ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಮಿಂಚಿದರೆ ಕೆ.ಎಲ್‌.ರಾಹುಲ್‌ಗೆ ‘ಪುರಸ್ಕಾರ‘

ಲಖನೌ ಸೂಪರ್‌ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಮತ
Published 20 ಮಾರ್ಚ್ 2024, 23:42 IST
Last Updated 20 ಮಾರ್ಚ್ 2024, 23:42 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಅವರು ಉತ್ತಮವಾಗಿ ಆಡಿದರೆ ಪುರಸ್ಕಾರ ರೂಪವಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಗಳಿಸುವರು ಎಂದು ಲಖನೌ ಸೂಪರ್‌ ಜೈಂಟ್ಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ತೊಡೆಯ ಸ್ನಾಯುವಿನ ಗಾಯದ ಚಿಕಿತ್ಸೆಯ ನಂತರ ಕಣಕ್ಕೆ ಮರಳುತ್ತಿರುವ ರಾಹುಲ್ ಅವರು ಐಪಿಎಲ್‌ನಲ್ಲಿ ಮಿಂಚುವ ನಿರೀಕ್ಷೆ ಇದೆ. 

‘ಒಂದೊಮ್ಮೆ ತಂಡವು  ಉತ್ತಮವಾಗಿ ಆಡಿದರೆ ಎಲ್ಲರಿಗೂ ಪುರಸ್ಕಾರ ಲಭಿಸುತ್ತದೆ. ಆದರೆ ನಾಯಕನಾಗಿ ರಾಹುಲ್  ತಂಡವನ್ನು ಐಪಿಎಲ್ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದರೆ  ಸಂಪೂರ್ಣ ಶ್ರೇಯ ಪಡೆಯುತ್ತಾರೆ. ಅಲ್ಲದೇ ಅವರು ಬ್ಯಾಟಿಂಗ್‌ನಲ್ಲಿಯೂ ಉತ್ತಮ ಸಾಧನೆ ಮಾಡಿ, ಕೀಪಿಂಗ್‌ನಲ್ಲಿಯೂ ಉಪಯುಕ್ತ ಆಟವಾಡಿದರೆ ದೊಡ್ಡ ಅವಕಾಶ ಅವರ ಪಾಲಿಗೆ ಒಲಿದು ಬರುತ್ತದೆ’ ಎಂದು ಲ್ಯಾಂಗರ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. 

‘ರಾಹುಲ್ ಅವರ ಜೊತೆಗೆ ರವಿ ಬಿಷ್ಣೋಯಿ ಕೂಡ ಚೆನ್ನಾಗಿ ಆಡಿದರೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆಯಬಹುದು’ಎಂದೂ ಹೇಳಿದ್ಧಾರೆ.

‘ರವಿ ಬಿಷ್ಣೋಯಿ ಉತ್ತಮ ಬೌಲರ್ ಆಗಿದ್ದಾರೆ. ಅವರು ಅಭ್ಯಾಸ ಮಾಡುವ ರೀತಿಯನ್ನು ಗಮನಿಸಿದ್ದೇನೆ. ಚೈತನ್ಯಭರಿತರಾಗಿದ್ದಾರೆ. ಮಿಶಿ (ಅಮಿತ್ ಮಿಶ್ರಾ) ಅವರಂತಹ ಉತ್ತಮ ಲೆಗ್‌ಸ್ಪಿನ್ನರ್‌ ಇನ್ನೊಬ್ಬರಿಲ್ಲ. ಯುವ ಬೌಲರ್ ಎಂ. ಸಿದ್ಧಾರ್ಥ್ ಕೂಡ ಭರವಸೆ ಮೂಡಿಸಿದ್ದಾರೆ. ಕೃಷ್ಣಪ್ಪ ಗೌತಮ್ ಕೂಡ ಇದ್ದಾರೆ’ ಎಂದು ಲ್ಯಾಂಗರ್ ಹೇಳಿದರು. 

ಮುಂಬೈ ಇಂಡಿಯನ್ಸ್‌ಗೆ ಮೆಪಾಕಾ

ಮುಂಬೈ (ಪಿಟಿಐ): ಮುಂಬೈ ಇಂಡಿಯನ್ಸ್ ತಂಡವು ದಕ್ಷಿಣ ಆಫ್ರಿಕಾದ ಕೆವೆನಾ ಮೆಪಾಕಾ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.  ಗಾಯಗೊಂಡಿರುವ ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕಾ ಅವರ ಬದಲಿಗೆ ಕೆವೆನಾ ಅವರನ್ನು ಮುಂಬೈ ತಂಡವು ಆಯ್ಕೆ ಮಾಡಿಕೊಂಡಿದೆ. 23 ವರ್ಷದ ಮಧುಶಂಕಾ ಅವರು ಸ್ನಾಯುಸೆಳೆತದಿಂದ ಬಳಲಿದ್ದಾರೆ. ಈಚೆಗೆ ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಅವರು ಗಾಯಗೊಂಡಿದ್ದರು. 

ಐಪಿಎಲ್‌ಗಾಗಿ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ  ಮಧುಶಂಕಾ ಅವರನ್ನು ₹ 4.6 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಹೋದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ 9 ಪಂದ್ಯಗಳಲ್ಲಿ ಆಡಿದ್ದ ಮಧುಶಂಕಾ 21 ವಿಕೆಟ್‌ಗಳನ್ನು ಗಳಿಸಿದ್ದರು.  ದಕ್ಷಿಣ ಆಫ್ರಿಕಾದ 17 ವರ್ಷದ ಕೆವೆನಾ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದರು. ಅವರು 21 ವಿಕೆಟ್ ಗಳಿಸಿದ್ದರು.  ಅವರಿನ್ನೂ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡದಲ್ಲಿ ಆಡಿಲ್ಲ. 

‘ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಎಸೆತಗಳನ್ನು ಹಾಕುವ ಸಾಮರ್ಥ್ಯ ಈ ಯುವ ಬೌಲರ್‌ಗೆ ಇದೆ. ಡೆತ್ ಬೌಲಿಂಗ್‌ನಲ್ಲಿ ಯಾರ್ಕರ್ ಪ್ರಯೋಗವನ್ನೂ ಮಾಡಬಲ್ಲರು‘ ಎಂದು ಮುಂಬೈ ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಮಿ ಬದಲು ಸಂದೀಪ್ 

ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಮಧ್ಯಮವೇಗಿ ಸಂದೀಪ್ ವಾರಿಯರ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.  ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಹಿಮ್ಮಡಿಯ ಶಸ್ತ್ರಚಿಕಿತ್ಸೆಗೊಳಗಾಗಿದ್ದು ವಿಶ್ರಾಂತಿಯಲ್ಲಿದ್ದಾರೆ. ಆದ್ದರಿಂದ ಅವರ ಸ್ಥಾನಕ್ಕೆ ಸಂದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.  2019ರಿಂದ ಇಲ್ಲಿಯವರೆಗೆ ಸಂದೀಪ್ ಅವರು ಐಪಿಎಲ್‌ನಲ್ಲಿ ಐದು ಪಂದ್ಯಗಳಲ್ಲಿ ಆಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT