ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹ ಕ್ರಿಕೆಟ್ ಮೈದಾನದಿಂದ ಹೊರಗಿದ್ದರೆ ಉತ್ತಮ: ಗೌತಮ್‌ ಗಂಭೀರ್‌

Published 3 ಸೆಪ್ಟೆಂಬರ್ 2023, 13:41 IST
Last Updated 3 ಸೆಪ್ಟೆಂಬರ್ 2023, 13:41 IST
ಅಕ್ಷರ ಗಾತ್ರ

ಮುಂಬೈ: ಏಷ್ಯಾಕಪ್ ಪಂದ್ಯದ ವೇಳೆ ಭಾರತ ಮತ್ತು ಪಾಕ್ ಕ್ರಿಕೆಟಿಗರ ನಡುವಿನ ಸೌಹಾರ್ದ ಮಾತುಕತೆ ಬಗ್ಗೆ ಅಸಮಾಧಾನ ಹೊರಹಾಕಿರುವ ಭಾರತದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್‌ ಗಂಭೀರ್‌, ‘ಭಾರತ ತಂಡ 140 ಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದು, ಪಂದ್ಯದ ವೇಳೆ ಸ್ನೇಹ–ಸೌಹಾರ್ದತೆ ತೋರಿಸುವುದು ಉಚಿತವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾದ ಪಲೇಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್‌ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ವೇಳೆ ಕ್ರೀಡಾಂಗಣದ ಒಳಗೆ ಇಂಡಿಯಾ ಮತ್ತು ಪಾಕ್‌ ಆಟಗಾರರು ಪರಸ್ಪರ ಸ್ನೇಹದಿಂದ ವರ್ತಿಸಿದ್ದರು. ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

ಸ್ಟಾರ್ ಸ್ಟೋರ್ಟ್ ಚರ್ಚೆಯಲ್ಲಿ ಭಾಗವಹಿಸಿದ್ದ ಗೌತಮ್‌ ಗಂಭೀರ್‌, ಆಟಗಾರರ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸ್ನೇಹ ಕ್ರೀಡಾಂಗಣದಿಂದ ಹೊರಗಿದ್ದರೆ ಉತ್ತಮ ಎಂದು ಹೇಳಿದ್ದಾರೆ.

‘ಆಟ ಮುಗಿದ ನಂತರ ನೀವು ಎಷ್ಟು ಬೇಕಾದರೂ ಸ್ನೇಹದಿಂದ ಇರಿ. ಆದರೆ ಆಟ ನಡೆಯುತ್ತಿರುವ ವೇಳೆ ಇದು ಸರಿಯಲ್ಲ. ಏಕೆಂದರೆ ನೀವು ಕೇವಲ ನಿಮ್ಮನ್ನು ಪ್ರತಿನಿಧಿಸುತ್ತಿಲ್ಲ, 140 ಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದೀರಿ’ ಎಂದು ಹೇಳಿದರು.

'ಇತ್ತೀಚಿನ ದಿನಗಳಲ್ಲಿ ಪಂದ್ಯದ ವೇಳೆಯೇ ಪ್ರತಿಸ್ಪರ್ಧಿ ತಂಡಗಳ ಆಟಗಾರರು ಪರಸ್ಪರ ಬೆನ್ನು ತಟ್ಟಿಕೊಳ್ಳುವುದು, ಮುಷ್ಠಿಗೆ ಮುಷ್ಠಿ ಹೊಡೆದುಕೊಳ್ಳುವುದನ್ನು ನೋಡುತ್ತೇವೆ. ಕೆಲವು ವರ್ಷಗಳ ಹಿಂದೆ ಇಂತಹ ವರ್ತನೆಯನ್ನು ನಾವು ಕಂಡಿರಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ವೇಳೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರೊಂದಿಗೆ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾವಿಬ್ಬರು ಒಳ್ಳೆಯ ಸ್ನೇಹಿತರು. ನಾನು ನನ್ನ ಬ್ಯಾಟ್‌ ಅನ್ನು ಅವರಿಗೆ ನೀಡಿದ್ದೇನೆ. ಹಾಗೆಯೇ ಎಷ್ಟೋ ಬಾರಿ ಅವರ ಬ್ಯಾಟ್‌ ಅನ್ನು ನನಗೆ ನೀಡಿದ್ದಾರೆ. ಕಮ್ರಾನ್ ನೀಡಿದ ಬ್ಯಾಟ್‌ನಲ್ಲಿಯೇ ನಾನು ಇಡೀ ಸೀಸನ್ ಅನ್ನು ಆಡಿದ್ದೇನೆ. ಈಗಲೂ ಅವರ ಸಂಪರ್ಕದಲ್ಲಿದ್ದೇನೆ’ ಎಂದು ಹೇಳಿದರು.

ಗೌತಮ್‌ ಗಂಭೀರ್‌ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT