ಮುಂಬೈ: ‘ನನ್ನ ಮಗನ ಭವಿಷ್ಯಕ್ಕೆ ಅಡ್ಡಗಾಲು ಹಾಕಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಯುವರಾಜ್ ಸಿಂಗ್ ತಂದೆ, ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಹೇಳಿದ್ದಾರೆ.
ಜೀ ಸ್ವಿಚ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯೋಗರಾಜ್ ಸಿಂಗ್, ‘ಎಷ್ಟೇ ದೊಡ್ಡ ಕ್ರಿಕೆಟಿಗನಾದರೂ ಧೋನಿ ನನ್ನ ಕ್ಷಮೆಗೆ ಅರ್ಹನಲ್ಲ’ ಎಂದಿದ್ದಾರೆ.
‘ಧೋನಿ ತನ್ನ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ. ಅವರೊಬ್ಬ ದೊಡ್ಡ ಕ್ರಿಕೆಟಿಗ. ಆದರೆ ನನ್ನ ಮಗನ ವಿರುದ್ಧ ಅವರು ಏನು ಮಾಡಿದ್ದಾರೋ ಅದನ್ನು ಎಂದಿಗೂ ಕ್ಷಮಿಸಲಾಗದು’ ಎಂದರು.
‘ಆ ವ್ಯಕ್ತಿ(ಧೋನಿ) ನನ್ನ ಮಗನ ಭವಿಷ್ಯವನ್ನು ನಾಶ ಮಾಡಿದ್ದಾನೆ. ತಪ್ಪು ಮಾಡಿದವರು ಯಾರೇ ಆಗಲಿ, ಅವರು ನನ್ನ ಕುಟುಂಬ ಸದಸ್ಯರೇ ಆಗಲಿ ಅಥವಾ ನನ್ನ ಮಕ್ಕಳೇ ಆಗಲಿ ನಾನು ಅವರನ್ನು ಕ್ಷಮಿಸುವುದಿಲ್ಲ. ಧೋನಿಯ ಪ್ರಭಾವ ಇಲ್ಲದಿದ್ದರೆ ನನ್ನ ಮಗ ಭಾರತ ತಂಡ ಪ್ರತಿನಿಧಿಸುವುದನ್ನು ಇನ್ನೂ ನಾಲ್ಕೈದು ವರ್ಷ ಮುಂದುವರಿಸಬಹುದಿತ್ತು’ ಎಂದು ಅಸಮಾಧಾನ ಹೊರಹಾಕಿದರು.
2015ರ ಭಾರತ ವಿಶ್ವಕಪ್ ತಂಡದಲ್ಲಿ ಯುವರಾಜ್ ಸಿಂಗ್ ಅವರಿಗೆ ಸ್ಥಾನ ನೀಡದಿರುವುದಕ್ಕೆ ಧೋನಿಯೇ ಕಾರಣ ಎಂದು ಆರೋಪಿಸಿರುವ ಯೋಗರಾಜ್ ಸಿಂಗ್, ತಂಡದಲ್ಲಿ ನನ್ನ ಮಗ ಇರುವುದು ಧೋನಿಗೆ ಇಷ್ಟವಿರಲಿಲ್ಲ ಎಂದು ಆಗ ಹೇಳಿದ್ದರು. ಅದಾದ ಬಳಿಕ ಹಲವು ಸಂದರ್ಶನಗಳಲ್ಲಿ ಯೋಗರಾಜ್ ಸಿಂಗ್, ಧೋನಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.