ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಟೈಟನ್ಸ್‌ಗೆ ಐಪಿಎಲ್ ಕಿರೀಟ

ಪದಾರ್ಪಣೆ ಆವೃತ್ತಿಯಲ್ಲಿ ಚಾಂಪಿಯನ್‌; ಹಾರ್ದಿಕ್ ಆಲ್‌ರೌಂಡ್ ಆಟ; ರಾಜಸ್ಥಾನ ರಾಯಲ್ಸ್ ರನ್ನರ್ಸ್ ಅಪ್
Last Updated 29 ಮೇ 2022, 19:44 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡವು ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ 15ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ 7 ವಿಕೆಟ್‌ಗಳಿಂದ ಜಯಿಸಿತು.2008ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡದ ಕನಸು ಕಮರಿತು.ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ3 ಮತ್ತು 34 ರನ್ ) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ತಂಡವು ವಿಜಯೋತ್ಸವ ಆಚರಿಸಿತು.

131 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೈಟನ್ಸ್‌ 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತು. 19ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆತ್ತಿದ ಯುವ ಬ್ಯಾಟರ್ ಶುಭಮನ್ ಗಿಲ್ ಗೆಲುವಿನ ಕೇಕೆ ಹಾಕಿದರು. ಸುಡ್ಡು
ಮದ್ದುಗಳ ಬೆಳಕು ಪ್ರಜ್ವಲಿಸಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಪುಟಿದೆದ್ದಿತು. ಗಣ್ಯರ ಗ್ಯಾಲರಿಯಿಂದ ಓಡಿಬಂದ ನತಾಶಾ ಸ್ಟಾಂಕೊವಿಚ್ ತಮ್ಮ ಪತಿ ಹಾರ್ದಿಕ್ ಅವರನ್ನು ಆಲಂಗಿಸಿಕೊಂಡು ಅಭಿನಂದಿಸಿದರು.

ಹಾರ್ದಿಕ್ ಬೌಲಿಂಗ್: ಪಂದ್ಯದಲ್ಲಿ ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 130 ರನ್‌ ಗಳಿಸಿತು. ಹಾರ್ದಿಕ್ (17ಕ್ಕೆ3) ಪರಿಣಾಮಕಾರಿ ದಾಳಿಯಿಂದಾಗಿ ರಾಜಸ್ಥಾನ ಬ್ಯಾಟಿಂಗ್ ಪಡೆಯು ವೈಫಲ್ಯ ಅನುಭವಿಸಿತು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರೊನ್ ಹೆಟ್ಮೆಯರ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿದ ಪಾಂಡ್ಯ ತಮ್ಮ ತಂಡದ ಮೇಲುಗೈಗೆ ಕಾರಣರಾದರು.

ಎರಡನೇ ಕ್ವಾಲಿಫೈಯರ್‌ನಲ್ಲಿ ರನ್‌ಗಳ ಹೊಳೆ ಹರಿಸಿದ್ದ ರಾಜಸ್ಥಾನ ತಂಡವು ಇಲ್ಲಿ ನೂರು ರನ್‌ಗಳ ಮೊತ್ತ ದಾಟಲು ಪರದಾಡಿತು. ಸಾಯಿ ಕಿಶೋರ್, ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಮುಂದೆ ದೊಡ್ಡ ಮೊತ್ತ ಗಳಿಸಲು ರಾಜಸ್ಥಾನಕ್ಕೆ
ಸಾಧ್ಯವಾಗಲಿಲ್ಲ.

ಗಿಲ್‌ ಕ್ಯಾಚ್ ಕೈಬಿಟ್ಟರು: ಶುಭಮನ್ ಗಿಲ್‌ ಅವರಿಗೆ ಎರಡು ಬಾರಿ ಕ್ಯಾಚ್ ಕೈಚೆಲ್ಲಿದ್ದು ರಾಯಲ್ಸ್‌ ತಂಡಕ್ಕೆ ದುಬಾರಿಯಾಯಿತು. ಮೊದಲ ಮತ್ತು ಆರಣೇ ಓವರ್‌ನಲ್ಲಿ ಅವರಿಗೆ ಜೀವದಾನ ಲಭಿಸಿತ್ತು.

ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಎರಡನೇ ಓವರ್‌ನಲ್ಲಿಯೇ ಪ್ರಸಿದ್ಧ ಕೃಷ್ಣ ಪೆಟ್ಟು ಕೊಟ್ಟರು. ವೃದ್ಧಿಮಾನ್ ಸಹಾ ವಿಕೆಟ್ ಎಗರಿಸಿದ ಪ್ರಸಿದ್ಧ ಸಂಭ್ರಮಿಸಿದರು. ಐದನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಗಳಿಸಿದ ಟ್ರೆಂಟ್‌ ಬೌಲ್ಟ್ ಮತ್ತೊಂದು ಯಶಸ್ಸು ಗಳಿಸಿಕೊಟ್ಟರು. ಆದರೆ, ಈ ಸಂಭ್ರಮಕ್ಕೆ ಗಿಲ್ (45; 43ಎ) ಮತ್ತು ಪಾಂಡ್ಯ ತಣ್ಣೀರು ಎರಚಿದರು.

ಮೂರನೇ ವಿಕೆಟ್ ಗೆ 63 ರನ್‌ ಸೇರಿಸಿದ ಈ ಜೊತೆಯಾಟವನ್ನು ಲೆಗ್‌ಸ್ಪಿನ್ನರ್ ಚಾಹಲ್ ಮುರಿದರು. ಹಾರ್ದಿಕ್ ವಿಕೆಟ್ ಗಳಿಸಿದ ಚಾಹಲ್ ತಂಡದಲ್ಲಿ ಮತ್ತೆ ನಿರೀಕ್ಷೆ ಮೂಡಿಸಿದರು. ಆದರೆ ಗಿಲ್ ಜೊತೆ ಸೇರಿದ ಡೇವಿಡ್ ಮಿಲ್ಲರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT