ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಚ್ ಹುಡುಗರ ಗಾಂಧಿಗಿರಿಯ ಜಯಭೇರಿ

ಕೊರೊನಾ ಕಾಲದ ಕ್ರಿಕೆಟ್‌ನಲ್ಲಿ ಭಾರತದ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿದ ಯುವಪಡೆ
Last Updated 19 ಜನವರಿ 2021, 18:46 IST
ಅಕ್ಷರ ಗಾತ್ರ

ಒಂದು ತಿಂಗಳ ಹಿಂದೆ ಅಡಿಲೇಡ್‌ನ ಅಂಗಳದಲ್ಲಿ ತಲೆತಗ್ಗಿಸಿ ನಿಂತಿದ್ದ ಅದೇ ಹುಡುಗರು ಮಂಗಳವಾರ ಬ್ರಿಸ್ಟೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದರು.

ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಬಾರ್ಡರ್‌–ಗಾವಸ್ಕರ್ ಟ್ರೋಫಿಯನ್ನು ಹಿಡಿದುಕೊಂಡು ಸಂಭ್ರಮಿಸಿದ ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ ಎಲ್ಲರೂ ಇದೇ ಮೊದಲ ಸಲ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗೆ ಕಾಲಿಟ್ಟವರು. ಶಾರ್ದೂಲ್ ಠಾಕೂರ್‌ಗೂ ಆಸ್ಟ್ರೇಲಿಯಾದಲ್ಲಿ ಇದು ಮೊದಲ ಸರಣಿ, ಆದರೆ ವರ್ಷದ ಹಿಂದೆಯೇ ಅವರು ಭಾರತದಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದಾರೆ. ಕೆ.ಎಲ್. ರಾಹುಲ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ ಆರ್. ಅಶ್ವಿನ್, ಹನುಮವಿಹಾರಿ ಅವರಂತಹ ಪ್ರಮುಖ ಆಟಗಾರರು ಫಿಟ್‌ ಆಗಿ ಇದ್ದಿದ್ದರೆ ಬಹುಶಃ ಈ ಎಲ್ಲ ಯುವ ಆಟಗಾರರು ಬೆಂಚ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸಬೇಕಿತ್ತು.

ಸರಣಿಯುದ್ದಕ್ಕೂ ಹತ್ತು ಆಟಗಾರರು ಗಾಯಗೊಂಡು ‘ಮಿನಿ ಆಸ್ಪತ್ರೆ’ಯೇ ಆಗಿ ಹೋಗಿದ್ದ ಭಾರತ ತಂಡಕ್ಕೆ ಗೆಲುವಿನ ಸಂಜೀವಿನಿ ನೀಡಿದ್ದು ಇದೇ ಅನನುಭವಿ ಹುಡುಗರು. ಅಪ್ಪನ ಅಗಲಿಕೆಯ ದುಃಖವನ್ನು ಎದೆಯಲ್ಲಿಟ್ಟುಕೊಂಡೇ ಕಣಕ್ಕಿಳಿದ ಸಿರಾಜ್, ಹೋದ ತಿಂಗಳು ಚೆನ್ನೈನಲ್ಲಿ ಜನಿಸಿದ ಪುತ್ರಿಯ ಮುಖವನ್ನೂ ನೋಡದ ತಂಗರಸು ನಟರಾಜನ್ ತಂಡದ ಚಾರಿತ್ರಿಕ ಸಾಧನೆಗೆ ಕಾರಣರಾದರು. ಅಲ್ಲದೇ ಈ ಆಟಗಾರರ ‘ಗಾಂಧಿಗಿರಿ’ಯಂತಹ ನಡವಳಿಕೆಯು ಭಾರತದ ಬ್ರ್ಯಾಂಡ್‌ ಮೌಲ್ಯವನ್ನು ವರ್ಧಿಸಿತು.

ಅಡಿಲೇಡ್‌ನ ಹೀನಾಯ ಸೋಲಿನ ಬಗ್ಗೆಇವರಾರೂ ಚಿಂತೆ ಮಾಡಲಿಲ್ಲ. ಪಿತೃತ್ವ ರಜೆಗೆ ತೆರಳಿದ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೆಲ್ಬರ್ನ್‌ನಲ್ಲಿ ಗೆದ್ದು ಬೀಗಿದಾಗ ಮೈಮರೆಯಲಿಲ್ಲ. ಕೊರೊನಾ ತಡೆ ಮಾರ್ಗಸೂಚಿ ಉಲ್ಲಂಘನೆಯ ಆರೋಪದಲ್ಲಿ ಅರ್ಧ ಡಜನ್ ಆಟಗಾರರು ಸಿಲುಕಿಕೊಂಡರು. ಆಸ್ಟ್ರೇಲಿಯಾ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು. ಆಗಲೂ ತಂಡದ ಆತ್ಮಬಲ ಉಡುಗಲಿಲ್ಲ. ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಕೆಲವು ಕಿಡಿಗೇಡಿ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದಾಗ ತಿರುಗಿ ನಿಂದಿಸಲಿಲ್ಲ. 2012ರಲ್ಲಿ ಪ್ರೇಕ್ಷಕರ ನಿಂದನೆಗೆ ಬೇಸತ್ತು ‘ಸಂಜ್ಞೆ’ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದ ವಿರಾಟ್ ಮಾದರಿಯನ್ನೂ ಅನುಕರಿಸಲಿಲ್ಲ. ನಿಯಮದ ಚೌಕಟ್ಟಿನಲ್ಲಿಯೇ ದೂರು ನೀಡಿದರು.

ಇತ್ತ ಅಂಗಳದೊಳಗೆ ಆತಿಥೇಯ ಬಳಗದ ಆಟಗಾರರ ಕೀಟಲೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ಯರ‍್ರಾಬಿರ‍್ರಿ ನುಗ್ಗಿಬಂದ ಎಸೆತಗಳು ಮೈಕೈಗೆ ಬಡಿದು ಮಾಡಿದ ಗಾಯಗಳಿಗೆ ಲೆಕ್ಕವೇ ಇಲ್ಲ. ರವೀಂದ್ರ ಜಡೇಜ ಕೈಬೆರಳು ಮುರಿದುಕೊಂಡರು, ರಿಷಭ್ ಪಂತ್ ಮೊಣಕೈಗೆ ಪೆಟ್ಟಾಯಿತು. ಆತಿಥೇಯ ವೇಗಿಗಳ ಉರಿವೇಗದ ದಾಳಿಗೆ ಬಹುತೇಕ ಎಲ್ಲ ಆಟಗಾರರೂ ಮೈಯೊಡ್ಡಿದರು. ಅದೆಲ್ಲಕ್ಕೂ ಆಟದ ಮೂಲಕವೇ ಉತ್ತರ ಕೊಟ್ಟರು. ಜಗಳಕ್ಕೆ ಹೋಗದೇ ನಗುನಗುತ್ತಲೇ ತಿರುಗೇಟು ನೀಡಿದರು. ಸಿಡ್ನಿಯಲ್ಲಿ ಐದನೇ ದಿನ ಡ್ರಾ ಮಾಡಿಕೊಂಡ ಪರಿ ಯಾವ ಗೆಲುವಿಗೂ ಕಮ್ಮಿಯಿರಲಿಲ್ಲ.

ಇದು ಗಾಬಾ ಪಂದ್ಯಕ್ಕೆ ಭಾರತ ತಂಡಕ್ಕೆ ಟಾನಿಕ್ ಆಗಿದ್ದು ಸುಳ್ಳಲ್ಲ. ಆದರೆ, ಈ ಪಂದ್ಯವು ಪ್ರವಾಹದ ವಿರುದ್ಧದ ಈಜಿನಂತೆ ಇತ್ತು. ಅನುಭವವೇ ಇಲ್ಲದ ಬೌಲಿಂಗ್ ಪಡೆ. ಲಯ ಕಂಡುಕೊಳ್ಳಲು ಸಾಧ್ಯವಾಗದ ರೋಹಿತ್ ಶರ್ಮಾ, ಮಯಂಕ್ ಅಗರವಾಲ್ ಅವರಿದ್ದ ಬ್ಯಾಟಿಂಗ್ ಪಡೆ. ಇದೆಲ್ಲದರ ಜೊತೆಗೆ ಎಂದಿನಂತೆ ಆಸ್ಟ್ರೇಲಿಯಾ ಆಟ
ಗಾರರ ಅಣಕದಾಟಗಳ ತಂತ್ರ. ಆದರೆ ಇದಾವುದೂ ನಡೆಯಲಿಲ್ಲ.

ಕೋವಿಡ್ ಕಾಲದ ಅಸ್ಥಿರತೆಗಳ ನಡುವೆ ಭಾರತವು 2–1ರಿಂದ ಸಾಧಿಸಿದ ಈ ಸರಣಿ ಗೆಲುವು
ಇನ್ನು ಟೆಸ್ಟ್ ಕ್ರಿಕೆಟ್‌ನ ಬೆಳವಣಿಗೆಗೆ ದಿಕ್ಸೂಚಿಯಾಗಬಲ್ಲದು. ಟಿ20 ಯುಗದಲ್ಲಿಯೂ ಐದು ದಿನಗಳವರೆಗೆ ಅಭಿಮಾನಿಗಳ ಚಿತ್ತ
ಸೆಳೆಯುವ ಸಾಮರ್ಥ್ಯದ ವಿರಾಟ್ ದರ್ಶನ ಮಾಡಿಸಿದ್ದು ಈ ಸರಣಿ. ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಸತತ ಎರಡು ಸಲ ಹಣಿಯುವುದೆಂದರೆ ಸಣ್ಣ ಮಾತೇನಲ್ಲ. 71 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಕೊಹ್ಲಿ ಬಳಗವು ಅಲ್ಲಿ ಸರಣಿ ಜಯಿಸಿತ್ತು. ಈಗ ಹಂಗಾಮಿ ನಾಯಕ ರಹಾನೆ ಬಳಗವು ತಾನು ವಿದೇಶಿ ನೆಲದಲ್ಲಿಯೂ ಹುಲಿ ಎಂದು ತೋರಿಸಿಕೊಟ್ಟಿದೆ.

ರಾಹುಲ್ ದ್ರಾವಿಡ್ ಶಿಷ್ಯಬಳಗ

ಭಾರತ ಜೂನಿಯರ್ ಮತ್ತು ಎ ತಂಡಗಳಿಗೆ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿದ್ದ ಸಂದರ್ಭದಲ್ಲಿ ಬೆಳೆದ ಪ್ರತಿಭೆಗಳು ಈಗ ಆಸ್ಟ್ರೇಲಿಯಾದಲ್ಲಿ ಲಭಿಸಿದ ವಿಜಯದ ರೂವಾರಿಗಳು.

ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಶಾರ್ದೂಲ್ ಠಾಕೂರ್ ಅವರೆಲ್ಲರೂ ರಾಹುಲ್ ಮಾರ್ಗದರ್ಶನದಲ್ಲಿ ಬೆಳೆದವರು. ಇವರಲ್ಲಿ ಕೆಲವರು ಎ ತಂಡದಲ್ಲಿ ಆಡಿದ್ದರೆ, ಇನ್ನೂ ಕೆಲವರು ರಾಹುಲ್ ನಿರ್ದೇಶಕರಾಗಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಮಾರ್ಗದರ್ಶನ ಪಡೆದವರು.

ಯುವಭಾರತದ ಪವಾಡ ಇದು: ಗಾವಸ್ಕರ್

ಭಾರತ ಕ್ರಿಕೆಟ್‌ನ ಯುವಪಡೆಯು ಸಾಧಿಸಿದ ಈ ಗೆಲುವು ಪವಾಡಸದೃಶವಾದದ್ದು. ಇದೊಂದು ಅವಿಸ್ಮರಣೀಯ ಕ್ಷಣ.ಗಾಬಾ ಪಂದ್ಯವನ್ನು ಬರೀ ಡ್ರಾ ಮಾಡಿಕೊಂಡು ಸರಣಿ ಉಳಿಸಿಕೊಳ್ಳಬೇಕೆಂದು ತಂಡದ ಆಟಗಾರರು ನಿರ್ಧರಿಸಿರಲಿಲ್ಲ. ಗೆದ್ದೇ ತೀರಬೇಕೆಂಬ ಛಲದಿಂದ ಕಣಕ್ಕಿಳಿದಿದ್ದು ಅವರ ಆಟದಿಂದ ಜಗಜ್ಜಾಹೀರಾಯಿತು. ಇದೊಂದು ಅದ್ಭುತವಾದ ಆತ್ಮವಿಶ್ವಾಸದ ಮಾದರಿ

–ಸುನೀಲ್ ಗಾವಸ್ಕರ್,ಮಾಜಿ ಕ್ರಿಕೆಟಿಗ

***

ಈ ಗೆಲುವಿಗೆ ಮೀರಿದ್ದು ಮತ್ತೊಂದಿಲ್ಲ: ರವಿಶಾಸ್ತ್ರಿ

ಈ ಸರಣಿಯ ಜಯಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಅಡಿಲೇಡ್‌ನಲ್ಲಿ ಅತ್ಯಂತ ಕೆಟ್ಟ ಸೋಲಿನ ನಂತರ ತಂಡವು ಈ ರೀತಿ ಪುಟಿದೇಳುವುದು ಅಸಾಧಾರಣವೇ ಸರಿ.ಈ ಬಾರಿಯ ಪ್ರವಾಸವು ಅತ್ಯಂದ ಕಠಿಣವಾದದ್ದು. ಹಲವು ಕಾರಣಗಳಿಂದ ಕಷ್ಟಕರ ಹಾದಿ ಇದಾಗಿತ್ತು. ಸೋಲಿನ ಪ್ರಪಾತದಿಂದ ಎದ್ದು, ಯಶಸ್ಸಿನ ಉತ್ತುಂಗಕ್ಕೆ ತಲುಪಿದ ಆ ಸಾಧನೆಯನ್ನು ವರ್ಣಿಸಲು ಪದಗಳು ಸಾಲದು

–ರವಿ ಶಾಸ್ತ್ರಿ, ಭಾರತ ತಂಡದ ಮುಖ್ಯ ಕೋಚ್

***

ಸರಣಿ ಪಾಠ ಕಲಿಸಿದೆ: ಲ್ಯಾಂಗರ್

ಭಾರತ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದು ಎಂಬ ಪಾಠವನ್ನು ಈ ಸರಣಿಯು ಕಲಿಸಿದೆ.ಕ್ರಿಕೆಟ್‌ನಲ್ಲಿ ಒಬ್ಬರು ಸೋಲುವುದು, ಇನ್ನೊಬ್ಬರು ಗೆಲ್ಲುವುದು ಸಹಜ. ಆದರೆ ಈ ಸರಣಿಯು ಅತ್ಯದ್ಭುತವಾಗಿದೆ. ಏಕೆಂದರೆ ಇಲ್ಲಿ ಟೆಸ್ಟ್ ಕ್ರಿಕೆಟ್‌ ಜಯಿಸಿದೆ ಎಂದು ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.

–ಜಸ್ಟಿನ್‌ ಲ್ಯಾಂಗರ್,ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT