ಮಂಗಳವಾರ, ಜುಲೈ 27, 2021
27 °C

ಕ್ರಿಕೆಟ್ ಆಸ್ಟ್ರೇಲಿಯಾಗೆ ಇಂಗ್ಲೆಂಡ್‌ ಕ್ರಿಕೆಟಿಗ ಆ್ಯಂಡ್ರ್ಯೂ ಸ್ಟ್ರಾಸ್ ಸಿಇಒ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಆ್ಯಂಡ್ರ್ಯೂ ಸ್ಟಾರ್ಸ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೇಗೇರುವ ಸಾಧ್ಯತೆಗಳು ದಟ್ಟವಾಗಿವೆ.

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಆಗಿದ್ದ ಕೆವಿನ್ ರಾಬರ್ಟ್ಸ್‌ ಅವರು ಮೂರು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಹಂಗಾಮಿ ಸಿಇಒ ಆಗಿ ನಿಕ್ ಹಾಕ್ಲೆ ಅಧಿಕಾರ ವಹಿಸಿಕೊಂಡಿದ್ದರು. 

ಸಿಇಒ ಹುದ್ದೆಗೆ ನೇಮಕ ಕೋರಿ ಅರ್ಜಿ ಸಲ್ಲಿಸುವಂತೆ ಸ್ಟ್ರಾಸ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ  ಕೇಳಿಕೊಂಡಿದೆ ಎಂದು ‘ದ ಆಸ್ಟ್ರೇಲಿಯನ್’ ಪತ್ರಿಕೆಯು ವರದಿ ಮಾಡಿದೆ.

ಸ್ಟ್ರಾಸ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ)ಗೆ 2015 ರಿಂದ 2018ರ ಅವಧಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 43 ವರ್ಷದ ಸ್ಟ್ರಾಸ್ ಅವರ ಕ್ರಿಕೆಟ್ ಆಟ ಮತ್ತು ಆಡಳಿತದ ಅನುಭವದಿಂದಾಗಿ ಸಿಎ ಆಡಳಿತದ ಉನ್ನತಾಧಿಕಾರಿಯ ಹುದ್ದೆಗೆ ಏರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ. ಸ್ಟ್ರಾಸ್ 100 ಟೆಸ್ಟ್‌ ಪಂದ್ಯಗಳನ್ನು ಆಡಿ 7037 ರನ್ ಮತ್ತು 127 ಏಕದಿನ ಪಂದ್ಯಗಳಿಂದ  4205 ರನ್‌ಗಳನ್ನು ಗಳಿಸಿದ್ದಾರೆ. ಸ್ಟ್ರಾಸ್ ಅವರು ಇಂಗ್ಲೆಂಡ್‌ ತಂಡಕ್ಕೆ ಆಡುವ ಮುನ್ನ 1998–99ರಲ್ಲಿ ಸಿಡ್ನಿ ವಿಶ್ವವಿದ್ಯಾಲಯದ ತಂಡದಲ್ಲಿ ಆಡಿದ್ದರು.

ಸದ್ಯ ಹಂಗಾಮಿ ಸಿಇಒ ಆಗಿರುವ ನಿಕ್ ಹಾಕ್ಲೆ ಅವರು ಇಂಗ್ಲೆಂಡ್‌ನಲ್ಲಿ ಜನಿಸಿದವರು. ರಾಬರ್ಟ್ಸ್‌ ನಿರ್ಗಮನದ ನಂತರ ಪೂರ್ಣಾವಧಿ ಸಿಇಒ ಅಭ್ಯರ್ಥಿಗಾಗಿ ಶೋಧ ನಡೆದಿತ್ತು.

‘ಸಿಇಒ ನೇಮಕ ಮಾಡುವುದು ಮಂಡಳಿಯ ಪ್ರಮುಖ ಕಾರ್ಯವಾಗಿದೆ. ನಮ್ಮ ದೇಶ ಮತ್ತು ವಿದೇಶಗಳಲ್ಲಿರುವ ಅಭ್ಯರ್ಥಿಗಳ ಕುರಿತು ಕೂಲಂಕಷವಾಗಿ  ತಿಳಿದುಕೊಂಡು ಮುಂದುವರೆಯುತ್ತೇವೆ’ ಎಂದು ಸಿಎ ಮುಖ್ಯಸ್ಥ ಇಯರ್ಲ್ ಎಡ್ಡಿಂಗ್ಸ್ ಈಚೆಗೆ ಹೇಳಿದ್ದರು. 

ಕೊರೊನಾ ವೈರಸ್ ಸೋಂಕು ಪ್ರಸರಣ ತಡೆಯಲು ಆಸ್ಟ್ರೇಲಿಯಾದಲ್ಲಿ ಲಾಕ್‌ಡೌನ್ ಆದಾಗ ಸಿಎದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿತ್ತು. ಆಗ ಕೆವಿನ್ ರಾಬರ್ಟ್ಸ್‌ ಅವರು ಸಿಎ ಶೇಕಡಾ 80ರಷ್ಟು ಸಿಬ್ಬಂದಿಯನ್ನು ಕಡಿತ ಮಾಡಲು ಮುಂದಾಗಿದ್ದರು. ರಾಜ್ಯ ಸಂಸ್ಥೆಗಳಿಗೆ ಅನುದಾನ ಕಡಿತ ಮಾಡಿದರು. ಆಟಗಾರರ ವೇತನ ಪರಿಷ್ಕರಿಸಲು ಮುಂದಾಗಿದ್ದರು. ಈ ಕ್ರಮಗಳು ತೀವ್ರ ಟೀಕೆಗಳಿಗೆ ಗುರಿಯಾಗಿದ್ದವು. ಅದರಿಂದಾಗಿಯೇ ಅವರು ರಾಜೀನಾಮೆ ನೀಡಬೇಕಾಯಿತು.

ಬುಧವಾರವಷ್ಟೇ ಮಂಡಳಿಯಲ್ಲಿ ವೆಚ್ಚ ಕಡಿತ ಮಾಡಲು 40 ಸಿಬ್ಬಂದಿಯನ್ನು ತೆಗೆದುಹಾಕಲಾಗಿತ್ತು.  ರಾಷ್ಟ್ರೀಯ ‘ಎ’ ತಂಡಗಳ ವಿದೇಶ ಪ್ರವಾಸಗಳನ್ನು ರದ್ದು ಮಾಡಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು