ಶುಕ್ರವಾರ, ಜೂನ್ 5, 2020
27 °C
ಅಂಗವಿಕಲ ಆಟಗಾರರಿಗೆ ನೆರವು ನೀಡಿದ ಆಲ್‌ರೌಂಡರ್‌

ಹೋಲಿಕೆಯಿಂದ ಸಹಜ ಆಟ ಕೈತಪ್ಪುವ ಸಾಧ್ಯತೆ: ಆಲ್‌ರೌಂಡರ್‌ ವಿಜಯ್‌ ಶಂಕರ್‌

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ :ತಮಗಿಂತ ಹಾರ್ದಿಕ್‌ ಪಾಂಡ್ಯ ಹೆಚ್ಚು ಬೇಡಿಕೆಯ ಆಲ್‌ರೌಂಡರ್‌ ಎಂದು ಹೋಲಿಸಿಕೊಂಡು ಒತ್ತಡಕ್ಕೆ ಸಿಲುಕಿಕೊಳ್ಳಲು ಭಾರತ ತಂಡದ ಇನ್ನೊಬ್ಬ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಸಿದ್ಧರಿಲ್ಲ. ಪಂದ್ಯ ಗೆಲ್ಲಿಸುವ ಪ್ರದರ್ಶನಗಳನ್ನು ನೀಡುವುದಕ್ಕೆ ಹೆಚ್ಚು ಗಮನಹರಿಸಲು  ತಮಿಳುನಾಡಿನ ಈ ಆಲ್‌ರೌಂಡರ್‌ ನಿರ್ಧರಿಸಿದ್ದಾರೆ.

29 ವರ್ಷದ ವಿಜಯ್‌ ಶಂಕರ್‌ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಪಾದದ ಮೂಳೆ ಮುರಿತದಿಂದ ಅವರು ಕೆಲ ಪಂದ್ಯಗಳನ್ನು ಆಡಿದ ನಂತರ  ವಾಪಸಾಗಬೇಕಾಯಿತು. ಇದಾದ ನಂತರ ಅವರು ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಹಾರ್ದಿಕ್‌ ಪಾಂಡ್ಯ ಗಾಯಾಳಾದರೂ, ಅವರ ಸ್ಥಾನದಲ್ಲಿ ಇನ್ನೊಬ್ಬ ಆಲ್‌ರೌಂಡರ್‌ ಶಿವಂ ದುಬೆ ಬೇರೂರಿದ್ದಾರೆ. ಈಗ ಪಾಂಡ್ಯ ಕೂಡ ಫಿಟ್‌ ಆಗಿ ತಂಡದ ಕದ ಬಡಿಯುತ್ತಿರುವ ಕಾರಣ ತಮಿಳುನಾಡು ಆಟಗಾರ ಪುನರಾಗಮನದ ಹಾದಿ ಸ್ವಲ್ಪ ಕಠಿಣವಾಗಿದೆ.

‘ಪಾಂಡ್ಯ ನಂಬರ್‌ ವನ್‌ ಆಯ್ಕೆ ಎಂದು ಹೋಲಿಸಿ ಒತ್ತಡಕ್ಕೆ ಒಳಗಾದರೆ, ನನ್ನ ಸಹಜ ಆಟ ಕೈಬಿಟ್ಟುಹೋಗುವ ಆತಂಕವಿದೆ. ಪಂದ್ಯ ಗೆಲ್ಲಿಸುವ ಪ್ರದರ್ಶನಗಳನ್ನು ನೀಡಿದರೆ ನಾನೂ ಪರಿಗಣನೆಯಲ್ಲಿರುತ್ತೇನೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

‘ಬೇರೆ ಆಟಗಾರರು ಏನು ಮಾಡುತ್ತಾರೆ ಎಂದು ಯೋಚಿಸಲು ನಾನು ಹೋಗುವುದಿಲ್ಲ’ ಎಂದಿದ್ದಾರೆ.

‘ಬರೇ ತಂಡದಲ್ಲಿ ಸ್ಥಾನ ಪಡೆಯುವುದಷ್ಟೇ ನನ್ನ ಉದ್ದೇಶವಲ್ಲ. ಉತ್ತಮ ಪ್ರದರ್ಶನದೊಡನೆ ಮಿಂಚಿದರಷ್ಟೇ ದೀರ್ಘಕಾಲ ಉಳಿದುಕೊಳ್ಳಬಹುದು’ ಎಂದು 45 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶಂಕರ್‌ ಹೇಳಿದ್ದಾರೆ.

ಮನೆಯ ಮಹಡಿ ಮೇಲೆ ಅವರು ಆಸ್ಟ್ರೊ ಟರ್ಫ್‌ ವಿಕೆಟ್‌ ಹೊಂದಿದ್ದಾರೆ. ಆದರೆ ಲಾಕ್‌ಡೌನ್‌ ಅವಧಿಯಲ್ಲಿ ಅವರು ನೆಟ್‌ ಪ್ರಾಕ್ಟೀಸ್‌ ಮಾಡಿಲ್ಲ. ‘ನಾನು ಅಭ್ಯಾಸ ಮಾಡುವಾಗ ಇಬ್ಬರು ಆಟಗಾರರು ಬೌಲ್‌ ಮಾಡಲು ಬರುತ್ತಾರೆ. ಆದರೆ ನಿರ್ಬಂಧದ ಕಾರಣ ಅವರನ್ನು ಕರೆಯಲು ಆಗಲಿಲ್ಲ. ವ್ಯಾಯಾಮಗಳನ್ನು ಮಾಡಿದೆ. ಇನ್ನು ಅಭ್ಯಾಸ ಆರಂಭಿಸುವೆನೆಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ತಮಿಳುನಾಡು ಅಂಗವಿಕಲರ ತಂಡಕ್ಕೆ ವಿಜಯ್‌ ಶಂಕರ್‌ ಪೋಷಕರಾಗಿದ್ದಾರೆ. ‘ಈ ಆಟಗಾರರಲ್ಲಿ ಹೆಚ್ಚಿನವರು ದಿನಗೂಲಿ ಮೇಲೆ ಬದುಕುವವರು. ಹಸಿವಿನಿಂದ ತೊಂದರೆಯಾಗಬಾರದೆಂದು   ಲಾಕ್‌ಡೌನ್‌ ಸಮಯದಲ್ಲಿ ಅವರಿಗೆ ಸ್ವಲ್ಪ ಆರ್ಥಿಕ ನೆರವು ನೀಡಿದೆ’ ಎಂದು ಅವರು ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು