ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಪ್ರವಾಸ ವಿರಾಟ್ ಕೊಹ್ಲಿ ಪಾಲಿಗೆ ನಿರ್ಣಾಯಕ: ಗಂಗೂಲಿ

Last Updated 12 ಜುಲೈ 2020, 12:05 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಈ ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸ ನಿರ್ಣಾಯಕ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಸಂಸ್ಥೆಯೊಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು‘ನನ್ನ ಅಧ್ಯಕ್ಷ ಪಟ್ಟ ಈ ಡಿಸೆಂಬರ್ ನಂತರ ಉಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಸರಣಿ ಮಹತ್ವದ್ದು. ಅವರ ನಾಯಕತ್ವ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸರಣಿ ಅದಾಗಲಿದೆ. ಆರು ತಿಂಗಳಿಂದ ಕ್ರಿಕೆಟ್ ಆಡದೇ ಇರುವ ವಿರಾಟ್ ಕೊಹ್ಲಿ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮುಂದಿನ ದಿನಗಳಲ್ಲಿ ಫಿಟ್ ಆಗಿರಬೇಕು ಎಂದು ಸಲಹೆ ನೀಡಿದ್ದೇನೆ’ ಎಂದು ಹೇಳಿದರು.

‘ತಂಡದ ಬೌಲರ್‌ಗಳನ್ನು ಫಿಟ್ ಆಗಿ ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೊಹ್ಲಿ ಮೇಲೆ ಇದೆ. ಮೊಹಮ್ಮದ್ ಶಮಿ ಆಗಿರಲಿ, ಜಸ್‌ಪ್ರೀತ್ ಬೂಮ್ರಾ ಆಗಿರಲಿ, ಇಶಾಂತ್ ಶರ್ಮಾ ಅಥವಾ ಹಾರ್ದಿಕ್ ಪಾಂಡ್ಯ ಆಗಿರಲಿ ಆಸ್ಟ್ರೇಲಿಯಾದಲ್ಲಿ ಆಡಬೇಕಾದರೆ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲೇಬೇಕು’ ಎಂದು ಭಾರತ ತಂಡದ ಮಾಜಿ ನಾಯಕರೂ ಆಗಿದ್ದ ಗಂಗೂಲಿ ಅಭಿಪ್ರಾಯಪಟ್ಟರು.

ಕಡಿಮೆ ಕ್ವಾರಂಟೈನ್ ಅವಧಿ ಸಾಕು

ಆಟಗಾರರನ್ನು ವಾರಗಟ್ಟಲೆ ಹೋಟೆಲ್ ಕೊಠಡಿಗಳಲ್ಲಿ ಕೂರಿಸುವುದು ಸರಿಯಲ್ಲ. ಆದ್ದರಿಂದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡವನ್ನು ನಿಗದಿತ ಅವಧಿಗಿಂತ ಕಡಿಮೆ ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲು ಪ್ರಯತ್ನಿಸಲಾಗುವುದು ಎಂದು ಗಂಗೂಲಿ ತಿಳಿಸಿದರು.

ಕೊರೊನಾ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ವೆಸ್ಟ್ ಇಂಡೀಸ್ ತಂಡದಇಂಗ್ಲೆಂಡ್ ಪ್ರವಾಸದೊಂದಿಗೆ ಪುನರಾರಂಭಗೊಂಡಿದೆ.ಭಾರತ ತಂಡ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ ಹೊನಲು ಬೆಳಕಿನ ಪಂದ್ಯ ಸೇರಿದಂತೆ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಹೊಸ ನಿಯಮಗಳ ಪ್ರಕಾರಯಾವುದೇ ಸರಣಿಗೂ ಮೊದಲು ಆಟಗಾರರು ಎರಡು ವಾರ ಕ್ವಾರಂಟೈನ್‌ನಲ್ಲಿ ಕಳೆಯುವುದು ಅನಿಯವಾರ್ಯ. ಖಾಲಿ ಕ್ರೀಡಾಂಗಣಗದಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಗಣ ಪ್ರವೇಶಿಸುವ ಮೊದಲು ಆಟಗಾರರು ಕೋವಿಡ್–19 ಟೆಸ್ಟ್‌ಗೆ ಒಳಪಡುವುದು ಕಡ್ಡಾಯ.

ಆದರೆ ಭಾರತ ತಂಡಕ್ಕೆ ಕ್ವಾರಂಟೈನ್‌ನಲ್ಲಿ ಸ್ವಲ್ಪ ದಿನಗಳ ರಿಯಾಯಿತಿ ಸಿಗುವ ಭರವಸೆ ಇದೆ ಎಂಬುದು ಗಂಗೂಲಿ ಅಭಿಪ್ರಾಯ. ‘ಡಿಸೆಂಬರ್‌ನಲ್ಲಿ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದು ಖಚಿತ. ಆದರೆ ಕ್ವಾರಂಟೈನ್ ದಿನಗಳ ಬಗ್ಗೆ ಸ್ಷಷ್ಟ ಮಾಹಿತಿ ಈಗಲೇ ಲಭಿಸಿದ್ದರೆ ಚೆನ್ನಾಗಿತ್ತು. ದಿನಗಟ್ಟಲೆ ಹೋಟೆಲ್‌ ಕೊಠಡಿಯಲ್ಲಿ ಕುಳಿತುಕೊಂಡರೆ ಆಟಗಾರರು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ’ ಎಂದು ಮಾಧ್ಯಮ ಸಂಸ್ಥೆಯೊಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

‘ಮೆಲ್ಬರ್ನ್‌ ಹೊರತುಪಡಿಸಿದರೆ ಆಸ್ಟ್ರೇಲಿಯಾದಲ್ಲಿ ಕೊರೊನಾ ಹೆಚ್ಚು ಹಾನಿ ಮಾಡಲಿಲ್ಲ. ಆದ್ದರಿಂದ ನಮ್ಮ ತಂಡಕ್ಕೆ ಹೆಚ್ಚು ದಿನಗಳ ಕ್ವಾರಂಟೈನ್ ಅಗತ್ಯವೇ ಇಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದು ಗಂಗೂಲಿ ನುಡಿದರು.ಆಸ್ಟ್ರೇಲಿಯಾದಲ್ಲಿ ಈ ವರೆಗೆ ಒಂಬತ್ತು ಸಾವಿರ ಮಂದಿಯಲ್ಲಿ ಕೋವಿಡ್ –19 ದೃಢಪಟ್ಟಿದ್ದು ಈ ಪೈಕಿ 7500 ಮಂದಿ ಗುಣಮುಖರಾಗಿದ್ದಾರೆ. 107 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘ಕೊರೊನಾದಿಂದಾಗಿ ಬಿಸಿಸಿಐ ಕೂಡ ಅನೇಕ ಸವಾಲುಗಳಿಗೆ ಎದೆಯೊಡ್ಡಬೇಕಾಗಿ ಬಂದಿದೆ. ನಾಲ್ಕು ತಿಂಗಳಿಂದ ನಾವು ಯಾರೂ ಕಚೇರಿಗೆ ಕಾಲಿಟ್ಟಿಲ್ಲ. ಅಧ್ಯಕ್ಷನಾಗಿ ಏಳು–ಎಂಟು ತಿಂಗಳುಗಳಾಗಿವೆಯಷ್ಟೆ. ಅದರಲ್ಲಿ ನಾಲ್ಕು ತಿಂಗಳನ್ನು ಕಳೆದರೆ ಹೇಗೆ ಎಂಬುದನ್ನು ನೀವೇ ಊಹಿಸಬಲ್ಲಿರಿ. ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡುತ್ತೇವೆ. ಆದರೆ ಅದರ ಫಲಿತಾಂಶ ಅಷ್ಟಕ್ಕಷ್ಟೆ’ ಎಂದು ಅವರು ಹೇಳಿದರು.

ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಅಧಿಕಾರ ಅವಧಿಯನ್ನು ಹೆಚ್ಚಿಸುವ ಕುರಿತು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಕುರಿತು ಕೇಳಿದಾಗ ‘ಅಧಿಕಾರ ಅವಧಿ ವಿಸ್ತರಿಸಲು ಅವಕಾಶ ಸಿಗುವುದೋ ಇಲ್ಲವೋ ಗೊತ್ತಿಲ್ಲ’ ಎಂದಷ್ಟೇ ಹೇಳಿದರು.ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಗಂಗೂಲಿ ಮತ್ತು ಶಾ ಅವರ ಅಧಿಕಾರ ಅವಧಿ ಈ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT