ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಮಾಹಿತಿ ಸೋರಿಕೆ: ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್‌ಗೆ ನಿಷೇಧ

ಭಾರತದ ವ್ಯಕ್ತಿಯೊಂದಿಗೆ 15 ತಿಂಗಳು ಸಂಪರ್ಕ
Last Updated 14 ಏಪ್ರಿಲ್ 2021, 15:32 IST
ಅಕ್ಷರ ಗಾತ್ರ

ಪ್ಯಾರಿಸ್‌: ಐಪಿಎಲ್‌ನ ಮಾಹಿತಿ ಸೋರಿಕೆ ಸೇರಿದಂತೆ ಭ್ರಷ್ಟಾಚಾರ ಆರೋಪದ ಮೇಲೆ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬುಧವಾರ ಎಂಟು ವರ್ಷಗಳ ನಿಷೇಧ ಹೇರಿದೆ. ಇಲ್ಲಿನ ಭ್ರಷ್ಟಾಚಾರ ತಡೆ ನ್ಯಾಯಮಂಡಳಿಯಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸ್ಟ್ರೀಕ್ ತಪ್ಪು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ ಐಸಿಸಿ ತಿಳಿಸಿದೆ.

2016ರಿಂದ 2018ರ ವರೆಗೆ ಜಿಂಬಾಬ್ವೆ ತಂಡದ ಕೋಚ್‌ ಆಗಿದ್ದ ಸ್ಟ್ರೀಕ್‌ ಐಸಿಸಿಯ ಭ್ರಷ್ಟಾಚಾರ ತಡೆ ನೀತಿಯ ಐದು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದ್ದು 2029ರ ವರೆಗೆ ನಿಷೇಧ ಜಾರಿಯಲ್ಲಿರುತ್ತದೆ. 47 ವರ್ಷದ ಅವರು 2018ರಲ್ಲಿ ನಡೆದಿದ್ದ ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ ಸರಣಿ, ಜಿಂಬಾಬ್ವೆ–ಅಫ್ಗಾನಿಸ್ಥಾನ ಸರಣಿ, ಐಪಿಎಲ್‌ ಮತ್ತು ಎಪಿಎಲ್‌ ಟೂರ್ನಿಗಳ ಸಂದರ್ಭದಲ್ಲಿ ಮಾಹಿತಿ ಸೋರಿಕೆ ಮಾಡಿದ್ದರು. ರಾಷ್ಟ್ರೀಯ ತಂಡದ ನಾಯಕ ಸೇರಿದಂತೆ ನಾಲ್ವರು ಆಟಗಾರರನ್ನು ಬುಕ್ಕಿಗಳಿಗೆ ಪರಿಚಯ ಮಾಡಿಕೊಟ್ಟ ಆರೋಪವೂ ಅವರ ಮೇಲಿದೆ.

ವಿಚಾರಣೆ ವೇಳೆ ಸಮರ್ಪಕ ಮಾಹಿತಿ ನೀಡದೆ ಅಧಿಕಾರಿಗಳ ಹಾದಿ ತಪ್ಪಿಸುವುದಕ್ಕೂ ಅವರು ಪ್ರಯತ್ನಿಸಿದ್ದರು. 2017ರಲ್ಲಿ ಭಾರತದ ವ್ಯಕ್ತಿಯೊಬ್ಬರ ಜೊತೆ ಸ್ಟ್ರೀಕ್ ಸಂಪರ್ಕ ಹೊಂದಿದ್ದರು. ಅವರು 15 ತಿಂಗಳು ಈ ವ್ಯಕ್ತಿ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. ಬೆಟ್ಟಿಂಗ್‌ನಲ್ಲಿ ಸಕ್ರಿಯನಾಗಿದ್ದ ಆ ವ್ಯಕ್ತಿ ಸ್ಟ್ರೀಕ್ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಹಣವನ್ನೂ ನೀಡಿದ್ದಾರೆ.

12 ವರ್ಷ ವೃತ್ತಿಪರ ಕ್ರಿಕೆಟ್ ಆಡಿದ್ದ ವೇಗದ ಬೌಲರ್‌ ಸ್ಟ್ರೀಕ್ 65 ಟೆಸ್ಟ್ ಪಂದ್ಯಗಳಲ್ಲಿ 216 ವಿಕೆಟ್ ಉರುಳಿಸಿದ್ದರು. 189 ಏಕದಿನ ಪಂದ್ಯಗಳಲ್ಲಿ 239 ವಿಕೆಟ್ ಪಡೆದಿದ್ದರು. 2005ರಲ್ಲಿ ನಿವೃತ್ತರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಗಳಿಸಿರುವ ಜಿಂಬಾಬ್ವೆಯ ಏಕೈಕ ಬೌಲರ್ ಆಗಿದ್ದಾರೆ ಅವರು. ಬಾಂಗ್ಲಾದೇಶ ತಂಡದ ಕೋಚ್ ಕೂಡ ಆಗಿದ್ದ ಅವರು ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ನ ಬೌಲಿಂಗ್ ಕೋಚ್‌ ಆಗಿಯೂ ಅಫ್ಗಾನಿಸ್ಥಾನ ಪ್ರೀಮಿಯರ್ ಲೀಗ್‌ನಲ್ಲಿ ಕಾಬೂಲ್ ಜ್ವಾನನ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT