ಬುಧವಾರ, ಮಾರ್ಚ್ 3, 2021
19 °C
ಚೆನ್ನೈನಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್ ಪಂದ್ಯಗಳು

ಕ್ರಿಕೆಟ್‌: ಇಂಗ್ಲೆಂಡ್‌ ತಂಡದ ಅಭ್ಯಾಸಕ್ಕೆ ಮೂರು ದಿನಗಳ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ : ಭಾರತದಲ್ಲಿ ನಡೆಯುವ ಸರಣಿಯಲ್ಲಿ ಪಾಲ್ಗೊಳ್ಳಲು ಆಗಮಿಸಲಿರುವ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಅಭ್ಯಾಸಕ್ಕೆ ಮೂರು ದಿನಗಳು ಸಿಗಲಿವೆ. ಶ್ರೀಲಂಕಾ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಬರಲಿರುವ ಪ್ರವಾಸಿ ತಂಡವು ಫೆಬ್ರುವರಿ 5ರಂದು ಚೆನ್ನೈನಲ್ಲಿ ಆತಿಥೇಯ ತಂಡದ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು, ಅದಕ್ಕೂ ಮೊದಲು ಆರು ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಬೇಕಿದೆ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಚೆನ್ನೈನಲ್ಲಿ ನಿಗದಿಯಾಗಿವೆ. ಇಂಗ್ಲೆಂಡ್ ತಂಡವು ಬುಧವಾರ ಚೆನ್ನೈಗೆ ಆಗಮಿಸಲಿದ್ದು, ಕಠಿಣ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಶ್ರೀಲಂಕಾ ಸರಣಿಯಲ್ಲಿ ಆಡದ ಬೆನ್‌ ಸ್ಟೋಕ್ಸ್, ಜೋಫ್ರಾ ಆರ್ಚರ್‌ ಹಾಗೂ ರೋರಿ ಬರ್ನ್ಸ್‌ ಭಾನುವಾರ ರಾತ್ರಿಯೇ ಭಾರತಕ್ಕೆ ಬಂದಿಳಿದಿದ್ದು, ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ಐದು ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ.

ಆರು ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಎಲ್ಲ ಆಟಗಾರರು ಮೂರು ಬಾರಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಇಂಗ್ಲೆಂಡ್ ಆಟಗಾರರ ಅಭ್ಯಾಸಕ್ಕೆ ಶ್ರೀಲಂಕಾದಲ್ಲಿ ಎರಡು ದಿನಗಳು ಮಾತ್ರ ಸಿಕ್ಕಿದ್ದವು. ಕೋವಿಡ್‌ ಪರೀಕ್ಷೆಯಲ್ಲಿ ಮೊಯಿನ್ ಅಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು.

ಕೋವಿಡ್ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಲಿದೆ. ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಯೋಚಿಸುತ್ತಿರುವ ಬಿಸಿಸಿಐಗೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಸುಗಮವಾಗಿ ನಡೆಸುವುದು ಮುಖ್ಯವಾಗಿದೆ.

ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳು ಫೆಬ್ರುವರಿ 24ರಿಂದ ಅಹ್ಮದಾಬಾದ್‌ನಲ್ಲಿ ನಿಗದಿಯಾಗಿವೆ. ಜೀವ ಸುರಕ್ಷಾ ವಾತಾವರಣದಲ್ಲಿ ನಡೆಯಲಿರುವ ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಮುಖ್ಯವೆನಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಜಯ ಸಾಧಿಸಿರುವ ಭಾರತ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು