ಭಾನುವಾರ, ಜನವರಿ 19, 2020
27 °C
ಅಂತಿಮ ಟ್ವೆಂಟಿ–20 ಪಂದ್ಯ ಇಂದು; ಮನೀಷ್‌ಗೆ ಸಿಗುವುದೇ ಅವಕಾಶ?

ಭಾರತಕ್ಕೆ ಸರಣಿ ಜಯದ ತವಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಇಂದೋರ್‌ನಲ್ಲಿ ಮುನ್ನಡೆ ಗಳಿಸಿ ನಿರಾಳವಾಗಿರುವ ಭಾರತ ತಂಡ, ಶ್ರೀಲಂಕಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯನ್ನು ಗೆಲ್ಲುವ ಉತ್ಸಾಹದಲ್ಲಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆಯೂ ಇದೆ.

ಗುವಾಹಟಿಯಲ್ಲಿ ನಡೆಯಬೇಕಾಗಿದ್ದ ಮೊದಲ ಪಂದ್ಯ ಮಳೆಗೆ ಕೊಚ್ಚಿಕೊಂಡು ಹೋಗಿತ್ತು. ಇಂದೋರ್‌ನಲ್ಲಿ ಮೂರು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಜಯ ಸಾಧಿಸಿತ್ತು.

ಆ ಪಂದ್ಯದ ಯಾವ ಹಂತದಲ್ಲೂ ಆತಿಥೇಯರಿಗೆ ಸವಾಲೊಡ್ಡಲು ಪ್ರವಾಸಿ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿ ಬಳಗ ಪುಣೆಯಲ್ಲಿ ಸುಲಭ ಜಯದ ವಿಶ್ವಾಸ ದಲ್ಲಿದೆ. ಹೀಗಾಗಿ ಸಂಜು ಸ್ಯಾಮ್ಸನ್ ಅಥವಾ ಮನೀಷ್ ಪಾಂಡೆ ಅವರಿಗೆ ಅಂತಿಮ 11ರಲ್ಲಿ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಪಾಂಡೆ ಕಳೆದ ಮೂರು ಸರಣಿಗಳಲ್ಲಿ ಕೇವಲ ಒಂದೇ ಒಂದು ಪಂದ್ಯ ಆಡಿದ್ದಾರೆ. ಸಂಜು ಸ್ಯಾಮ್ಸನ್‌ ನವೆಂಬರ್‌ನಿಂದ ಅವಕಾಶಕ್ಕಾಗಿ ಕಾಯು ತ್ತಿದ್ದಾರೆ. ಅಕ್ಟೋಬರ್‌–ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಹಿನ್ನೆಲೆಯಲ್ಲಿ ಪ್ರಯೋಗಗಳನ್ನು ಮಾಡಲು ಮುಂದಾಗಿರುವ ಭಾರತ ತಂಡದ ಚಿಂತಕರ ಚಾವಡಿ, ಈ ಇಬ್ಬರು ಆಟಗಾರರಿಗೆ ಬೆಂಚು ಕಾಯಿಸುತ್ತಲೇ ಇದೆ. ಶುಕ್ರವಾರ ಭರ್ಜರಿ ಗೆಲುವೊಂದನ್ನೇ ಗುರಿಯಾಗಿರಿಸಿಕೊಂಡು ತಂಡವನ್ನು ಆಯ್ಕೆ ಮಾಡಿದರೆ ಈ ಇಬ್ಬರು ಮತ್ತೆ ನಿರಾಸೆಪಡಬೇಕಾದೀತು.

ಕಳೆದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಮಧ್ಯಮ ವೇಗಿ ಗಳಾದ ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ಕೊನೆಯ ಪಂದ್ಯದಲ್ಲೂ ಲಯವನ್ನು ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.

ಅನುಭವಿ ಆಟಗಾರರ ಅನುಪಸ್ಥಿತಿಯು ಇವರ ಹಾದಿಯನ್ನು ಸುಗಮಗೊಳಿಸಿದೆ. ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ತಮ್ಮ ಮೇಲೆ ತಂಡದ ಆಡಳಿತ ಇರಿಸಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇಂದೋರ್‌ನಲ್ಲಿ ಇವರಿಬ್ಬರು ಮಿಂಚಿದ್ದಾರೆ.

ಶಿಖರ್ ಧವನ್ ಮೇಲೆ ಕಣ್ಣು: ಶುಕ್ರವಾರದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್‌ ಧವನ್ ಮೇಲೆಯೂ ಆಯ್ಕೆ ಸಮಿತಿ ಕಣ್ಣಿಡಲಿದೆ. ‌ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಜೊತೆ ಕೆ.ಎಲ್‌.ರಾಹುಲ್ ಇನಿಂಗ್ಸ್ ಆರಂ ಭಿಸುವುದು ಬಹುತೇಕ ಖಚಿತವಾಗಿದೆ. ರಾಹುಲ್ ಅವರನ್ನು ಹಿಂದಿಕ್ಕಿ ಸ್ಥಾನ ಗಳಿಸಬೇಕಾದರೆ ಧವನ್ ಸಾಮರ್ಥ್ಯ ಸಾಬೀತು ಮಾಡಲೇಬೇಕಾಗಿದೆ. ಇಂದೋರ್‌ನಲ್ಲಿ ರಾಹುಲ್ ಮತ್ತು ಶಿಖರ್ ಇಬ್ಬರೂ ಯಶಸ್ವಿಯಾಗಿದ್ದಾರೆ!

ಗಾಯದ ಸಮಸ್ಯೆಯಿಂದ ಚೇತರಿ ಸಿಕೊಂಡು ಬಂದಿರುವ ಜಸ್‌ಪ್ರೀತ್ ಬೂಮ್ರಾ ಎರಡನೇ ಪಂದ್ಯದಲ್ಲಿ ನಿರೀ ಕ್ಷೆಗೆ ತಕ್ಕಂತೆ ಬೌಲಿಂಗ್‌ ಮಾಡಿರಲಿಲ್ಲ. ಶುಕ್ರವಾರ ಅವರು ಇನ್ನಷ್ಟು ಶ್ರಮ ಹಾಕಬೇಕಾಗಿದೆ.

ಮಾಲಿಂಗ ಪಡೆ ಮೇಲೆ ಒತ್ತಡ: ಲಸಿತ್ ಮಾಲಿಂಗ ನಾಯಕತ್ವದ ಶ್ರೀಲಂಕಾ ತಂಡ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಳ್ಳಲು ಪ್ರಯತ್ನಿಸಲಿದೆ. ಆದರೆ ಇದರಲ್ಲಿ ಯಶಸ್ಸು ಸಾಧಿಸಬೇಕಾದರೆ ತಂಡದ ಆಟಗಾರರು ಇನ್ನಷ್ಟು ಶ್ರಮ ಹಾಕಬೇಕಾಗಿದೆ.

ಇಸುರು ಉಡಾನ ಗಾಯಗೊಂಡಿರು ವುದು ತಂಡದ ಆತಂಕವನ್ನು ಹೆಚ್ಚಿಸಿದೆ. ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಕೂಡ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಒಂದೂವರೆ ವರ್ಷಗಳ ನಂತರ ಟ್ವೆಂಟಿ–20 ತಂಡಕ್ಕೆ ಮರಳಿರುವ ಏಂಜೆಲೊ ಮ್ಯಾಥ್ಯೂಸ್‌ಗೆ ಇಂದೋರ್ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಶುಕ್ರವಾರ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್‌.ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಶಿವಂ ದುಬೆ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಮನೀಷ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.

ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕ ಗುಣತಿಲಕ, ಆವಿಷ್ಕ ಫರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶಾನಕ, ಕುಶಾಲ್ ಪೆರೇರ, ನಿರೋಷನ್ ಡಿಕ್ವೆಲ್ಲ, ಧನಂಜಯ ಡಿ ಸಿಲ್ವ, ಇಸುರು ಉಡಾನ, ಭಾನುಕ ರಾಜಪಕ್ಸ, ಒಶಾಡ ಫರ್ನಾಂಡೊ, ವನಿಂದು ಹಸರಂಗ, ಲಾಹಿರು ಕುಮಾರ, ಕುಶಾಲ್ ಮೆಂಡಿಸ್‌, ಲಕ್ಷಣ್ ಸಂಡಗನ್, ಕಾಸುನ್ ರಜಿತ.

ಪಂದ್ಯ ಆರಂಭ: ಸಂಜೆ 7.00

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು