IND vs AUS: ಸಂಕಷ್ಟದಲ್ಲಿ ಭಾರತ; ಸಿಡ್ನಿ ಟೆಸ್ಟ್ನಲ್ಲಿ ಆಸೀಸ್ ಮೇಲುಗೈ

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಮತ್ತಷ್ಟು ಬಿಗುಗೊಳಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ 94 ರನ್ಗಳ ಮಹತ್ವದ ಇನ್ನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿರುವ ಆಸ್ಟ್ರೇಲಿಯಾ, ಮೂರನೇ ದಿನದಂತ್ಯಕ್ಕೆ 29 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ.
ಇದರೊಂದಿಗೆ ಒಟ್ಟು ಮುನ್ನಡೆಯನ್ನು 197 ರನ್ಗಳಿಗೆ ಏರಿಸಿದೆ. ಅಲ್ಲದೆ ಇನ್ನೆರಡು ದಿನಗಳ ಆಟ ಬಾಕಿ ಉಳಿದಿರುವಂತೆಯೇ ಗೆಲುವಿನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅತ್ತ ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಜೊತೆಗೆ ಗಾಯದ ಸಮಸ್ಯೆಗೆ ಸಿಲುಕಿರುವ ಅಜಿಂಕ್ಯ ರಹಾನೆ ಪಡೆ ಸಂಕಷ್ಟಕ್ಕೊಳಗಾಗಿದೆ. ಗಾಯದಿಂದಾಗಿ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜ ಸೇವೆಯಿಂದ ಭಾರತ ವಂಚಿತವಾಗಿದ್ದು, ಸ್ಕ್ಯಾನಿಂಗ್ ವರದಿ ಇನ್ನಷ್ಟೇ ಬರಬೇಕಿದೆ.
That's stumps! Aussies extend their lead to 197 runs with Labuschagne 47* and Smith 29* at the close of play.
Full scorecard: https://t.co/xdDaedY10F #AUSvIND pic.twitter.com/5AZUNAAeSF
— cricket.com.au (@cricketcomau) January 9, 2021
ದ್ವಿತೀಯ ಇನ್ನಿಂಗ್ಸ್ನಲ್ಲೂ ಆಸೀಸ್ಗೆ ಆರಂಭಿಕ ಆಘಾತ ನೀಡುವಲ್ಲಿ ಭಾರತ ಯಶಸ್ವಿಯಾಗಿತ್ತು. ಅಲ್ಲದೆ 35 ರನ್ ಪೇರಿಸುವಷ್ಟರಲ್ಲಿ ಪದಾರ್ಪಣಾ ಪಂದ್ಯದ ಅರ್ಧಶತಕ ವೀರ ವಿಲ್ ಪುಕೊವಸ್ಕಿ (10) ಸೇರಿದಂತೆ ಅಪಾಯಕಾರಿ ಡೇವಿಡ್ ವಾರ್ನರ್ (13) ಅವರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿತ್ತು. ಈ ವಿಕೆಟ್ಗಳನ್ನು ಮೊಹಮ್ಮದ್ ಸಿರಾಜ್ ಹಾಗೂ ಆರ್. ಅಶ್ವಿನ್ ಹಂಚಿಕೊಂಡರು.
ಇದನ್ನೂ ಓದಿ: ರಿಷಭ್ ಪಂತ್ಗೆ ಗಾಯ; ಬದಲಿ ಆಟಗಾರ ವೃದ್ಧಿಮಾನ್ ಸಹಾ ವಿಕೆಟ್ ಕೀಪರ್!
ಈ ಹಂತದಲ್ಲಿ ಜೊತೆಗೂಡಿದ ಇನ್ ಫಾರ್ಮ್ ಬ್ಯಾಟ್ಸ್ಮನ್ಗಳಾದ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ಮುರಿಯದ ಎರಡನೇ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿ ಎದುರಾಳಿಗಳನ್ನು ಕಾಡಿದರು.
ದಿನದಂತ್ಯಕ್ಕೆ ಆಸೀಸ್ ಎರಡು ವಿಕೆಟ್ ನಷ್ಟಕ್ಕೆ 103 ರನ್ ಪೇರಿಸಿದೆ. 69 ಎಸೆತಗಳನ್ನು ಎದುರಿಸಿರುವ ಲಾಬುಷೇನ್ ಆರು ಬೌಂಡರಿಗಳಿಂದ 47 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಸ್ಟೀವನ್ ಸ್ಮಿತ್ 63 ಎಸೆತಗಳಲ್ಲಿ ಮೂರು ಬೌಂಡರಿಗಳಿಂದ 29 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.
Statement.#AUSvIND pic.twitter.com/iw4gVoKXXy
— cricket.com.au (@cricketcomau) January 9, 2021
ಭಾರತ 244ಕ್ಕೆ ಆಲೌಟ್...
ಈ ಮೊದಲು ಮಗದೊಮ್ಮೆ ಆಸೀಸ್ ವೇಗದ ದಾಳಿಗೆ ಕುಸಿತ ಅನುಭವಿಸಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಹೋರಾಟ ಮನೋಭಾವವನ್ನೇ ತೋರಲಿಲ್ಲ. ಅಲ್ಲದೆ 244 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಎದುರಾಳಿಗೆ 94 ರನ್ಗಳ ಮಹತ್ವದ ಮುನ್ನಡೆಯನ್ನು ಬಿಟ್ಟುಕೊಟ್ಟಿತ್ತು.
ಓಪನರ್ ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಅರ್ಧಶತಕ ಬಾರಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್ಮನ್ನಿಂದ ಹೆಚ್ಚಿನ ಪಾಲುದಾರಿಕೆ ಮೂಡಿಬಂದಿಲ್ಲ.
ಇದನ್ನೂ ಓದಿ: ಪಂತ್ ಬೆನ್ನಲ್ಲೇ ಜಡೇಜಗೆ ಗಾಯ; ಸ್ಕ್ಯಾನಿಂಗ್ಗಾಗಿ ರವಾನೆ
96ಕ್ಕೆ 2 ಎಂಬ ಮೊತ್ತದಿಂದ ದಿನದಾಟ ಮುಂದುವರಿಸಿದ ಭಾರತಕ್ಕೆ ಕಲಾತ್ಮಕ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಆಸರೆಯಾದರು. ಅತ್ತ ನಾಯಕ ಅಜಿಂಕ್ಯ ರಹಾನೆ (22) ಹೆಚ್ಚು ಹೊತ್ತು ನಿಲ್ಲನಿಲ್ಲ.
ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಹನುಮ ವಿಹಾರಿ (4) ರನೌಟ್ ಆಗುವುದರೊಂದಿಗೆ ಭಾರತಕ್ಕೆ ಮಗದೊಂದು ಹೊಡೆತ ಬಿತ್ತು.
ಈ ಹಂತದಲ್ಲಿ ಜೊತೆಗೂಡಿದ ಪೂಜಾರ ಹಾಗೂ ರಿಷಭ್ ಪಂತ್ 53 ರನ್ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಪಂತ್ (36) ವಿಕೆಟ್ ಪತನದೊಂದಿಗೆ ಭಾರತ ಧಿಡೀರ್ ಪತನವನ್ನು ಕಂಡಿತ್ತು.
Australia just can't miss! #AUSvIND pic.twitter.com/CdQDlxUW4W
— cricket.com.au (@cricketcomau) January 9, 2021
ಅರ್ಧಶತಕ ಬೆನ್ನಲ್ಲೇ ಚೇತೇಶ್ವರ ಪೂಜಾರ ಸಹ ವಿಕೆಟ್ ಒಪ್ಪಿಸಿದರು. 176 ಎಸೆತಗಳನ್ನು ಎದುರಿಸಿದ ಪೂಜಾರ ಐದು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಇದು ಟೆಸ್ಟ್ ವೃತ್ತಿ ಜೀವನದಲ್ಲಿ ಪೂಜಾರ ದಾಖಲಿಸಿದ ಅತಿ ನಿಧಾನವಾದ ಅರ್ಧಶತಕವಾಗಿದೆ. ಅಲ್ಲದೆ ಪ್ರಸ್ತುತ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ಗೆ ನಾಲ್ಕನೇ ಬಾರಿಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: 27ನೇ ಟೆಸ್ಟ್ ಶತಕ; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸ್ಟೀವನ್ ಸ್ಮಿತ್
ರವೀಂದ್ರ ಜಡೇಜ ಹೋರಾಟ ನಡೆಸಿದರೂ ವಿಕೆಟ್ನ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು. 28 ರನ್ ಗಳಿಸಿದ ಜಡೇಜ ಅಜೇಯರಾಗುಳಿದರು.
ಅಂತಿಮವಾಗಿ ಭಾರತ 100.4 ಓವರ್ಗಳಲ್ಲೇ 244 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೂಂಡಿತ್ತು. ಇನ್ನುಳಿದಂತೆ ಆರ್. ಅಶ್ವಿನ್ (10), ನವದೀಪ್ ಸೈನಿ (3), ಜಸ್ಪ್ರೀತ್ ಬೂಮ್ರಾ (0) ಹಾಗೂ ಮೊಹಮ್ಮದ್ ಸಿರಾಜ್ (6) ನಿರಾಸೆ ಮೂಡಿಸಿದರು.
ಭಾರತ ತಂಡವು ಕೊನೆಯ ಆರು ವಿಕೆಟ್ಗಳನ್ನು ಕೇವಲ 50 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಅದರಲ್ಲೂ ಮೂವರು ಆಟಗಾರರು ರನೌಟ್ ಆದರು. ಆಸೀಸ್ ಪರ ಪ್ಯಾಟ್ ಕಮಿನ್ಸ್ ನಾಲ್ಕು, ಜೋಶ್ ಹ್ಯಾಜಲ್ವುಡ್ ಎರಡು ಮತ್ತು ಮಿಚೆಲ್ ಸ್ಟಾರ್ಕ್ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಮೊದಲು ಎರಡನೇ ದಿನದಾಟದಲ್ಲಿ ಸ್ಟೀವನ್ ಸ್ಮಿತ್ (131) ಅವರ ಅಮೋಘ ಶತಕದ ಹೊರತಾಗಿಯೂ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಮೊತ್ತವನ್ನು 338 ರನ್ಗಳಿಗೆ ಸೀಮಿತಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು. ಸ್ಟೀವನ್ ಸ್ಮಿತ್ 27ನೇ ಟೆಸ್ಟ್ ಶತಕ ಬಾರಿಸಿದ್ದರೆ ಮಾರ್ನಸ್ ಲಾಬುಷೇನ್ 91 ರನ್ ಗಳಿಸಿ ಭಾರತವನ್ನು ಕಾಡಿದರು. ಭಾರತದ ಪರ ರವೀಂದ್ರ ಜಡೇಜ ನಾಲ್ಕು ವಿಕೆಟ್ ಕಬಳಿಸಿದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.