ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಹನುಮವಿಹಾರಿ ಬಂಡಾಯ

ಮುಂದೆಂದೂ ಆಂಧ್ರ ತಂಡಕ್ಕೆ ಆಡುವುದಿಲ್ಲವೆಂದ ಬ್ಯಾಟರ್
Published 26 ಫೆಬ್ರುವರಿ 2024, 15:49 IST
Last Updated 26 ಫೆಬ್ರುವರಿ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ‘ಆಂಧ್ರ ಕ್ರಿಕಟ್ ಸಂಸ್ಥೆಯ ಕೀಳು ಧೋರಣೆಯು ನನ್ನ ಆತ್ಮಗೌರವಕ್ಕೆ ಚ್ಯುತಿ ತಂದಿದೆ. ಮುಂದೆಂದೂ ನಾನು ಈ ತಂಡಕ್ಕೆ ಆಡುವುದಿಲ್ಲ‘ ಎಂದು ಕ್ರಿಕೆಟಿಗ ಹನುಮವಿಹಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ  ಇಂದೋರ್‌ನಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮಧ್ಯಪ್ರದೇಶದ ಎದುರು ಆಂಧ್ರ ತಂಡವು ಸೋತ ನಂತರ ಹನುಮವಿಹಾರಿ ಬರೆದಿರುವ ಪತ್ರವು ಚರ್ಚೆಗೆ ಗ್ರಾಸವಾಗಿದೆ.  ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸಿದ ಸಂಸ್ಥೆಯು ರಾಜೀನಾಮೆ ಪಡೆದಿತ್ತು ಎಂದೂ ಆರೋಪಿಸಿದ್ದಾರೆ.  ಪಂದ್ಯವೊಂದರಲ್ಲಿ ನಾನು ತಂಡದಲ್ಲಿರುವ ಒಬ್ಬ ಆಟಗಾರ (ರಾಜಕಾರಣಿಯ ಮಗ) ನಿಗೆ ಜೋರು ಮಾಡಿದ್ದು ಈ ಎಲ್ಲ ಘಟನೆಗೆ ಕಾರಣ ಎಂದಿದ್ದಾರೆ.

ಈ ಬಾರಿಯ ರಣಜಿ ಟ್ರೋಫಿಯ ಆರಂಭಿಕ ಪಂದ್ಯವು ಹೋದ ಬಾರಿಯ ರನ್ನರ್ಸ್‌ ಅಪ್ ಬಂಗಾಳ ವಿರುದ್ಧ ಇತ್ತು. ಅದರಲ್ಲಿ ಆಂಧ್ರ ತಂಡಕ್ಕೆ ಹನುಮ ನಾಯಕತ್ವ ವಹಿಸಿದ್ದರು. ಆದರೆ ಆ ಪಂದ್ಯ ಮುಗಿಯುತ್ತಿದ್ದಂತೆ ನಾಯಕತ್ವದಿಂದ ಕೆಳಗಿಳಿದಿದ್ದ ಹನುಮವಿಹಾರಿ ‘ವೈಯಕ್ತಿಕ ಕಾರಣಗಳಿಂದ ನಾಯಕನ ಜವಾಬ್ವಾರಿ ಬಿಡುತ್ತಿರುವುದಾಗಿ’ ತಿಳಿಸಿದ್ದರು. ನಂತರದ ಪಂದ್ಯಗಳಲ್ಲಿ ತಂಡವನ್ನು ರಿಕಿ ಭುಯ್ ಮುನ್ನಡೆಸಿದ್ದರು.

‘ಟೂರ್ನಿಯ ಮೊದಲ ಪಂದ್ಯದಲ್ಲಿ ನಾನು ನಾಯಕನಾಗಿದ್ದೆ. ಆ ಪಂದ್ಯದ ಸಂದರ್ಭದಲ್ಲಿ ತಮ್ಮ ತಂಡದ 17ನೇ ಆಟಗಾರನ (ಪ್ರಭಾವಿ ರಾಜಕಾರಣಿಯ ಮಗ) ಮೇಲೆ ರೇಗಾಡಿದ್ದೆ. ಆತ ತನ್ನ ತಂದೆಗೆ ನನ್ನ ಬಗ್ಗೆ ದೂರಿದ್ದ. ಅವರ ತಂದೆಯು ನನ್ನ ಮೇಲೆ ಕ್ರಮ ಕೈಗೊಳ್ಳುವಂತೆ  ಆಂಧ್ರ ಕ್ರಿಕೆಟ್ ಸಂಸ್ಥೆ ಮೇಲೆ ಒತ್ತಡ ಹಾಕಿದರು. ಆದರೆ ಬಂಗಾಳ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 410 ರನ್‌ಗಳ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದೆವು. ಪಂದ್ಯ ಡ್ರಾ ಆಗಿತ್ತು. ಅದರೂ ನನ್ನನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಆಗ ನಾನು ವೈಯಕ್ತಿಕ ಕಾರಣ ನೀಡಿದ್ದೆ’ ಎಂದು ವಿಹಾರಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 

ತಂಡದ ಆಟಗಾರ ಕೆ.ಎನ್. ಪ್ರಥ್ವಿ ರಾಜ್ ಅವರು ವಿಹಾರಿ ಹೇಳಿಕೆಗೆ ಪ್ರತ್ಯುತ್ತರ ಬರೆದಿದ್ದಾರೆ.

‘ಅವರು (ವಿಹಾರಿ) ಬರೆದಿರುವ ಆ ವ್ಯಕ್ತಿ ನಾನೇ. ನೀವೆಲ್ಲರೂ ಕಾಮೆಂಟ್ ಬಾಕ್ಸ್‌ನಲ್ಲಿ ಹುಡುಕಾಟ ಮಾಡುತ್ತಿರುವವನು ನಾನೇ. ಅವರ ಹೇಳಿಕೆಗಳೆಲ್ಲವೂ ಸುಳ್ಳು.  ಆಟ (ಕ್ರಿಕೆಟ್) ಕ್ಕಿಂತ ಯಾರೂ ದೊಡ್ಡವರಲ್ಲ. ಎಲ್ಲದಕ್ಕಿಂತಲೂ ನನಗೆ ಆತ್ಮಗೌರವ ದೊಡ್ಡದು’ ಎಂದು ರಾಜ್ ಬರೆದಿದ್ದಾರೆ.

‘ವೈಯಕ್ತಿಕ ನಿಂದನೆ ಮತ್ತು ಅಶ್ಲೀಲ ಭಾಷೆ ಬಳಕೆ ಯಾವುದೇ ವೇದಿಕೆಯಲ್ಲಿಯೂ ಸಹ್ಯವಲ್ಲ. ಆ ದಿನ ಏನಾಗಿತ್ತು ಎಂಬುದನ್ನು ತಂಡದಲ್ಲಿರುವ ಎಲ್ಲರಿಗೂ ಗೊತ್ತಿದೆ. ತಮ್ಮನ್ನು ಚಾಂಪಿಯನ್ ಎಂದು ಕರೆದುಕೊಳ್ಳುವ ನೀವು ಅನುಕಂಪ ಗಿಟ್ಟುವ ತಂತ್ರ ಮಾಡುತ್ತಿದ್ದೀರಿ. ನಿಮಗೆ ಹೇಗೆ ಬೇಕೋ ಹಾಗೆ ಆಡಿ’ ಎಂದು ರಾಜ್ ಅವರು ಹನುಮವಿಹಾರಿಯನ್ನು ಉದ್ದೇಶಿಸಿ ಬರೆದಿದ್ದಾರೆ.

ಇದರ ನಂತರ ವಿಹಾರಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ‘ಇಡೀ ತಂಡಕ್ಕೆ ಎಲ್ಲವೂ ಗೊತ್ತಿದೆ’ ಎಂಬ ಒಂದು ಸಾಲಿನ ಸಂದೇಶವಿದೆ. ಜೊತೆಗೆ ಸಹ ಆಟಗಾರರ ಹಸ್ತಾಕ್ಷರಗಳೂ ಇವೆ.

ಹೋದ ವರ್ಷದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಹನುಮ ಅವರ ಬಲ ಮುಂಗೈ ಗೆ ಗಾಯವಾಗಿತ್ತು. ಅದರಿಂದಾಗಿ ಅವರು ಎಡಗೈ ಬ್ಯಾಟಿಂಗ್ ಮಾಡಿದ್ದರು. ಆದರೂ ಆಂಧ್ರ ಆ ಪಂದ್ಯದಲ್ಲಿ ಸೋತಿತ್ತು.

 ಕಳೆದ ಏಳು ವರ್ಷಗಳಿಂದ ಈ ತಂಡಕ್ಕೆ ತನ್ನ ಬೆವರು, ರಕ್ತ ಹರಿಸಿ ಕಾಣಿಕೆ ನೀಡಿದ ನನಗಿಂತ  ಎಸಿಎಗೆ ಆ ಆಟಗಾರ ಮುಖ್ಯವಾಗಿದ್ದಾನೆ. ಆಂಧ್ರ ತಂಡವನ್ನು ಐದು ಬಾರಿ ನಾಕ್‌ಔಟ್ ಪ್ರವೇಶಿಸುವಲ್ಲಿ ಕಾಣಿಕೆ ನೀಡಿದ್ದೇನೆ. ಭಾರತ ತಂಡವನ್ನು 16 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿರುವೆ. ನನಗೆ ಬೇಸರವಾಗಿದ್ದರೂ ಕ್ರಿಕೆಟ್‌  ಆಟ ಮತ್ತು ತಂಡದ ಮೇಲಿನ ಗೌರವಕ್ಕಾಗಿ ಇಡೀ ಋತುವಿನಲ್ಲಿ ಆಡಿದೆ’ ಎಂದು ಹೇಳಿದ್ದಾರೆ.

2023–24ರ ಋತುವಿನಲ್ಲಿ ಅವರು ಮಧ್ಯಪ್ರದೇಶ ತಂಡಕ್ಕೆ ವಲಸೆ ಹೋಗುವವರಿದ್ದರು. ನಂತರ ನಿರ್ಧಾರ ಬದಲಿಸಿದ್ದರು. ಹೈದರಾಬಾದ್‌ ತಂಡದ ಮೂಲಕ ತಮ್ಮ ದೇಶಿ ಕ್ರಿಕೆಟ್ ಆರಂಭಿಸಿದ್ದ ಅವರು 2015–16ರಲ್ಲಿ ಆಂಧ್ರ ತಂಡ ಸೇರ್ಪಡೆಗೊಂಡಿದ್ದರು. 2021–22ರಲ್ಲಿ ಒಂದು ಋತು ಮತ್ತೆ ಹೈದರಾಬಾದಿನಲ್ಲಿ ಆಡಿದ್ದರು. ಹೋದ ವರ್ಷ ಮತ್ತೆ ಆಂಧ್ರಕ್ಕೆ ಮರಳಿದ್ದರು.

India
India

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT