ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ –ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೇ ಹೊಸ ನಿಯಮ ಜಾರಿ: ಐಸಿಸಿ

ದ್ವಿತೀಯ ಡಬ್ಲುಟಿಸಿ: ಪಂದ್ಯದ ಜಯಕ್ಕೆ 12 ಅಂಕ
Last Updated 30 ಜೂನ್ 2021, 12:54 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಎರಡನೇ ವಿಶ್ವ ಟೆಸ್ಟ್ ಚಾಂ‍ಪಿಯನ್‌ಷಿಪ್‌ ನಲ್ಲಿ ಹೊಸ ರೀತಿಯ ಪಾಯಿಂಟ್ಸ್‌ ಪದ್ಧತಿಯನ್ನು ಅಂತರರಾಷ್ಟ್ರೀಯ ಕ್ರಿಕಟ್ ಕೌನ್ಸಿಲ್ (ಐಸಿಸಿ) ಜಾರಿಗೊಳಿಸಲಿದೆ.

ಆಗಸ್ಟ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಟೆಸ್ಟ್‌ಗಳ ಸರಣಿಯಿಂದ ಡಬ್ಲ್ಯುಟಿಸಿ ಆರಂಭವಾಗಲಿದೆ. ಪ್ರತಿ ಪಂದ್ಯದ ಜಯಕ್ಕೆ 12 ಅಂಕಗಳನ್ನು ನೀಡಲಾಗುವುದು. ಟೈ ಆದರೆ ಆರು ಮತ್ತು ಡ್ರಾ ಆದರೆ ನಾಲ್ಕು ಪಾಯಿಂಟ್‌ಗಳನ್ನು ನೀಡಲಾಗುವುದು.

ಇದು ಎಲ್ಲ ಸರಣಿಗಳಿಗೂ ಅನ್ವಯಿಸಲಿದೆ. ತಂಡಗಳು ಆಡಿದ ಪಂದ್ಯಗಳ ಸಂಖ್ಯೆ ಮತ್ತು ಗಳಿಸಿದ ಅಂಕಗಳ ಶೇಕಡಾವಾರು ಫಲಿತಾಂಶದ ಮೇಲೆ ರ‍್ಯಾಂಕಿಂಗ್ ನಿರ್ಧರಿಸಲಾಗುವುದು. ಕಳೆದ ಬಾರಿಯಂತೆ ಸರಣಿ ಜಯದ ಅಧಾರದಲ್ಲಿ ಪಾಯಿಂಟ್ಸ್‌ಗಳ ಹಂಚಿಕೆ ಇರುವುದಿಲ್ಲ.

‘ಪ್ರತಿಯೊಂದು ಪಂದ್ಯದ ಜಯಕ್ಕೂ ಗರಿಷ್ಠ 12 ಅಂಕಗಳನ್ನು ನೀಡಲಾಗುವುದು. ಸರಣಿಯಲ್ಲಿ ಎಷ್ಟೇ ಪಂದ್ಯಗಳಿದ್ದರೂ ಇದು ಅನ್ವಯಿಸುತ್ತದೆ’ ಎಂದು ಐಸಿಸಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮುಂದಿನ ವಾರದಲ್ಲಿ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕರ ಸಮಿತಿಯೂ ಮರುಪರಿಶೀಲನೆಯನ್ನೂ ಮಾಡಲಿದೆ.

‘ಪಾಯಿಂಟ್ಸ್‌ ಪದ್ಧತಿಯನ್ನು ಸರಳೀಕರಣಗೊಳಿಸುವ ಉದ್ದೇಶ ಈ ಪ್ರಯತ್ನದ ಹಿಂದೆ ಇದೆ. ಎಲ್ಲ ತಂಡಗಳಿಗೂ ಸಮಾನವಾದ ವೇದಿಕೆ ಸಿಗುವಂತಾಗಬೇಕು. ಇದರಿಂದ ಉತ್ತಮ ಪೈಪೋಟಿ ಹೆಚ್ಚುವುದರಿಂದ ಚಾಂಪಿಯನ್‌ಷಿಪ್‌ ಆಸಕ್ತಿಕರವಾಗುತ್ತದೆ‘ ಎಂದು ಐಸಿಸಿ ಸದಸ್ಯರು ಹೇಳಿದ್ದಾರೆ.

2023ರಲ್ಲಿ ಎರಡನೇ ಡಬ್ಲ್ಯುಟಿಸಿ ಫೈನಲ್ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್‌ ಸರಣಿ ಹೊರತುಪಡಿಸಿದರೆ, ಆ್ಯಷಸ್ ಸರಣಿಯಲ್ಲಿ ಐದು ಟೆಸ್ಟ್‌ಗಳು ನಡೆಯಲಿವೆ. ಉಳಿದರೆ ಬೇರೆ ಸರಣಿಗಳಲ್ಲಿ ಇಷ್ಟು ಸಂಖ್ಯೆಯ ಪಂದ್ಯಗಳಿಲ್ಲ.

ಮುಂದಿನ ವರ್ಷ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಆಡಲಿದೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತು ತಂಡಗಳು ಇದ್ದು, ಪ್ರತಿಯೊಂದು ತಂಡವೂ ಆರು ಸರಣಿಗಳಲ್ಲಿ ಆಡಲಿವೆ. ಅದರಲ್ಲಿ ಮೂರು ತವರು ಮತ್ತು ಮೂರು ವಿದೇಶಿ ತಾಣಗಳಲ್ಲಿ ಆಡಲಿವೆ.

‘ಇಂಗ್ಲೆಂಡ್ ತಂಡವು (21) ಅತಿ ಹೆಚ್ಚು ಪಂದ್ಯಗಳನ್ನು ಈ ಬಾರಿ ಆಡಲಿದೆ. ಭಾರತ (19), ಆಸ್ಟ್ರೇಲಿಯಾ (18), ದಕ್ಷಿಣ ಆಫ್ರಿಕಾ (15), ಪಾಕಿಸ್ತಾನ (14), ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ (13), ವೆಸ್ಟ್ ಇಂಡೀಸ್ (13) ಮತ್ತು ಶ್ರೀಲಂಕಾ (13) ಆಡಲಿವೆ‘ ಎಂದು ಐಸಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT