ಡೇವಿಡ್ ಬೆನೆಟ್‌ 35; ಮ್ಯಾಥ್ಯೂ ಹಂಫ್ರೆಯಸ್ 32ಕ್ಕೆ3; ಮುಜಮಿಲ್ ಶೆರ್ಜಾದ್ 20ಕ್ಕೆ5, ಜೆಮಿ ಫಾರ್ಬ್ಸ್‌ 29ಕ್ಕೆ1); ಐರ್ಲೆಂಡ್‌: 32 ಓವರ್‌ಗಳಲ್ಲಿ 2ಕ್ಕೆ169 (ಜ್ಯಾಕ್ ಡಿಕ್ಸನ್ ಔಟಾಗದೆ 78, ಟಿಮ್ ಟೆಕ್ಟರ್ ಔಟಾಗದೆ 76)

ಸೆಮಿಫೈನಲ್‌ಗೆ ಭಾರತ ತಂಡ
ಕೂಲಿಜ್‌: ಎಡಗೈ ವೇಗಿ ರವಿಕುಮಾರ್ (14ಕ್ಕೆ 3) ಅವರ ಅಮೋಘ ಬೌಲಿಂಗ್ ಹಾಗೂ ಅಂಗರಿಕ್ಷ್ ರಘುವಂಶಿ (44) ಅವರ ಸೊಗಸಾದ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಮಣಿಸಿ  ಸೆಮಿಫೈನಲ್‌ ತಲುಪಿತು. ಶನಿವಾರ ರಾತ್ರಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಭಾರತ ತಂಡವು ಬಾಂಗ್ಲಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 38ನೇ ಓವರ್‌ನಲ್ಲಿ 111 ರನ್‌ಗಳಿಗೆ ಕಟ್ಟಿಹಾಕಿತು. ಬಾಂಗ್ಲಾ ಪರ ಮೆಹರಾಬ್‌ (30), ಐಕ್ ಮೊಲ್ಲಾ (17) ಅಲ್ಪ ಪ್ರತಿರೋಧ ತೋರಿದರು. 

ಭಾರತದ ಪರ ಸ್ಪಿನ್ನರ್ ವಿಕಿ ಓಸ್ವಾಲ್ (25ಕ್ಕೆ 2) ಕೂಡ ಮಿಂಚಿದರು. ಭಾರತ 5 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಶೇಖ್ ರಶೀದ್‌ (26) ಮತ್ತು ಯಶ್ ಧುಳ್‌ (ಔಟಾಗದೆ 20) ಕಾಣಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು