ಶನಿವಾರ, ಜುಲೈ 31, 2021
26 °C
ಇಂಗ್ಲೆಂಡ್‌ಗೆ ಅಲ್ಪ ಮುನ್ನಡೆ

ಕೊರೊನೋತ್ತರ ಟೆಸ್ಟ್‌: ಸಿಬ್ಲಿ, ಕ್ರಾವ್ಲಿ ಅರ್ಧಶತಕ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್‌: ಡಾಮ್‌ ಸಿಬ್ಲಿ (50; 164ಎಸೆತ, 4ಬೌಂಡರಿ) ಹಾಗೂ ಜ್ಯಾಕ್‌ ಕ್ರಾವ್ಲಿ (ಬ್ಯಾಟಿಂಗ್‌ 62; 103ಎ, 6ಬೌಂ) ಶನಿವಾರ ರೋಸ್‌ಬೌಲ್‌ ಅಂಗಳದಲ್ಲಿ ಅರ್ಧಶತಕಗಳ ಸಂಭ್ರಮ ಆಚರಿಸಿದರು.

ಇವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡವು ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಲ್ಪ ಮುನ್ನಡೆ ಗಳಿಸಿದೆ.

ವಿಕೆಟ್‌ ನಷ್ಟವಿಲ್ಲದೇ 15ರನ್‌ಗಳಿಂದ ನಾಲ್ಕನೇ ದಿನದಾಟ ಮುಂದುವರಿಸಿರುವ ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ 82 ಓವರ್‌ಗಳಲ್ಲಿ 3 ವಿಕೆಟ್‌ಗೆ 215ರನ್‌ ಕಲೆಹಾಕಿದ್ದಾರೆ. ಇದರೊಂದಿಗೆ 101ರನ್‌ಗಳ ಮುನ್ನಡೆ ತಮ್ಮದಾಗಿಸಿಕೊಂಡಿದ್ದಾರೆ.   

ಮೊದಲ ಇನಿಂಗ್ಸ್‌ನಲ್ಲಿ ವಿಂಡೀಸ್‌ ವೇಗದ ದಾಳಿಯ ಎದುರು ತರಗೆಲೆಗಳ ಹಾಗೆ ಉದುರಿದ್ದ ಆತಿಥೇಯ ಬ್ಯಾಟ್ಸ್‌ಮನ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಮೊದಲ ಅವಧಿಯಲ್ಲಿ ಸಿಬ್ಲಿ ಮತ್ತು ರೋರಿ ಬರ್ನ್ಸ್‌ (42; 104ಎ, 5ಬೌಂ) ವಿಂಡೀಸ್‌ ಬೌಲರ್‌ಗಳನ್ನು ಕಾಡಿದರು. 116 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆಂಗ್ಲರ ನಾಡಿನ ತಂಡ ಈ ಮೊತ್ತಕ್ಕೆ 22ರನ್‌ ಸೇರಿಸುವಷ್ಟರಲ್ಲಿ ಬರ್ನ್ಸ್‌ ವಿಕೆಟ್‌ ಕಳೆದುಕೊಂಡಿತು. ಅರ್ಧಶತಕ ಗಳಿಸಿದ ಬೆನ್ನಲ್ಲೇ ಸಿಬ್ಲಿ ಕೂಡ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಜಿಗುಟು ಆಟಕ್ಕೆ ಮನಸ್ಸು ಮಾಡಿದ್ದ ಜೋ ಡೆನ್ಲಿ (29; 70ಎ, 3ಬೌಂ) ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದ ಸ್ಪಿನ್ನರ್‌ ರಾಸ್ಟನ್‌ ಚೇಸ್‌, ಪ್ರವಾಸಿ ಪಾಳಯವು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದರು. ನಂತರ ಕ್ರಾವ್ಲಿ ಮತ್ತು ಹಂಗಾಮಿ ನಾಯಕ ಸ್ಟೋಕ್ಸ್‌ (ಬ್ಯಾಟಿಂಗ್‌ 20; 52ಎ, 2ಬೌಂ) ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು.

ಸಂಕ್ಷಿ‍‍ಪ್ತ ಸ್ಕೋರ್‌: ಇಂಗ್ಲೆಂಡ್‌; ಮೊದಲ ಇನಿಂಗ್ಸ್‌: 67.3 ಓವರ್‌ಗಳಲ್ಲಿ 204 ಮತ್ತು 82 ಓವರ್‌ಗಳಲ್ಲಿ 3 ವಿಕೆಟ್‌ಗೆ 215 (ಜೋ ಬರ್ನ್ಸ್‌ 42, ಡಾಮ್‌ ಸಿಬ್ಲಿ 50, ಜೋ ಡೆನ್ಲಿ 29, ಜ್ಯಾಕ್‌ ಕ್ರಾವ್ಲಿ ಬ್ಯಾಟಿಂಗ್‌ 62, ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ 20; ರಾಸ್ಟನ್‌ ಚೇಸ್‌ 71ಕ್ಕೆ2, ಶಾನನ್‌ ಗ್ಯಾಬ್ರಿಯಲ್‌ 38ಕ್ಕೆ1). ವೆಸ್ಟ್‌ ಇಂಡೀಸ್‌: ಪ್ರಥಮ ಇನಿಂಗ್ಸ್‌; 102 ಓವರ್‌ಗಳಲ್ಲಿ 318. (ವಿವರ ಅಪೂರ್ಣ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು