ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್ ‘ಸಂಪೂರ್ಣ ವಿಭಿನ್ನ ಆಟಗಾರ’: ಬೆಸ್ ಮೆಚ್ಚುಗೆ

ಚೆನ್ನೈ: ಭಾರತ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಪಡೆದು ತಮ್ಮ ತಂಡಕ್ಕೆ ಮೇಲುಗೈ ತಂದುಕೊಟ್ಟಿರುವ ಇಂಗ್ಲೆಂಡ್ನ ಆಫ್ಸ್ಪಿನ್ನರ್ ಡಾಮಿನಿಕ್ ಬೆಸ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ದಿನದಾಟ ಮುಕ್ತಾಯವಾದ ಬಳಿಕ ಮಾತನಾಡಿರುವ ಬೆಸ್, ‘ಪಂತ್ ಸಂಪೂರ್ಣ ವಿಭಿನ್ನ ಆಟಗಾರ ಮತ್ತು ಅದ್ಭುತವಾದ ಆಟವಾಡಿದ. ನನ್ನ ಪ್ರಕಾರ ಆತನದ್ದು ನಿಜವಾಗಿಯೂ ಕೆಚ್ಚೆದೆಯ ಆಟವಾಗಿತ್ತು’ ಎಂದು ಹೊಗಳಿದ್ದಾರೆ.
ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 578 ರನ್‌ಗಳ ಬೃಹತ್ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕೇವಲ 73 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಪಂತ್ ಲೀಲಾಜಾಲವಾಗಿ ಬ್ಯಾಟ್ ಬೀಸಿದರು.
ತಂಡ ಸಂಕಷ್ಟದಲ್ಲಿದ್ದರೂ ಬಿರುಸಾಗಿ ರನ್ ಗಳಿಸಿದ ಅವರು, ಟೀಂ ಇಂಡಿಯಾದ ಇನಿಂಗ್ಸ್‌ಗೆ ಬಲ ತುಂಬಿದರು. ಕೇವಲ 88 ಎಸೆತಗಳಲ್ಲಿ 5 ಸಿಕ್ಸರ್, 9 ಬೌಂಡರಿ ಸಹಿತ 91 ರನ್ ಬಾರಿಸಿ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಚೇತೇಶ್ವರ ಪೂಜಾರ 73 ರನ್ ಗಳಿಸಿದರು.
ಸದ್ಯ ಮೂರನೇ ದಿನದಾಟ ಮುಕ್ತಾಯವಾಗಿದ್ದು, ಭಾರತ 6 ವಿಕೆಟ್‌ಗಳನ್ನು ಕಳೆದುಕೊಂಡು 257 ರನ್ ಗಳಿಸಿದೆ. ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 321 ರನ್ ಗಳಿಸಬೇಕಿದೆ. ವಾಷಿಂಗ್ಟನ್ ಸುಂದರ್ (33) ಮತ್ತು ರವಿಚಂದ್ರನ್ ಅಶ್ವಿನ್ (8) ಕ್ರೀಸ್‌ನಲ್ಲಿದ್ದು, ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.