ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್‌ ಸರಣಿ ಬಳಿಕ ಅಲ್ಪ ವಿರಾಮ: ಇಂಗ್ಲೆಂಡ್ ತಂಡದ ಕೋಚ್ ಸಿಲ್ವರ್‌ವುಡ್ ನಿರ್ಧಾರ

ಬಿಡುವಿಲ್ಲದ ಕ್ರಿಕೆಟ್‌ ವೇಳಾಪಟ್ಟಿ
Last Updated 15 ಮೇ 2021, 6:22 IST
ಅಕ್ಷರ ಗಾತ್ರ

ಲಂಡನ್‌: ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲಿ ಎರಡು ಟೆಸ್ಟ್‌ಗಳ ಸರಣಿಯ ನಂತರ ವಿರಾಮ ಪಡೆಯುವುದಾಗಿ ಇಂಗ್ಲೆಂಡ್ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರ ಕ್ರಿಸ್‌ ಸಿಲ್ವರ್‌ವುಡ್‌ ತಿಳಿಸಿದ್ದಾರೆ.

ಪ್ರವಾಸಿ ‌ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಜೂನ್‌ ಅಂತ್ಯದಲ್ಲಿ ನಡೆಯುವ ಏಕದಿನ ಸರಣಿಯ ತರಬೇತಿ ಹೊಣೆಯನ್ನು ತಂಡದ ಸಹಾಯಕ ತರಬೇತುದಾರರು ವಹಿಸಿಕೊಳ್ಳಬೇಕಾಗಿದೆ.

ಪ್ರವಾಸಿ ಭಾರತ ತಂಡದ ವಿರುದ್ಧದ ದೀರ್ಘ ಟೆಸ್ಟ್ ಸರಣಿಗೆ ತಾಜಾತನ ಪಡೆದುಕೊಳ್ಳಲು ಈ ವಿರಾಮಕ್ಕೆ ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ಸಿಲ್ವರ್‌ವುಡ್‌ ಅವರ ಅನುಪಸ್ಥಿತಿಯಲ್ಲಿ ಸಹಾಯಕ ಸಿಬ್ಬಂದಿ ಹಾಗೂ ಮಾಜಿ ಟೆಸ್ಟ್‌ ಆಟಗಾರರೂ ಆಗಿರುವ ಪಾಲ್‌ ಕಾಲಿಂಗ್‌ವುಡ್‌ ಮತ್ತು ಗ್ರಹಾಂ ಥೋರ್ಪ್‌ ಉಸ್ತುವಾರಿ ವಹಿಸಲಿದ್ದಾರೆ.

‘ನಾನು ಪೂರ್ಣವಾಗಿ ತೊಡಗಿಸಿಕೊಳ್ಳದಿದ್ದರೆ ಅದು ಆಟಗಾರರಿಗೆ ಅನ್ಯಾಯ ಮಾಡಿದಂತೆ. ಅಂಥ ಮನಸ್ಥಿತಿಯಲ್ಲಿ ತಂಡದ ಜೊತೆ ಇರುವುದೂ ಉಚಿತವಲ್ಲ’ ಎಂದು ಸಿಲ್ವರ್‌ವುಡ್‌ ಹೇಳಿದ್ದಾಗಿ ಬ್ರಿಟಿಷ್‌ ಮಾಧ್ಯಮಗಳು ವರದಿ ಮಾಡಿವೆ.


ಬಿಡುವಿಲ್ಲದ ಸರಣಿ:

ಇಂಗ್ಲೆಂಡ್‌ ವಿರುದ್ಧ ಶ್ರೀಲಂಕಾ ತಂಡದ ಸೀಮಿತ ಓವರುಗಳ ಸರಣಿ ಜೂನ್‌ 23ರಂದು ಆರಂಭವಾಗಲಿದೆ. ಮೊದಲು ಮೂರು ಟಿ–20 ಪಂದ್ಯ ಸರಣಿ ನಡೆಯಲಿದ್ದು, ಅದರ ಬೆನ್ನಿಗೆ ಮೂರು ಏಕದಿನ ಪಂದ್ಯಗಳ ಸರಣಿ ನಿಗದಿಯಾಗಿದೆ. ಜುಲೈ 16 ರಿಂದ ಪಾಕಿಸ್ತಾನ ವಿರುದ್ಧ ತವರಿನಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಅಷ್ಟೇ ಟಿ–20 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್‌ ಆಡಬೇಕಿದೆ.

ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್‌ 4ರಂದು ಆರಂಭವಾಗಲಿದ್ದು, ಸಿಲ್ವರ್‌ವುಡ್‌ ಆ ವೇಳೆ ತಂಡದ ಕೋಚಿಂಗ್‌ ಹೊಣೆ ಮರಳಿ ವಹಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್‌, ಈ ಸರಣಿಗಳ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸ ಮಾಡಲಿದ್ದು, ಅಕ್ಟೋಬರ್‌ನಲ್ಲಿ ಟಿ–20 ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿದೆ. ಇದಾದ ನಂತರ ಜೋ ರೂಟ್‌ ಅವರ ಟೆಸ್ಟ್‌ ಬಳಗ ಆ್ಯಷಸ್‌ ಸರಣಿಯಲ್ಲಿ ಆಡಲು ಕಾಂಗರೂಗಳ ನಾಡಿಗೆ ಪಯಣಿಸಲಿದೆ. ಮುಂದಿನ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ತಂಡಕ್ಕೆ, ವೆಸ್ಟ್‌ ಇಂಡೀಸ್‌ ಪ್ರವಾಸವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT