ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರ್ ದಾಳಿಯಲ್ಲಿ ಪಂತ್ ರಿವರ್ಸ್-ಸ್ವೀಪ್ ಸಿಕ್ಸರ್; ಬೆರಗಾದ ಕ್ರಿಕೆಟ್ ಲೋಕ

Last Updated 12 ಮಾರ್ಚ್ 2021, 16:21 IST
ಅಕ್ಷರ ಗಾತ್ರ

ಅಹಮದಾಬಾದ್: ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ದಾಳಿಯಲ್ಲಿ ಭಾರತದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್, ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ ಬಾರಿಸಿರುವುದು ಕ್ರಿಕೆಟ್ ಲೋಕವನ್ನು ಬೆರಗುಗೊಳಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಅಂತರ ರಾಷ್ಟ್ರೀಯಪಂದ್ಯದಲ್ಲಿ ಪಂತ್ ಮೋಡಿ ಮಾಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಭಾರತ ಕಳಪೆ ಆರಂಭವನ್ನು ಪಡೆದುಕೊಂಡಿತ್ತು.

3 ರನ್ ಗಳಿಸುವಷ್ಟರಲ್ಲಿ ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್ ಪಂತ್, ಟೆಸ್ಟ್ ಸರಣಿಯಲ್ಲಿನ ಉತ್ತಮ ಫಾರ್ಮ್ ಮುಂದುವರಿಸಿದರು.

ಜೋಫ್ರಾ ಆರ್ಚರ್ ಎಸೆದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ರಿವರ್ಸ್ ಸ್ವೀಪ್ ಮೂಲಕ ರಿಷಭ್ ಪಂತ್ ಸಿಕ್ಸರ್ ಬಾರಿಸಿದರು. ಅತಿ ಒತ್ತಡದ ಪವರ್ ಪ್ಲೇ ಸನ್ನಿವೇಶದಲ್ಲೂ ಪಂತ್ ಆಯ್ಕೆ ಮಾಡಿಕೊಂಡಿರುವ ಹೊಡೆತದಭಂಗಿಯು ಎಲ್ಲರನ್ನು ನಿಬ್ಬೇರಗಾಗಿಸಿದೆ.

ಕ್ರಿಕೆಟ್ ಪಂಡಿತರು ಪಂತ್ ಧೈರ್ಯವನ್ನು ಮೆಚ್ಚಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಇದಕ್ಕೆ ಸಮಾನವಾದ ರೀತಿಯಲ್ಲಿ ಸಿಕ್ಸರ್ ಸಿಡಿಸಿದ್ದರು.

ಅಂದು ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ದಾಳಿಯಲ್ಲಿ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್ ಬಾರಿಸಿದ್ದರು.

ಯಾವುದೇ ಪರಿಸ್ಥಿತಿಯಲ್ಲೂ ನಿರ್ಭೀತಿಯ ಕ್ರಿಕೆಟ್ ಆಡುವ ಪಂತ್ ಬ್ಯಾಟಿಂಗ್ ಶೈಲಿಯು ಕ್ರೀಡಾಭಿಮಾನಿಗಳ ಪ್ರೀತಿಗೂ ಕಾರಣವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡಾ ತನ್ನ ಟ್ವಿಟರ್ ಪುಟದಲ್ಲಿ ಈ ವಿಡಿಯೊ ಹಂಚಿಕೊಂಡಿದ್ದು, ನೀವು ಪಂತ್ ಆಗಿರದ ಹೊರತು ಇದನ್ನು ಅನುಕರಿಸಬಾರದು ಎಂಬ ಎಚ್ಚರಿಕಾ ಸಂದೇಶವನ್ನು ನೀಡಿದೆ.

ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಅಂತೂ, ಕ್ರಿಕೆಟ್ ಜಗತ್ತಿನಲ್ಲಿ ಆಡಲಾದ ಅತ್ಯಂತ ಶ್ರೇಷ್ಠ ಹೊಡೆತ ಎಂದು ಹಾಡಿ ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT