ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Cricket World Cup 2023: ಚಾಂಪಿಯನ್‌ ಇಂಗ್ಲೆಂಡ್‌ಗೆ ಲಂಕಾ ಸವಾಲು

Published 25 ಅಕ್ಟೋಬರ್ 2023, 19:36 IST
Last Updated 25 ಅಕ್ಟೋಬರ್ 2023, 19:36 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಮುಖಾಮುಖಿಯಾಗಲಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳಲ್ಲಿ ಹಲವು ಸಾಮ್ಯತೆಗಳು ಇವೆ.

ಏಕದಿನ ಕ್ರಿಕಟ್ ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ತಲಾ ಒಂದು ಸಲ ಚಾಂಪಿಯನ್ ಆಗಿವೆ. ಈ ಟೂರ್ನಿಯಲ್ಲಿ ಉಭಯ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿವೆ. ತಲಾ ಒಂದು ಪಂದ್ಯ ಗೆದ್ದು ಉಳಿದಿದ್ದರಲ್ಲಿ ಸೋತಿವೆ. ಎರಡೂ ತಂಡಗಳಿಗೂ ವಿಕೆಟ್‌ಕೀಪರ್‌ಗಳೇ ನಾಯಕರಾಗಿದ್ದಾರೆ. ಆದರೆ, ಅಂಕಪಟ್ಟಿಯಲ್ಲಿ ಲಂಕಾ ಎಂಟನೇ ಸ್ಥಾನದಲ್ಲಿದೆ. ಅದರ ನಂತರದ ಸ್ಥಾನದಲ್ಲಿ ಇಂಗ್ಲೆಂಡ್ ಇದೆ.

ಆದರೆ ಈ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ಕನಸು ಜೀವಂತವಾಗಿ ಉಳಿಯಬೇಕಾದರೆ ಉಭಯ ತಂಡಗಳೂ ತಮ್ಮ ಪಾಲಿನ ಇನ್ನುಳಿದ ಪಂದ್ಯಗಳಲ್ಲಿ ಜಯಿಸುವ ಒತ್ತಡದಲ್ಲಿವೆ. ಆದರೆ ಇಲ್ಲಿ ಸೋತರೆ ಮುಂದಿನ ಹಾದಿ ಕಠಿಣವಾಗಲಿದೆ. ಆದ್ದರಿಂದ ಈ ಪಂದ್ಯವು ಕುತೂಹಲ ಕೆರಳಿಸಿದೆ.

ಇಂಗ್ಲೆಂಡ್  ತಂಡವು ಈ ಟೂರ್ನಿಯಲ್ಲಿ ಅಫ್ಗಾನಿಸ್ತಾನದ ಎದುರು ಕೂಡ ಆಘಾತ ಅನುಭವಿಸಿದೆ. ಬಾಂಗ್ಲಾದೇಶದ ವಿರುದ್ಧ ಗೆದ್ದಿತ್ತು. ಆದರೆ, ಬಲಿಷ್ಠ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎದುರು ದೊಡ್ಡ ಅಂತರದ ಸೋಲುಗಳನ್ನು ಅನುಭವಿಸಿತ್ತು.

‌ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್‌ ಬೌಲರ್‌ಗಳ ಆಟ ಸತ್ವರಹಿತವಾಗಿತ್ತು. ರೀಸ್ ಟಾಪ್ಲಿ ಮೂರು, ಗಸ್ ಅಟ್ಕಿನ್ಸನ್ ಮತ್ತು ಆದಿಲ್ ರಶೀದ್ ತಲಾ ಎರಡು ವಿಕೆಟ್ ಗಳಿಸಿದ್ದರು. ಆದರೆ ಬಹಳಷ್ಟು ರನ್‌ಗಳನ್ನು ಕೊಟ್ಟಿದ್ದರು. ಅದರಲ್ಲೂ ಅನುಭವಿ ಮಾರ್ಕ್‌ ವುಡ್ ಮತ್ತು ಟಾಪ್ಲಿ ಅವರಿಬ್ಬರೂ 10ರ ಸರಾಸರಿಯಲ್ಲಿ ರನ್‌ ಕೊಟ್ಟಿದ್ದರು.

ಬ್ಯಾಟಿಂಗ್‌ನಲ್ಲಿಯೂ ಅನುಭವಿ ಆಟಗಾರರಾದ  ಜೋ ರೂಟ್, ಜಾನಿ ಬೆಸ್ಟೊ, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ನಾಯಕ ಬಟ್ಲರ್, ಮಲಾನ್ ಅವರು ತಲಾ 20 ರನ್‌ಗಳನ್ನೂ ಗಳಿಸಲಿಲ್ಲ. ಆದರೆ, ಕೆಳಕ್ರಮಾಂಕದಲ್ಲಿ ವುಡ್ ಮತ್ತು ಅಟ್ಕಿನ್ಸನ್ ಅವರು ಒಂದಿಷ್ಟು ರನ್‌ಗಳನ್ನು ಹೊಡೆದು ತಂಡದ ಸೋಲಿನ ಅಂತರವನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದರು. ಆದರೂ ತಂಡವು 229 ರನ್‌ಗಳಿಂದ ಸೋತಿತ್ತು.

ಶ್ರೀಲಂಕಾ ತಂಡವು ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿತ್ತು. ಕಳೆದ ಹಣಾಹಣಿಯಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಪ್ರಯಾಸದ ಜಯ ಸಾಧಿಸಿತ್ತು. ಆದರೆ ಎಚ್ಚರಿಕೆಯ ಆಟದ  ಮೂಲಕ ತಂಡವು ಎಲ್ಲ ವಿಭಾಗಗಳಲ್ಲಿಯೂ ಸಮಾಧಾನಕರ ಪ್ರದರ್ಶನ ನೀಡಿತ್ತು.

ತಂಡದ ಬೌಲರ್‌ಗಳಾದ ದಿಲ್ಶಾನ್ ಮಧುಶಂಕಾ ಮತ್ತು ರಜಿತಾ ಅವರು ಚೇತೋಹಾರಿ ಆಟವಾಡಿದ್ದರು.  ಆರಂಭಿಕ ಪಥುಮ್ ನಿಸಾಂಕ, ಸದೀರ ಸಮರವಿಕ್ರಮ ಅರ್ಧಶತಕಗಳನ್ನು ಹೊಡೆದು ಲಯಕ್ಕೆ ಮರಳಿದ್ದಾರೆ. ನಾಯಕ ಕುಸಲ ಮೆಂಡಿಸ್ ನಾಲ್ಕು ಪಂದ್ಯಗಳಿಂದ 218 ರನ್‌ ಗಳಿಸಿದ್ದಾರೆ. ಒಂದು ಶತಕ ಕೂಡ ಹೊಡೆದಿದ್ದಾರೆ. ಅವರು ಕೂಡ ಇಂಗ್ಲೆಂಡ್ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಬಲ್ಲರು. ಆದ್ದರಿಂದ ಕಾಗದದ ಮೇಲೆ ಇಂಗ್ಲೆಂಡ್ ಎಷ್ಟೇ ಬಲಿಷ್ಠ ಎನಿಸಿದರೂ ಲಂಕಾ ತಂಡವನ್ನು ಎದುರಿಸಲು ತನ್ನ ಸಂಪೂರ್ಣ ಸಾಮರ್ಥ್ಯ ವಿನಿಯೋಗಿಸುವುದು ಅನಿವಾರ್ಯವಾಗಲಿದೆ.

ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಅಭ್ಯಾಸದಲ್ಲಿ ನಿರತರಾಗಿರುವುದು .

ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಅಭ್ಯಾಸದಲ್ಲಿ ನಿರತರಾಗಿರುವುದು .

ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಪಿಚ್ ಹೇಗಿದೆ?

ಒಂದು ವಾರದ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ರನ್‌ಗಳ ಹೊಳೆಯನ್ನೇ ಹರಿಸಿತ್ತು. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರಿಬ್ಬರೂ ಶತಕ ಬಾರಿಸಿದ್ದರು.

ಈ ಪಂದ್ಯಕ್ಕೆ ಸಿದ್ಧವಾಗಿರುವ ಪಿಚ್‌ ಕೂಡ ಏಕಾಗ್ರತೆಯಿಂದ ಆಡುವ ಬ್ಯಾಟರ್‌ಗಳಿಗೆ ಮಣೆ ಹಾಕುವುದು ಖಚಿತ. ಆ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೂ ನೆರವು ಸಿಕ್ಕಿತ್ತು. ಆ್ಯಡಂ ಜಂಪಾ ಮಿಂಚಿದ್ದರು. ಅದೇ ರೀತಿ ಇಂಗ್ಲೆಂಡ್ ತಂಡದಲ್ಲಿ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಇದ್ದಾರೆ. ಲಂಕಾ ತಂಡದಲ್ಲಿ ವೆಲಾಳಗೆ ಇದ್ದಾರೆ. ಅವರಿಗೂ ಮಿಂಚುವ ಅವಕಾಶ ಇಲ್ಲಿ ಸಿಗಬಹುದು.

  ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮತ್ತು ಮೋಯಿನ್ ಆಲಿ ಅಭ್ಯಾಸದಲ್ಲಿ ನಿರತರಾಗಿರುವುದು .

  ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮತ್ತು ಮೋಯಿನ್ ಆಲಿ ಅಭ್ಯಾಸದಲ್ಲಿ ನಿರತರಾಗಿರುವುದು .  

ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಏಕದಿನ ಕ್ರಿಕೆಟ್‌ ಬಲಾಬಲ

ಪಂದ್ಯ;78

ಇಂಗ್ಲೆಂಡ್ ಜಯ; 38

ಶ್ರೀಲಂಕಾ ಜಯ; 36

ಟೈ; 1

ಫಲಿತಾಂಶವಿಲ್ಲ;3

ತಂಡಗಳು

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ–ವಿಕೆಟ್‌ಕೀಪರ್) ಜಾನಿ ಬೆಸ್ಟೊ ಡೇವಿಡ್ ಮಲಾನ್ ಜೋ ರೂಟ್ ಬೆನ್ ಸ್ಟೋಕ್ಸ್ ಹ್ಯಾರಿ ಬ್ರೂಕ್ ಡೇವಿಡ್ ವಿಲಿ ಆದಿಲ್ ರಶೀದ್ ಕ್ರಿಸ್ ವೋಕ್ಸ್ ಗಸ್ ಅಟ್ಕಿನ್ಸನ್ ಮಾರ್ಕ್ ವುಡ್ ಬ್ರೈಡನ್ ಕೇರ್ಸ್ ಮೋಯಿನ್ ಆಲಿ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಯಾಮ್ ಕರನ್.

ಶ್ರೀಲಂಕಾ: ಕುಸಾಲ ಮೆಂಡಿಸ್ (ನಾಯಕ–ವಿಕೆಟ್‌ಕೀಪರ್) ಪಥುಮ್ ನಿಸಾಂಕಾ ಕುಸಾಲ ಪೆರೆರಾ ಸದೀರಾ ಸಮರವಿಕ್ರಮ ಚರಿತಾ ಅಸಲಂಕಾ ಧನಂಜಯ ಡಿಸಿಲ್ವಾ ದುಶಾನ್ ಹೇಮಂತ ಚಾಮಿಕಾ ಕರುಣರತ್ನೆ ಮಹೀಷ ತೀಕ್ಷಣ ಕಸುನ್ ರಜಿತಾ ದಿಲ್ಶಾನ್ ಮಧುಶಂಕಾ ಏಂಜೆಲೊ ಮ್ಯಾಥ್ಯೂಸ್ ದಿಮುತ ಕರುಣರತ್ನೆ ದುಷ್ಮಂತ ಚಮೀರಾ ಲಾಹಿರು ಕುಮಾರ ದುನಿತ್ ವೆಲಾಳಗೆ

ಪಂದ್ಯ ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT