ಲಾರ್ಡ್ಸ್: ಇಂದು ಆರಂಭವಾಗಿರುವ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕ ಪೂರೈಸಿದ್ದಾರೆ. ಈ ಮೂಲಕ ಭಾರತ ತಂಡವು ಉತ್ತಮ ಮೊತ್ತ ಕಲೆಹಾಕುವತ್ತ ಮುಂದುವರಿದಿದೆ.
ಮಳೆಯಿಂದಾಗಿ ವಿಳಂಬವಾಗಿ ಟಾಸ್ ನಡೆದು, ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಫೀಲ್ಡಿಂಗ್ ಆಯ್ದುಕೊಂಡರು. ಪ್ರವಾಸಿ ಭಾರತ ತಂಡದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ಮಧ್ಯಾಹ್ನ ಭೋಜನ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 46 ರನ್ ಪೇರಿಸಿದರು. ವಿರಾಮದ ಬಳಿಕ ರೋಹಿತ್ 50 ರನ್ ಪೂರೈಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ 13ನೇ ಅರ್ಧ ಶತಕವಾಗಿದೆ.
33.3 ಓವರ್‌ಗಳಲ್ಲಿ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 102 ರನ್ ಗಳಿಸಿದೆ. ರೋಹಿತ್ ಶರ್ಮಾ 77 ರನ್ (1 ಸಿಕ್ಸರ್; 11 ಬೌಂಡರಿ) ಮತ್ತು ಕೆ.ಎಲ್.ರಾಹುಲ್ 16 ರನ್ ಗಳಿಸಿದ್ದಾರೆ. ಇಬ್ಬರ ಜೊತೆಯಾಟದಲ್ಲಿ ತಂಡದ ಸ್ಕೋರ್ 100 ರನ್ ದಾಟಿದೆ.
ಬಲಗೈ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಶಾರ್ದೂಲ್ ಠಾಕೂರ್ ಬದಲು ಇಶಾಂತ್ ಈ ಟೆಸ್ಟ್‌ನಲ್ಲಿ ಬೌಲಿಂಗ್ ಹೊಣೆ ಹೊತ್ತಿದ್ದಾರೆ. ಮಧ್ಯಮವೇಗಿ–ಆಲ್‌ರೌಂಡರ್ ಶಾರ್ದೂಲ್ ಸೋಮವಾರ ಅಭ್ಯಾಸ ಮಾಡುವ ಸಂದರ್ಭದಲ್ಲಿ ತೀವ್ರ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯ ಪೈಕಿ ಮಳೆಯಿಂದಾಗಿ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು.
ತಂಡಗಳು ಮತ್ತು ಆಟಗಾರರು:
ಭಾರತ: ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ರೋರಿ ಬರ್ನ್ಸ್, ಡಾಮನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಯಾಮ್ ಕರ್ರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್ ಮತ್ತು ಜೇಮ್ಸ್ ಆ್ಯಂಡ್ರೆಸನ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.