ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಪಾಕ್ ನೆಲದಲ್ಲಿ ಮಿನುಗುತ್ತಿರುವ 'ಚೈನಾಮ್ಯಾನ್'

Last Updated 4 ಏಪ್ರಿಲ್ 2021, 7:53 IST
ಅಕ್ಷರ ಗಾತ್ರ

ಇತ್ತ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿಯಲ್ಲಿ ಶಿವಿಲ್ ಕೌಶಿಕ್ ಮಿಂಚಿ ನೇಪಥ್ಯಕ್ಕೆ ಸರಿದಿರುವಾಗ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತುಂಗಕ್ಕೇರಿದ ಕುಲದೀಪ್ ಯಾದವ್ ನಂತರ ಅವಕಾಶಗಳನ್ನು ಕಳೆದುಕೊಂಡಾಗ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ತಾರೆಯ ಉದಯವಾಗಿದೆ.

ಪಾಕಿಸ್ತಾನದ ಮಟ್ಟಿಗೆ ಸ್ವಲ್ಪ ಅಪರೂಪವೇ ಆಗಿರುವ ‘ಚೈನಾಮನ್’ ಬೌಲಿಂಗ್ ಮೂಲಕ ಮಿಂಚುತ್ತಿರುವ ಈ ಯುವ ಪ್ರತಿಭೆಯ ಹೆಸರು ಫೈಜಲ್ ಅಕ್ರಂ.

ಎಡಗೈಯ ಮಣಿಗಂಟು ಬಳಸಿ ಮಾಡುವ ಬೌಲಿಂಗ್ ಚೈನಾಮನ್. ವಿಶ್ವ ಕ್ರಿಕೆಟ್‌ನಲ್ಲಿ ಈ ಶೈಲಿಯ ಬೌಲರ್‌ಗಳು ಬಲು ಅಪರೂಪ. ಎಲಿಸ್ ಅಕಾಂಗ್, ಫ್ಲೀಟ್‌ವುಡ್ ಸ್ಮಿತ್, ಇನ್ಶಾನ್ ಅಲಿ ಅವರಿಂದ ಶುರುವಾಗಿ ಎರಡು ದಶಕಗಳ ಹಿಂದೆ ಅಂಗಣದಲ್ಲಿ ಮೆರೆದಿದ್ದ ಪಾಲ್ ಆ್ಯಡಮ್ಸ್‌, ಕಳೆದ ದಶಕದಲ್ಲಿ ಸುಪರಿಚಿತರಾಗಿದ್ದ ಬ್ರಾಡ್ ಹಾಗ್‌, ಈಗ ಆಡುತ್ತಿರುವ ಮೈಕೆಲ್ ರಿಪಾನ್, ಲಕ್ಷಣ್‌ ಸಂಡಗನ್‌ ಮುಂತಾದವರು ಈ ಅಪರೂಪದ ಪಟ್ಟಿಗೆ ಸೇರಿರುವ ಪ್ರಮುಖರು.

ವೇಗಿಗಳು ಮತ್ತು ಸಾಂಪ್ರದಾಯಿಕ ಸ್ಪಿನ್ನರ್‌ಗಳನ್ನು ಧಾರಾಳವಾಗಿ ಸೃಷ್ಟಿಸಿರುವ ನೆಲ ಪಾಕಿಸ್ತಾನ. ಆದರೆ ಅಲ್ಲಿ ಚೈನಾಮನ್ ಬೌಲಿಂಗ್‌ಗೆ ಹೇಳತಕ್ಕ ಇತಿಹಾಸವೇನೂ ಇಲ್ಲ. ಹೀಗಾಗಿ ಫೈಜಲ್ ಅಕ್ರಂ ಈಗ ಪಾಕ್ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ 16 ವರ್ಷದೊಳಗಿನವರ ಏಕದಿನ ಸರಣಿಯಲ್ಲಿ ಈ ಪ್ರತಿಭೆಯ ಸಾಮರ್ಥ್ಯ ಹೊರಜಗತ್ತಿನ ಗಮನಕ್ಕೆ ಬಂದಿತ್ತು.

ಈಗ ರಾಷ್ಟ್ರೀಯ ತಂಡದ ನಾಯಕ, ವಿಶ್ವದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಬಾಬರ್ ಆಜಂ ಅವರ ವಿಕೆಟ್ ಉರುಳಿಸಿ ಫೈಜಲ್ ಗಮನ ಸೆಳೆದಿದ್ದಾರೆ! ಇಷ್ಟು ಮಾತ್ರವಲ್ಲ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಕನಸು ಕಂಡಿರುವುದಾಗಿ ಹೇಳಿ ಸುದ್ದಿಯಾಗಿದ್ದಾರೆ.

ಪಾಕಿಸ್ತಾನದ 16 ಮತ್ತು 19 ವರ್ಷದೊಳಗಿನವರ ತಂಡಗಳಲ್ಲಿ ಫೈಜಲ್ ಈಗಾಗಲೇ ಪ್ರಮುಖ ಬೌಲರ್ ಆಗಿ ಹೆಸರು ಮಾಡಿದ್ದಾರೆ. 2019ರಲ್ಲಿ ದುಬೈಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ 16 ವರ್ಷದೊಳಗಿನವರ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿ ಮಿಂಚಿದ್ದ ಫೈಜಲ್ ಆ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು. ಐದು ಪಂದ್ಯಗಳಲ್ಲಿ 10 ವಿಕೆಟ್ ಉರುಳಿಸಿದ್ದರು. 2018–19ರಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ಆಟಗಾರ ಎಂಬ ಖ್ಯಾತಿಯೂ ಅವರದಾಗಿತ್ತು. 17 ವರ್ಷದ ಫೈಜಲ್, ಹಾಲಿ ಋತುವಿನಲ್ಲಿ 19 ವರ್ಷದೊಳಗಿನವರ ರಾಷ್ಟ್ರೀಯ ಟೂರ್ನಿಯ 10 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸಿದ್ದಾರೆ. ಈ ಎಲ್ಲ ಸಾಧನೆಗಳಿಂದಾಗಿ ಅವರಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಕರೆ ಬಂದಿದೆ. ಯಾವುದೇ ಕ್ಷಣದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವ ಆಹ್ವಾನ ಬರುವ ಸಾಧ್ಯತೆಯೂ ಇದೆ.

ಚೈನಾಮನ್ ಬೌಲಿಂಗ್ ಎಂದರೇನು?

ಎಡಗೈಯಲ್ಲಿ ಮಾಡುವ ಲೆಗ್ ಸ್ಪಿನ್ ಬೌಲಿಂಗೇ ಚೈನಾಮನ್ ಶೈಲಿ. ಲೆಗ್ ಸ್ಪಿನ್ ಬೌಲರ್ ಹಾಕಿದ ಚೆಂಡು ಲೆಗ್‌ಸ್ಟಂಪ್ ಕಡೆಯಿಂದ ತಿರುವು ಪಡೆದು ಆಫ್‌ ಸ್ಟಂಪ್‌ನ ಆಚೆಗೆ ಸಾಗುತ್ತದೆ. ಆದರೆ ಚೈನಾಮನ್ ಹಾಕಿದ ಚೆಂಡು ಆಫ್‌ ಸ್ಟಂಪ್ ಕಡೆಯಿಂದ ತಿರುಗಿ ಲೆಗ್ ಸ್ಟಂಪ್‌ನ ಆಚೆ ಹೋಗುತ್ತದೆ. ಸಾಂಪ್ರದಾಯಿಕ ಶೈಲಿಯ ಲೆಗ್‌ ಸ್ಪಿನ್ ಎಸೆತಗಳನ್ನು ಎದುರಿಸುವಲ್ಲಿ ಪಳಗಿರುವವರು ಕೂಡ ಚೆಂಡು ವಿರುದ್ಧ ದಿಶೆಯತ್ತ ತಿರುವು ಪಡೆದಾಗ ಗಾಬರಿಗೆ ಒಳಗಾಗುತ್ತಾರೆ. ಹೀಗಾಗಿ ಚೈನಾಮನ್ ಬೌಲರ್‌ಗಳನ್ನು ಎದುರಿಸುವುದು ಸವಾಲಾಗುತ್ತದೆ.

ಯಾರು ಮೂಲ ಚೈನಾಮನ್?

ಎಡಗೈ ಮಣಿಗಂಟು ಬಳಸಿ ಹಾಕುವ ಎಸೆತಕ್ಕೆ ಚೈನಾಮನ್ ಎಂದು ಹೆಸರು ಬಂದದ್ದರ ಹಿಂದೆ ಕುತೂಹಲಕಾರಿ ಪ್ರಸಂಗವೊಂದು ಇದೆ. ವೆಸ್ಟ್ ಇಂಡೀಸ್ ತಂಡದಲ್ಲಿ ಆಡುತ್ತಿದ್ದ ಚೀನಾ ಮೂಲದ ಎಲಿಸ್ ಅಚಾಂಗ್ ಅವರಿಂದ ಈ ಹೆಸರು ಬಂದಿದೆ.

1933ರಲ್ಲಿ ವೆಸ್ಟ್ ಇಂಡೀಸ್ ತಂಡಇಂಗ್ಲೆಂಡ್‌ ಪ್ರವಾಸ ಕೈಗೊಂಡಿತ್ತು. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಎಲಿಸ್ ಅವರ ಎಸೆತವೊಂದು ಅನಿರೀಕ್ಷಿತ ತಿರುವು ಪಡೆದು ವಾಲ್ಟರ್ ರಾಬಿನ್ಸ್‌ ಅವರು ಸ್ಟಂಪ್ ಔಟ್ ಆಗುವಂತೆ ಮಾಡಿತ್ತು. ಎಲಿಸ್, ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಚೀನಾ ಮೂಲದ ಮೊದಲ ಆಟಗಾರ. ಬೇಸರದಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ ರಾಬಿನ್ಸನ್ ‘ದುಷ್ಟ ಚೈನಾಮನ್ ವಂಚಿಸಿಬಿಟ್ಟ’ ಎಂದು ಗೊಣಗಿದ್ದರು. ಅಂದಿನಿಂದ ಎಡಗೈ ಮಣಿಗಂಟಿನ ಬೌಲರ್‌ಗಳನ್ನು ಚೈನಾಮನ್ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT