ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇಯಲ್ಲಿ ಟಿ–20 ವಿಶ್ವಕಪ್: ಸುರಕ್ಷಿತ ಟೂರ್ನಿ ಆಯೋಜನೆಯೇ ಪ್ರಮುಖ ಗುರಿ -ಐಸಿಸಿ

Last Updated 29 ಜೂನ್ 2021, 22:00 IST
ಅಕ್ಷರ ಗಾತ್ರ

ದುಬೈ: ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಸುರಕ್ಷಿತವಾಗಿ ಆಯೋಜಿಸುವುದೇ ಪ್ರಮುಖ ಗುರಿ ಯಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ.

ಅಕ್ಬೋಬರ್ 17 ರಿಂದ ನವೆಂಬರ್ 14ರವರೆಗೆ ಟೂರ್ನಿಯನ್ನು ಆಯೋಜಿಸುವುದಾಗಿ ಮಂಗಳವಾರ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ನಡೆಯಲಿದ್ದ ಈ ಟೂರ್ನಿಯನ್ನು ಕೋವಿಡ್ ಆತಂಕದ ಕಾರಣ ಯುಎಇಯಲ್ಲಿ ಟೂರ್ನಿಯನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಮ್ಮತಿಸಿದೆ.

'ತಟಸ್ಥ ತಾಣದಲ್ಲಿ ಬಿಸಿಸಿಐ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್‌ ಝಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮನ್‌ ಕ್ರಿಕೆಟ್‌ ಅಕಾಡೆಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ' ಎಂದು ಐಸಿಸಿ ತಿಳಿಸಿದೆ.

ಟೂರ್ನಿಗೆ ಪೂರ್ವಭಾವಿಯಾಗಿ ಒಮನ್ ಮತ್ತು ಯುಎಇಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಅದರಲ್ಲಿ ಎಂಟು ತಂಡಗಳು ಆಡಲಿವೆ. ಈ ಸುತ್ತಿನಲ್ಲಿ ಅರ್ಹತೆ ಪಡೆಯುವ ನಾಲ್ಕು ತಂಡಗಳು ಮುಖ್ಯಸುತ್ತಿನಲ್ಲಿ (ಸೂಪರ್ 12) ಕಣಕ್ಕಿಳಿಯಲಿವೆ. ಪ್ರಾಥಮಿಕ ಸುತ್ತಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್‌, ಸ್ಕಾಟ್ಲೆಂಡ್, ನಮಿಬಿಯಾ, ಒಮನ್ ಮತ್ತು ಪಪುವಾ ನ್ಯೂಗಿನಿ ತಂಡಗಳು ಆಡಲಿವೆ. ಭಾರತ ಸೇರಿದಂತೆ ಎಂಟು ಪ್ರಮುಖ ತಂಡಗಳು ಈಗಾಗಲೇ ಪ್ರಧಾನ ಸುತ್ತಿನಲ್ಲಿವೆ.

‘ತಟಸ್ಥ ತಾಣವಾಗಿ ಉತ್ತಮ ಆಯೋಜನೆ ಮಾಡುವಲ್ಲಿ ಯುಎಇ ಕ್ರಿಕೆಟ್ ಮಂಡಳಿ ಸಿದ್ಧಹಸ್ತವಾಗಿದೆ. ಆದ್ದರಿಂದ ಟೂರ್ನಿಯನ್ನು ಸುರಕ್ಷಿತವಾಗಿ ಮುಗಿಸುವ ಭರವಸೆ ಇದೆ. ಈ ವಿಷಯದಲ್ಲಿ ಬಿಸಿಸಿಐನ ಸಂಪೂರ್ಣ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇವೆ‘ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಅಲಾರ್ಡಿಸ್ ತಿಳಿಸಿದ್ದಾರೆ.

2016ರಲ್ಲಿ ಭಾರತವು ಟಿ20 ವಿಶ್ವಕಪ್‌ ಆಯೋಜಿಸಿತ್ತು. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. 2022ರಲ್ಲಿ ಆಸ್ಟ್ರೇಲಿಯಾ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆ ಇದೆ.

***

ಭಾರತದಲ್ಲಿಯೇ ಟೂರ್ನಿ ಆಯೋಜನೆಯಾಗಿದ್ದರೆ ಬಹಳ ಸಂತಸವಾಗುತ್ತಿತ್ತು ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ಮಹತ್ವದ ಟೂರ್ನಿಗೆ ಅಡೆತಡೆಯಾಗದಿರಲು ಈ ಕ್ರಮ ಅನಿವಾರ್ಯ
–ಸೌರವ್ ಗಂಗೂಲಿ,ಬಿಸಿಸಿಐ ಅಧ್ಯಕ್ಷ

***

ಬಯೋ ಬಬಲ್ ವ್ಯವಸ್ಥೆಯಲ್ಲಿ ಬಹುತಂಡಗಳ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸುವ ಸವಾಲಿನಲ್ಲಿ ಜಯಿಸುವ ಭರವಸೆ ಇದೆ.
–ಜೆಫ್ ಅಲಾರ್ಡಿಸ್,ಸಿಎಒ, ಐಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT