ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಹಾದಿ ತುಳಿದ ಹಾರ್ದಿಕ್ ಪಾಂಡ್ಯ ನೈಜ ಫಿನಿಶರ್?

Last Updated 6 ಡಿಸೆಂಬರ್ 2020, 12:53 IST
ಅಕ್ಷರ ಗಾತ್ರ

ಸಿಡ್ನಿ: ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ನೈಜ ಫಿನಿಶರ್ ಹುಡುಕಾಟದಲ್ಲಿದೆ. ಈಗ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ಹಾರ್ದಿಕ್ ಪಾಂಡ್ಯ, ಮಹಿ ಹಾದಿಯನ್ನು ಹಿಂಬಾಲಿಸಿದ್ದಾರೆ.

ತಾವು ಮಹಿಗೆ ಸರಿಸಮ ಎಂಬುದನ್ನು ನಿರೂಪಿಸಿರುವ ಪಾಂಡ್ಯ ಕೇವಲ 22 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ತಂಡವನ್ನು ವಿಜಯದ ಗೆರೆ ದಾಟಿಸಿದರು.

ಡ್ಯಾನಿಯಲ್ ಸ್ಯಾಮ್ಸ್ ಎಸೆದ ಪಂದ್ಯದ ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 14 ರನ್‌ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಪಾಂಡ್ಯ ನೈಜ ಫಿನಿಶರ್ ಎಂಬುದನ್ನು ನಿರೂಪಿಸಿದರು. ಯಾವುದೇ ರೀತಿಯ ಒತ್ತಡಕ್ಕೊಳಗಾದ ಪಾಂಡ್ಯ, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಚೆಂಡನ್ನು ಗೆರೆ ದಾಟಿಸುವಲ್ಲಿ ಯಶಸ್ವಿಯಾದರು.

ಗಾಯದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಬ್ಯಾಟಿಂಗ್ ಮೇಲೆ ಮಾತ್ರ ಹೆಚ್ಚಿನ ಗಮನ ಕೇಂದ್ರಿಕರಿಸಿರುವ ಹಾರ್ದಿಕ್ ಪಾಂಡ್ಯ, ಈಗ ಓರ್ವ ಪರಿಪೂರ್ಣ ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಏಕದಿನ ಸರಣಿಯ ಬಳಿಕ ಚುಟುಕು ಕ್ರಿಕೆಟ್‌ನಲ್ಲೂ ಮಿಂಚಿನಾಟ ಪ್ರದರ್ಶಿಸಿದ್ದಾರೆ. ಅಲ್ಲದೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಸೈ ಎನಿಸಿದ್ದಾರೆ.

ಈ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್ (58) ಹಾಗೂ ಸ್ಟೀವನ್ ಸ್ಮಿತ್ (46) ಬಿರುಸಿನ ಆಟದ ನೆರವಿನಿಂದ ನಿಗದಿತ ಐದು ವಿಕೆಟ್ ನಷ್ಟಕ್ಕೆ 194 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಬೃಹತ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶಿಖರ್ ಧವನ್ (52), ನಾಯಕ ವಿರಾಟ್ ಕೊಹ್ಲಿ (40) ಹಾಗೂ ಹಾರ್ದಿಕ್ ಪಾಂಡ್ಯ (42*) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇನ್ನೆರಡು ಎಸೆತಗಳನ್ನು ಬಾಕಿ ಉಳಿದಿರುವಂತೆಯೇ ಗೆಲುವು ದಾಖಲಿಸಿದೆ.

ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ಗೆಲುವು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT