ಬುಧವಾರ, ನವೆಂಬರ್ 20, 2019
20 °C
3–2ರಲ್ಲಿ ಸರಣಿ ಜಯ; ಮಿಂಚಿದ ಬೇಸ್ಟೊ, ಜೋರ್ಡಾನ್‌

ನ್ಯೂಜಿಲೆಂಡ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಇಂಗ್ಲೆಂಡ್‌

Published:
Updated:

ಆಕ್ಲೆಂಡ್‌: ಸೂಪರ್‌ ಓವರ್‌ವರೆಗೆ ಬೆಳೆದ ರೋಮಾಂಚಕಾರಿ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ, ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿತು. ಮಳೆಯ ಆಟವನ್ನೂ ಕಂಡಿದ್ದ ಈ ಐದನೇ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯನ್ನು 3– 2 ರಿಂದ ಗೆದ್ದುಕೊಂಡಿತು.

ಭಾನುವಾರ ನಡೆದ ಈ ಪಂದ್ಯ ಕೆಲವೇ ತಿಂಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ನೆನಪಿಸುವಂತಿತ್ತು. ಈ ಬಾರಿ ಚುಟುಕು ಕ್ರಿಕೆಟ್‌ನ ಸೂಪರ್‌ ಓವರ್‌ನಲ್ಲಿ ಇಂಗ್ಲೆಂಡ್‌ ಮೇಲುಗೈ ಸ್ಪಷ್ಟವಾಗಿತ್ತು.

ಮಳೆಯ ಕಾರಣ ತಲಾ 11 ಓವರುಗಳಿಗೆ ಸೀಮಿತಗೊಂಡಿದ್ದ ಪಂದ್ಯದಲ್ಲಿ ಟಾಸ್‌ ಸೋತಿದ್ದ ನ್ಯೂಜಿಲೆಂಡ್‌ ಮೊದಲು ಆಡಿ 5 ವಿಕೆಟ್‌ಗೆ 146 ರನ್‌ ಹೊಡೆಯಿತು. ಇಂಗ್ಲೆಂಡ್‌ ಕೂಡ ಇಷ್ಟೇ ಓವರುಗಳಲ್ಲಿ 7 ವಿಕೆಟ್‌ಗೆ 146 ರನ್‌ ಬಾರಿಸಿತು.

ಜಾನಿ ಬೇಸ್ಟೊ ಮತ್ತು ನಾಯಕ ಇಯಾನ್‌ ಮಾರ್ಗನ್‌ ಜೋಡಿ ಟಿಮ್‌ ಸೌಥಿ ಮಾಡಿದ ಸೂಪರ್‌ ಓವರ್‌ನಲ್ಲಿ 17 ರನ್‌ ಬಾಚಿತು. ನ್ಯೂಜಿಲೆಂಡ್‌, ಕ್ರಿಸ್‌ ಜೋರ್ಡಾನ್‌ ಅವರ ಸೂಪರ್‌ ಓವರ್‌ನಲ್ಲಿ ಬರೇ ಎಂಟು ರನ್‌ ಗಳಿಸಲು ಶಕ್ತವಾಯಿತು.

ಇದಕ್ಕೆ ಮೊದಲು, ಮಾರ್ಟಿನ್‌ ಗಪ್ಟಿಲ್‌ ಕೇವಲ 20 ಎಸೆತಗಳಲ್ಲಿ 50 ರನ್‌(5 ಸಿಕ್ಸರ್‌, 3 ಬೌಂಡರಿ) ಚಚ್ಚಿದರೆ, ಮನ್ರೊ ಮಿಂಚಿನ 46 (21 ಎಸೆತ) ರನ್ ಗಳಿಸಿದರು. ಆತಿಥೇಯರು ಏಳನೇ ಓವರ್‌ನಲ್ಲೇ ನೂರರ ಗಡಿ ದಾಟಿಸಿದ್ದರು.

ಪಂದ್ಯದ ಆಟಗಾರನಾದ ಜಾನಿ ಬೇಸ್ಟೊ ಕೇವಲ 18 ಎಸೆತಗಳಲ್ಲಿ 47 ರನ್‌ (2ಸಿಕ್ಸರ್‌, 5 ಬೌಂಡರಿ) ಸೂರೆ ಮಾಡಿ ಇಂಗ್ಲೆಂಡ್‌ಗೆ ಉತ್ತಮ ಆರಂಭ ಒದಗಿಸಿದರು. ಆದರೆ ಕ್ರಿಸ್‌ ಜೋರ್ಡಾನ್‌ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ (ಜಿಮ್ಮಿ ನೀಶಾಮ್‌ ಬೌಲಿಂಗ್‌) ಒಂದು ಸಿಕ್ಸರ್‌, ಒಂದು ಬೌಂಡರಿ ಬಾರಿಸಿ ತಂಡ, ಸ್ಕೋರ್‌ ಸಮಾಡಿಕೊಳ್ಳಲು ಕಾರಣರಾದರು. ನಂತರ ಸೂಪರ್‌ ಓವರ್‌ ಬೌಲ್‌ ಮಾಡಿ ಎದುರಾಳಿಗಳಿಗೆ ಕೇವಲ ಒಂದು ಬೌಂಡರಿ ನೀಡಿದರು.

ಸ್ಕೋರುಗಳು
ನ್ಯೂಜಿಲೆಂಡ್‌
11 ಓವರುಗಳಲ್ಲಿ 5 ವಿಕೆಟ್‌ಗೆ 146 (ಮಾರ್ಟಿನ್‌ ಗಪ್ಟಿಲ್‌ 50, ಕಾಲಿನ್‌ ಮನ್ರೊ 46, ಟಿ.ಎಲ್‌.ಸೀಫೆರ್ಟ್‌ 39)
ಇಂಗ್ಲೆಂಡ್‌: 11 ಓವರುಗಳಲ್ಲಿ 7 ವಿಕೆಟ್‌ಗೆ 146 (ಜಾನಿ ಬೇಸ್ಟೊ 47, ಸ್ಯಾಮ್‌ ಕರನ್‌ 24; ಬೌಲ್ಟ್‌ 35ಕ್ಕೆ2, ಸ್ಯಾಂಟ್ನರ್‌ 20ಕ್ಕೆ2, ನೀಶಮ್‌ 25ಕ್ಕೆ2).

ಪ್ರತಿಕ್ರಿಯಿಸಿ (+)