ಶನಿವಾರ, ಆಗಸ್ಟ್ 13, 2022
23 °C
ಕನ್ನಡಿಗ ರಾಹುಲ್ ಅರ್ಧಶತಕದ ಸೊಬರು; ಪದಾರ್ಪಣೆ ಪಂದ್ಯದಲ್ಲಿ ನಟರಾಜನ್‌ಗೆ ಮೂರು ವಿಕೆಟ್

ಜಡೇಜ ತಲೆಗಪ್ಪಳಿಸಿದ ಚೆಂಡು; ಆಸ್ಟ್ರೇಲಿಯಾಕ್ಕೆ ಚಾಹಲ್ ಪೆಟ್ಟು!

ಪಿಟಿಐ Updated:

ಅಕ್ಷರ ಗಾತ್ರ : | |

ಕ್ಯಾನ್ಬೆರಾ (ಪಿಟಿಐ): ರವೀಂದ್ರ ಜಡೇಜ ತಮ್ಮ ತಲೆಗೆ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸುವ ಮುನ್ನ ಬೌಲರ್‌ಗಳ ಬೆವರಳಿಸಿದರು. ಕಂಕಷನ್ ನಿಯಮದಲ್ಲಿ ಜಡೇಜ ಬದಲಿಗೆ ಬೌಲಿಂಗ್‌ಗೆ ಬಂದ ಯಜುವೇಂದ್ರ ಚಾಹಲ್ ಆಸ್ಟ್ರೇಲಿಯಾಕ್ಕೆ ಸೋಲಿನ ಪೆಟ್ಟು ಕೊಟ್ಟರು. 

ಶುಕ್ರವಾರ ಮನುಕಾ ಓವಲ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನಡೆದ ಈ ನಾಟಕೀಯ ಪ್ರಸಂಗವು ಭಾರತಕ್ಕೆ 11 ರನ್‌ಗಳ ಜಯದ ಕಾಣಿಕೆ ನೀಡಿತು.

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರ್ಧಶತಕ ಬಾರಿಸಿದ ಕೆ.ಎಲ್. ರಾಹುಲ್ (51; 40ಎಸೆತ)  ಮತ್ತು ’ಡೆತ್ ಓವರ್‌‘ಗಳಲ್ಲಿ 23 ಎಸೆತಗಳಲ್ಲಿ 44 ರನ್ ಬಾರಿಸಿದ ಜಡೇಜ ಬ್ಯಾಟಿಂಗ್‌ನಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 161 ರನ್‌ಗಳ ಗೌರವಯುತ ಮೊತ್ತ ಗಳಿಸಿತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 150 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು.

ಇದನ್ನೂ ಓದಿ: 

’ಬದಲೀ ಆಟಗಾರ‘  ಚಾಹಲ್ (25ಕ್ಕೆ3) ’ಪಂದ್ಯಶ್ರೇಷ್ಠ‘ ಗೌರವ ಗಳಿಸಿದರು. ಅಂತರರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದ ಎಡಗೈ ಮಧ್ಯಮ ವೇಗಿ ತಂಗರಸು ನಟರಾಜನ್ (30ಕ್ಕೆ3) ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು.

ಹೆಲ್ಮೆಟ್‌ಗೆ ಚೆಂಡು:
ಭಾರತದ ಮೊತ್ತವನ್ನು ಹೆಚ್ಚಿಸಿದ್ದ ರವೀಂದ್ರ ಜಡೇಜ ಅವರ ಹೆಲ್ಮೆಟ್‌ಗೆ  ಕೊನೆಯ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬೌನ್ಸರ್‌ ಅಪ್ಪಳಿಸಿತು. ಅದಕ್ಕೂ ಮುಂಚಿನ ಓವರ್‌ನಲ್ಲಿ ಜಡೇಜ ತೊಡೆಯ ಸ್ನಾಯುಸೆಳೆತಕ್ಕೂ ಒಳಗಾಗಿದ್ದರು. ಆದರೂ  ಅವರು 19ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್‌ಗೆ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್, ಕೊನೆಯ ಓವರ್‌ನಲ್ಲಿ ಎರಡು ಬೌಂಡರಿ ಹೊಡೆದರು.  

ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಅವರು ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನಿಂಗ್ಸ್ ನಂತರ ಪೆವಿಲಿಯನ್‌ಗೆ ಮರಳಿದರು. ಆದರೆ, ಅವರ ತಲೆಗೆ ಚೆಂಡು ಬಡಿದಿರುವ ಕಾರಣ ತಪಾಸಣೆ ಮತ್ತು ಚಿಕಿತ್ಸೆ ನೀಡಲು ನಿರ್ಧರಿಸಿದ ತಂಡದ ವ್ಯವಸ್ಥಾಪನ ಮಂಡಳಿಯು ಚಾಹಲ್‌ಗೆ ಕಣಕ್ಕಿಳಿಯುವ ಅವಕಾಶ ನೀಡಿತು.

ಇದನ್ನೂ ಓದಿ: 

ಸೇಡು ತೀರಿಸಿಕೊಂಡ ಚಾಹಲ್
ಏಕದಿನ ಸರಣಿಯಲ್ಲಿ ಸಿಕ್ಕಾಪಟ್ಟೆ ದುಬಾರಿಯಾಗಿದ್ದ ಚಾಹಲ್, ಇಲ್ಲಿ ಸೇಡು ತೀರಿಸಿಕೊಂಡರು. ಆ್ಯರನ್ ಫಿಂಚ್ (35 ರನ್),  ಸ್ಟೀವ್ ಸ್ಮಿತ್ (12 ರನ್) ಮತ್ತು ಮ್ಯಾಥ್ಯೂ ವೇಡ್ (7 ರನ್) ಅವರ ವಿಕೆಟ್ ಕಬಳಿಸಿದರು. ಇನ್ನೊಂದೆಡೆ ನಟರಾಜನ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಡಾರ್ಸಿ ಶಾರ್ಟ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಟಾರ್ಕ್‌ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.  20 ಎಸೆತಗಳಲ್ಲಿ 30 ರನ್ ಗಳಿಸಿದ್ದ ಹೆನ್ರಿಕ್ಸ್‌ಗೆ ದೀಪಕ್ ಚಾಹರ್ ಬ್ರೇಕ್ ಹಾಕಿದರು.

ಬ್ಯಾಟಿಂಗ್‌ನಲ್ಲಿ ತಂಡವು ಮಾಡಿದ್ದ ಲೋಪಗಳನ್ನು ಬೌಲರ್‌ಗಳು ಸರಿಪಡಿಸಿದರು. ಮಯಂಕ್ ಅಗರವಾಲ್‌ಗೆ ಪದಾರ್ಪಣೆಯ ಅವಕಾಶ ಸಿಗಲಿಲ್ಲ ಸಂಜು ಸ್ಯಾಮ್ಸನ್ (23 ರನ್) ಆಡಿದರು. ಧವನ್, ವಿರಾಟ್ ಮತ್ತು ಮನೀಷ್ ಪಾಂಡೆ ಮಿಂಚಲಿಲ್ಲ. ಆದರೆ, ಆರಂಭಿಕ ರಾಹುಲ್ ತಂಡಕ್ಕೆ ಆಸರೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು