ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಇಂಗ್ಲೆಂಡ್ ಕೊನೆಯ ಟಿ20 ಪಂದ್ಯ: ಮೊಟೇರಾ ಅಂಗಳದಲ್ಲಿ 'ಫೈನಲ್‌' ರಂಗು

ಭಾರತ–ಇಂಗ್ಲೆಂಡ್ ಕೊನೆಯ ಟಿ20 ಪಂದ್ಯ; ಇಂದು; ಗೆದ್ದವರಿಗೆ ಸರಣಿ ಕಿರೀಟ
Last Updated 19 ಮಾರ್ಚ್ 2021, 21:19 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಟಾಸ್ ಜಯಿಸಿದರೆ ಮಾತ್ರ ಪಂದ್ಯದಲ್ಲಿ ಗೆಲ್ಲಲು ಸಾಧ್ಯವೆಂಬ ನಂಬಿಕೆಯನ್ನು ಗುರುವಾರ ಹುಸಿ ಮಾಡಿರುವ ಭಾರತ ತಂಡವು ಇಂಗ್ಲೆಂಡ್‌ಎದುರಿನ ಟಿ20 ಕ್ರಿಕೆಟ್ ಸರಣಿ ಜಯಿಸುವ ವಿಶ್ವಾಸದಲ್ಲಿದೆ.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಜಯಿಸಿದ ತಂಡಕ್ಕೆ ಸರಣಿ ಕಿರೀಟ ಒಲಿಯಲಿದೆ.2–2ರಿಂದ ಸಮಬಲ ಸಾಧಿಸಿರುವ ತಂಡಗಳ ನಡುವಣದ ಈ ಪಂದ್ಯವು ಕ್ರಿಕೆಟ್‌ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಟಾಸ್ ಜಯಿಸಿದವರೇ ಮೇಲುಗೈ ಸಾಧಿಸಿದ್ದರು. ರಾತ್ರಿಯ ಇಬ್ಬನಿಯಲ್ಲಿ ಬೌಲಿಂಗ್ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಟಾಸ್ ಗೆದ್ದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಇಂಗ್ಲೆಂಡ್ 2–1ರಿಂದ ಮುನ್ನಡೆಯನ್ನೂ ಸಾಧಿಸಿತ್ತು. ನಾಲ್ಕನೇ ಪಂದ್ಯದಲ್ಲಿಯೂ ಟಾಸ್ ಜಯಿಸಿದ್ದ ಏಯಾನ್ ಮಾರ್ಗನ್ ಬಳಗವು ಜಯದ ನಿರೀಕ್ಷೆಯಲ್ಲಿತ್ತು.

ಆದರೆ, ತಾವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆತ್ತುವ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಸೂರ್ಯಕುಮಾರ್ ಯಾದವ್ ತಂಡದ ಜಯದ ರೂವಾರಿಯಾಗಿದ್ದರು. ಮುಂಬೈ ತಂಡದ ಸೂರ್ಯ ಮಿಂಚಿನ ಅರ್ಧಶತಕ ಬಾರಿಸಿದ್ದರು. ಬೌಲಿಂಗ್‌ನಲ್ಲಿ ಅವರ ಸ್ನೇಹಿತ ಶಾರ್ದೂಲ್ ಠಾಕೂರ್ ಮೂರು ವಿಕೆಟ್‌ ಗಳಿಸಿದ್ದರು.

ಆದರೆ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರು ಹೊಸ ಚೆಂಡನ್ನು ಎಚ್ಚರಿಕೆಯಿಂದ ಆಡಿದ್ದರು. ರಾಹುಲ್ ಈ ಸರಣಿಯಲ್ಲಿ ಆಡಿದ ನಾಲ್ಕನೇ ಪಂದ್ಯದಲ್ಲಿ ಎರಡಂಕಿ ತಲುಪಿದ್ದರು.ಅವರಿಗೆ ಕೊನೆಯ ಪಂದ್ಯದಲ್ಲಿ ಮತ್ತೆ ಅವಕಾಶ ಸಿಗಬಹುದು. ಅವರಿಗೆ ವಿಶ್ರಾಂತಿ ಕೊಟ್ಟರೆ, ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಕಣಕ್ಕಿಳಿಯಬಹುದು. ಇಶಾನ್ ಕಿಶನ್ ಗಾಯಗೊಂಡಿದ್ದು ಲಭ್ಯರಿಲ್ಲ.

ಸರಣಿಯಲ್ಲಿ ಎರಡು ಅರ್ಧಶತಕ ಹೊಡೆದಿರುವ ವಿರಾಟ್ ಕೊಹ್ಲಿ ಗುರುವಾರ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಸ್ನಾಯುಸೆಳೆತಕ್ಕೊಳಗಾಗಿದ್ದರು. ಆದ್ದರಿಂದ ಕೊನೆಯ ಹಂತದ ಓವರ್‌ಗಳಲ್ಲಿ ಅವರು ಡಗ್‌ಔಟ್‌ನಲ್ಲಿ ಕುಳಿತಿದ್ದರು. ಉಪನಾಯಕ ರೋಹಿತ್ ಉಸ್ತುವಾರಿ ವಹಿಸಿದ್ದರು.ಅನುಭವಿ ಭುವನೇಶ್ವರ್ ಕುಮಾರ್, ಶಾರ್ದೂಲ್ ಮತ್ತು ಮಧ್ಯಮವೇಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಪದಾರ್ಪಣೆ ಪಂದ್ಯದಲ್ಲಿ ಎರಡು ವಿಕೆಟ್ ಗಳಿಸಿದ ರಾಹುಲ್ ಚಾಹರ್ಮತ್ತೊಂದು ಅವಕಾಶ ಪಡೆದರೆ ಅಚ್ಚರಿಯಿಲ್ಲ.

ಇಂಗ್ಲೆಂಡ್ ತಂಡವೂ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್‌ ಅವರು ಉತ್ತಮ ಆರಂಭ ನೀಡುತ್ತಿದ್ದಾರೆ. ನಾಯಕ ಏಯಾನ್ ಮಾರ್ಗನ್ ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ.ಜೋಫ್ರಾ ಆರ್ಚರ್ ’ಆಲ್‌ರೌಂಡ್‌‘ ಆಟದಲ್ಲಿ ಮಿಂಚಿದ್ದಾರೆ.ಮಾರ್ಕ್ ವುಡ್, ಕ್ರಿಸ್ ಜೋರ್ಡಾನ್ ಅವರು ಈ ಹಿಂದಿನ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್‌ಗೆ ಆರಂಭದಲ್ಲಿಯೇ ಪೆಟ್ಟು ನೀಡಿದ್ದಾರೆ.ಅವರನ್ನು ಎದುರಿಸಿ ನಿಂತರೆ ದೊಡ್ಡ ಮೊತ್ತವನ್ನು ಗಳಿಸಲು ಆತಿಥೇಯರಿಗೆ ಸಾಧ್ಯವಾಗಲಿದೆ.

ತಂಡಗಳು:

ಭಾರತ:

ವಿರಾಟ್ ಕೊಹ್ಲಿ (ನಾಯಕ),, ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ದೀಪಕ್ ಚಾಹರ್, ರಾಹುಲ್ ತೆವಾಟಿಯಾ.

ಇಂಗ್ಲೆಂಡ್:

ಏಯಾನ್ ಮಾರ್ಗನ್ (ನಾಯಕ), ಜೋಸ್‌ ಬಟ್ಲರ್, ಜೇಸನ್ ರಾಯ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌, ಮೋಯಿನ್ ಅಲಿ, ಆದಿಲ್ ರಶೀದ್,ಕ್ರಿಸ್‌ ಜೋರ್ಡಾನ್, ಮಾರ್ಕ್ ವುಡ್, ಸ್ಯಾಮ್ ಕರನ್, ಟಾಮ್ ಕರನ್, ಸ್ಯಾಮ್ ಬಿಲಿಂಗ್ಸ್, ಜಾನಿ ಬೆಸ್ಟೊ, ಜೋಫ್ರಾ ಆರ್ಚರ್, ರೀಚ್ ಟಾಪ್ಲೆ

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT