ಮಂಗಳವಾರ, ಜನವರಿ 28, 2020
25 °C

ಗೋರಿಯೊಳಗಿನ ಅಜ್ಜ ಬೆಟ್ಟಿಂಗ್ ಗೆದ್ದ ಕಥೆ!

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್ : ದಕ್ಷಿಣ ಆಫ್ರಿಕಾದ ಎದುರಿನ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಡಾಮ್ನಿಕ್ (ಡಾಮ್) ಸಿಬ್ಲಿ ಶತಕ ಬಾರಿಸಿದರು. ಅವರು ಇಂತಹದೊಂದು ಸಾಧನೆ ಮಾಡಲಿರೆಂದು ಸುಮಾರು ಒಂಬತ್ತು ವರ್ಷಗಳ ಹಿಂದೆಯೇ ಸಿಬ್ಲಿಯ ಅಜ್ಜ ಕೆನೆತ್ ಮೆಕೆಂಜಿ ಪಂಥ ಕಟ್ಟಿದ್ದರು.

ಆದರೆ 2011ರಲ್ಲಿ ಕೆನೆತ್ ತೀರಿಹೋದರು. ತಮ್ಮ ನಿಧನಕ್ಕೂ ನಾಲ್ಕು ತಿಂಗಳುಗಳಿಗಿಂತ ಮೊದಲು ಅವರು ಎರಡು ಬೆಟ್‌ ಗಳನ್ನು(1ಕ್ಕೆ150 ಮತ್ತು 1ಕ್ಕೆ 66) ಇದೀಗ ಡಾಮ್ ಅವರ ಕುಟುಂಬಕ್ಕೆ ಬೆಟ್ಟಿಂಗ್‌ನಲ್ಲಿ ಗೆದ್ದ  ಸುಮಾರು ₹ 20 ಲಕ್ಷ ಕೈಸೇರಿದೆ!

ಕೆನೆತ್ ಅವರು ಪಂಥ ಕಟ್ಟಿದಾಗ ಡಾಮ್ 16 ವರ್ಷದವರಾಗಿದ್ದರು. ತಮ್ಮ ಮೊಮ್ಮಗ  ಒಂದು ದಿನ ದೇಶದ ತಂಡಕ್ಕೆ ಆಡುತ್ತಾನೆ. ದೊಡ್ಡ ಸಾಧನೆ ಮಾಡುತ್ತಾನೆ ಎಂದು ಊಹಿಸಿದ್ದರು. ಆದರೆ ಇದ್ಯಾವುದೂ ಸಿಬ್ಲೆ ಕುಟುಂಬಕ್ಕೆ ಗೊತ್ತಿರಲಿಲ್ಲ. ಕೆನೆತ್ ಅವರ ಮಗಳು ಕ್ರಿಸ್ಟಿನ್ ಸಿಬ್ಲೆ (ಡಾಮ್ ತಾಯಿ) ಅವರು ಈಚೆಗೆ ಸರ್ರೆಯಲ್ಲಿರುವ ವಿಲಿಯಂ ಹಿಲ್ ಬೆಟ್ಟಿಂಗ್ ಶಾಪ್‌ಗೆ ಭೇಟಿ ನೀಡಿದಾಗ ಈ ಮಾಹಿತಿ ಸಿಕ್ಕಿತು. ಅವರೂ ಆಶ್ಚರ್ಯಚಕಿತರಾದರು.

‘ಅವರು ಇದ್ದಿದ್ದರೆ ಮೊಮ್ಮಗನ ಸಾಧನೆಗೆ ಅಪಾರವಾಗಿ ಸಂಭ್ರಮಿಸುತ್ತಿದ್ದರು. ಈಗ ಇನ್ನೂ ದೊಡ್ಡ ಬಾಜಿ ಕಟ್ಟಿರುತ್ತಿದ್ದರು. ಆಗಲೇ ಡಾಮ್‌ ಪ್ರತಿಭೆಯನ್ನು ಗುರುತಿಸಿದ್ದ ಅವರ ದೂರದೃಷ್ಟಿ ಮತ್ತು ಕ್ರಿಕೆಟ್‌ ಅನುಭವದ ಆಳದ ಬಗ್ಗೆ ನಮಗೆ ಹೆಮ್ಮೆಯೆನಿಸುತ್ತದೆ’ ಎಂದು ಕ್ರಿಸ್ಟಿನ್ ‘ಟೈಮ್ಸ್‌’ಗೆ ಹೇಳಿದ್ದಾರೆ.

‘ಡಾಮ್ ಐದು ವಯಸ್ಸಿನವರಾಗಿದ್ದಾಗಲೇ ದೇಶಕ್ಕೆ ಆಡುವ ಹುಡುಗ ಎಂದು ಅಪ್ಪ (ಕೆನೆತ್) ಹೇಳುತ್ತಿದ್ದರು. ಏಳನೇ ವಯಸ್ಸಿಗೇ ಡಾಮ್ ಒಂಬತ್ತು ವರ್ಷದೊಳಗಿನವರ ತಂಡಕ್ಕೆ ಆಡಿದ್ದ’ ಎಂದು ಕ್ರಿಸ್ಟಿನ್ ನೆನಪಿಸಿಕೊಂಡರು. 

‘ಸಮಾಧಿಯೊಳಗೆ ಇರುವವರೊಬ್ಬರು ಬಾಜಿ ಗೆದ್ದಿದ್ದನ್ನು ಇದೇ ಮೊದಲ ಸಲ ನೋಡುತ್ತಿದ್ದೇನೆ. ಇದೊಂದು ಊಹಿಸಲೂ ಸಾಧ್ಯವಾಗದಂತಹ ಘಟನೆ’ ಎಂದು ಬೆಟ್ಟಿಂಗ್ ಶಾಪ್‌ನ ಕ್ಯಾಷಿಯರ್ ಟೈಲರ್ ಗೊಲೆಡ್ಜ್‌ ಹೇಳಿದ್ದಾರೆ.

ಸಿಬ್ಲಿ ಹೋದ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಕೇಪ್‌ಟೌನ್‌ನಲ್ಲಿ ಮಂಗಳವಾರ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಿಬ್ಲಿ (ಅಜೇಯ 133;‌ 311ಎಸೆತ, 11ಬೌಂಡರಿ, 1ಸಿಕ್ಸರ್) ಶತಕ ಬಾರಿಸಿದರು. ಇಂಗ್ಲೆಂಡ್ ತಂಡವು 189 ರನ್‌ಗಳಿಂದ ಗೆದ್ದಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು