ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಸ್ಪಷ್ಟನೆ: ಒಂಬುಡ್ಸ್‌ಮನ್‌ಗೆ ಪತ್ರ ಬರೆದ ಗಂಗೂಲಿ

Last Updated 25 ಏಪ್ರಿಲ್ 2019, 6:51 IST
ಅಕ್ಷರ ಗಾತ್ರ

ನವದೆಹಲಿ: ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸೌರವ್‌ ಗಂಗೂಲಿ ಈ ಕುರಿತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಅವರಿಗೆ ಪತ್ರ ಬರೆದಿದ್ದಾರೆ.

ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷರಾಗಿರುವ ಗಂಗೂಲಿ, ಐಪಿಎಲ್‌ನಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋಲ್ಕತ್ತದ ರಂಜೀತ್‌ ಸೀಲ್‌, ಅಭಿಜಿತ್‌ ಮುಖರ್ಜಿ ಮತ್ತು ಭಾಸ್ವತಿ ಶಾಂತುವ ಅವರು ನಿವೃತ್ತ ನ್ಯಾಯಮೂರ್ತಿ ಜೈನ್‌ ಅವರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ಸಂಬಂಧ ಒಂಬುಡ್ಸ್‌ಮನ್‌, ಗಂಗೂಲಿ ಅವರಿಂದ ಸ್ಪಷ್ಟನೆ ಕೇಳಿತ್ತು.

‘ಎರಡು ಹುದ್ದೆಗಳನ್ನು ನಿಭಾಯಿಸುತ್ತಿರುವುದು ನಿಜ. ಇದು ಬಿಸಿಸಿಐ ಸಂವಿಧಾನಕ್ಕೆ ವಿರುದ್ಧವಾಗಿಲ್ಲ. ಹೀಗಾಗಿ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಗಂಗೂಲಿ, ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಸದ್ಯ ಬಿಸಿಸಿಐಯಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿಲ್ಲ. ಬಿಸಿಸಿಐ ರಚಿಸಿರುವ ಕ್ರಿಕೆಟ್‌ ಸಮಿತಿಗಳಲ್ಲೂ ನನ್ನ ಪಾತ್ರವಿಲ್ಲ. ಜೊತೆಗೆ ಐಪಿಎಲ್‌ಗೆ ಸಂಬಂಧಿಸಿದಂತೆ ಬಿಸಿಸಿಐ ರಚಿಸಿರುವ ಸಮಿತಿಗಳಲ್ಲೂ ನಾನು ಯಾವ ಹುದ್ದೆಯನ್ನೂ ನಿಭಾಯಿಸುತ್ತಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘ಈ ಹಿಂದೆ ನಾನು ಬಿಸಿಸಿಐ ತಾಂತ್ರಿಕ ಸಮಿತಿಯಲ್ಲಿದ್ದೆ. ಜೊತೆಗೆ ಐಪಿಎಲ್‌ ತಾಂತ್ರಿಕ ಸಮಿತಿ ಮತ್ತು ಐಪಿಎಲ್‌ ಆಡಳಿತ ಸಮಿತಿಗಳಲ್ಲೂ ಕೆಲಸ ಮಾಡುತ್ತಿದ್ದೆ. ಆ ಹುದ್ದೆಗಳಿಗೆ ಈಗಾಗಲೇ ರಾಜೀನಾಮೆ ನೀಡಿದ್ದೇನೆ’ ಎಂದು ಸೌರವ್‌ ವಿವರಿಸಿದ್ದಾರೆ.

‘ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಮಾಲೀಕತ್ವ ಹೊಂದಿದೆ. ಆ ಕಂಪನಿಯಲ್ಲಿ ನಾನು ಪಾಲು ಹೊಂದಿಲ್ಲ. ನಾನು ಆ ಕಂಪನಿಯ ನಿರ್ದೇಶಕ ಎಂಬುದೂ ಸುಳ್ಳು. ರೆಡ್‌ ಚಿಲ್ಲೀಸ್‌ ಜೊತೆ ಯಾವ ವ್ಯವಹಾರವನ್ನೂ ಮಾಡುತ್ತಿಲ್ಲ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT