ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದ ಶಕ್ತಿಯಲ್ಲಿನ ನಂಬಿಕೆಯೇ ಗೆಲುವಿನ ಮಂತ್ರ: ಸ್ಟೀಫನ್ ಫ್ಲೆಮಿಂಗ್

ನಾಲ್ಕನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಣೆ
Last Updated 16 ಅಕ್ಟೋಬರ್ 2021, 13:18 IST
ಅಕ್ಷರ ಗಾತ್ರ

ದುಬೈ: ತಂಡದ ಶಕ್ತಿಯಲ್ಲಿ ಬಲವಾದ ನಂಬಿಕೆ ಮತ್ತು ಪರಸ್ಪರ ಉತ್ತಮ ಸಂಬಂಧ ಬೆಳೆಸಿಕೊಂಡಿರುವುದೇ ಯಶಸ್ಸಿಗೆ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.

‘ವಿಶ್ಲೇಷಣೆ ಮತ್ತು ಸಂಖ್ಯೆಗಳ ಆಧಾರದ ಲೆಕ್ಕಾಚಾರಗಳನ್ನು ತಂಡ ಮಾಡುವುದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಸಜ್ಜಾಗುವ ವಿಧಾನವೇ ಬೇರೆ. ನಮ್ಮ ತಂಡದಲ್ಲಿರುವವರ ಪ್ರಾಯದ ಬಗ್ಗೆ ಕೆಲವು ಕಡೆಯಿಂದ ಠೀಕೆಗಳು ಕೇಳಿಬಂದಿವೆ. ಆದರೆ ಆಟಗಾರರ ಪ್ರಾಯವೇ ತಂಡಕ್ಕೆ ಈಗ ವರವಾಗಿ ಪರಿಣಮಿಸಿದೆ’ ಎಂದು 40 ವರ್ಷದ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿರುವ ತಂಡದ ಕೋಚ್ ಹೇಳಿದರು.

‘ಯಾವುದೇ ಕ್ಷೇತ್ರದಲ್ಲಿ ಅನುಭವ ಕೈ ಹಿಡಿಯುತ್ತದೆ. ಸಿಎಸ್‌ಕೆ ವಿಷಯದಲ್ಲಿ ಇದು ಅನೇಕ ಬಾರಿ ಸಾಬೀತಾಗಿದೆ. ಈ ಹಿಂದಿನ ಮೂರು ಪ್ರಶಸ್ತಿಗಳು ಕೂಡ ಪ್ರಮುಖವಾಗಿದ್ದವು. ಆದರೆ ಈ ಬಾರಿಯ ಗೆಲುವು ಹೆಚ್ಚು ಖುಷಿ ತಂದಿದೆ. ಯಾಕೆಂದರೆ ಟೂರ್ನಿಯ ಆರಂಭದಲ್ಲಿ ಈ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಿಂದ ಎಲ್ಲರೂ ಹೊರಗಿಟ್ಟಿದ್ದರು’ ಎಂದು ಫ್ಲೆಮಿಂಗ್ ತಿಳಿಸಿದರು.

ನ್ಯೂಜಿಲೆಂಡ್ ಬಳಗ ಸೇರಿದ ಫ್ಲೆಮಿಂಗ್

ಸ್ಟೀಫನ್ ಫ್ಲೆಮಿಂಗ್ ಅವರು ಶನಿವಾರ ನ್ಯೂಜಿಲೆಂಡ್ ತಂಡವನ್ನು ಸೇರಿಕೊಂಡಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತಿರುವ ರಾಷ್ಟ್ರೀಯ ತಂಡಕ್ಕೆ ಸಲಹೆಗಳನ್ನು ನೀಡಲು ಅವರನ್ನು ಕರೆಸಿಕೊಳ್ಳಲಾಗಿದೆ.

‘ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ ಸ್ಟೀಫನ್ ಫ್ಲೆಮಿಂಗ್ ಅವರು ನಮ್ಮ ತಂಡವನ್ನು ಸೇರಿಕೊಂಡಿದ್ದು ಕೆಲವು ದಿನ ನಮ್ಮೊಂದಿಗೆ ಇರುವರು’ ಎಂದು ‘ಬ್ಲ್ಯಾಕ್‌ ಕ್ಯಾಪ್ಸ್‌’ ಟ್ವೀಟ್ ಮಾಡಿದೆ.

ನ್ಯೂಜಿಲೆಂಡ್ ತಂಡ ಸೂಪರ್ 12 ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಪಂದ್ಯ ಇದೇ 26ರಂದು ಶಾರ್ಜಾ ಕ್ರಿಕೆಟ್‌ ಅಂಗಣದಲ್ಲಿ ನಡೆಯಲಿದೆ. ಮೂರು ದಿನಗಳ ನಂತರ ಭಾರತ ಮತ್ತು ನ್ಯೂಜಿಲೆಂಡ್ ಹಣಾಹಣಿ ದುಬೈಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT