ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಒಂದೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಹಾಗೂ ಅರ್ಧಶತಕ ಸಾಧನೆ

ಅಕ್ಷರ ಗಾತ್ರ

ಎಜ್‌ಬಾಸ್ಟನ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ರಿಷಭ್ ಪಂತ್, ಒಂದೇ ಟೆಸ್ಟ್ ಪಂದ್ಯದಲ್ಲಿಶತಕ ಹಾಗೂ ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಆತಿಥೇಯ ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಗಳಿಸಿರುವ ಪಂತ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಆಕರ್ಷಕ ಅರ್ಧಶತಕಬಾರಿಸಿದರು.

ಈ ಮೂಲಕ ಟೆಸ್ಟ್‌ ಪಂದ್ಯವೊಂದರಲ್ಲೇ ಶತಕ ಹಾಗೂ ಅರ್ಧಶತಕ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿದರು. ಇದರೊಂದಿಗೆಮಾಜಿ ದಿಗ್ಗಜ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

1973ರ ಮುಂಬೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೇ ಫಾರೂಕ್ ಶತಕ ಹಾಗೂ ಅರ್ಧಶತಕವನ್ನು (121 ಹಾಗೂ 66) ಗಳಿಸಿದ್ದರು.

ಇನ್ನು ಇಂಗ್ಲೆಂಡ್ ನೆಲದಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಫಿಫ್ಟಿ ಬಾರಿಸಿದ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿದ್ದಾರೆ. 2011ರ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಮ್ಯಾಟ್ ಪ್ರಿಯರ್ ಅರ್ಧಶತಕ ಹಾಗೂ ಶತಕ (71 ಹಾಗೂ 103*) ಗಳಿಸಿದ್ದರು.

ಭಾರತದ ಹಿಡಿತದಲ್ಲಿ ಪಂದ್ಯ..
ಈ ನಡುವೆ ನಾಲ್ಕನೇ ದಿನದಾಟ ಮುಂದುವರಿಸಿದ ಟೀಮ್ ಇಂಡಿಯಾ, ರಿಷಭ್ ಪಂತ್ ಹಾಗೂ ಚೇತೇಶ್ವರ ಪೂಜಾರ ಅರ್ಧಶತಕಗಳ ಬೆಂಬಲದೊಂದಿಗೆ 65.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದ್ದು, ಬ್ಯಾಟಿಂಗ್ ಮುಂದುವರಿಸಿದೆ.

ಈ ಮೂಲಕ ಒಟ್ಟು 333 ರನ್‌ಗಳ ಮುನ್ನಡೆ ಗಳಿಸಿದ್ದು, ಪಂದ್ಯದಲ್ಲಿ ಹಿಡಿತ ಸಾಧಿಸಿದೆ.

125/3 ಎಂಬ ಮೊತ್ತದಿಂದ ನಾಲ್ಕನೇ ದಿನದಾಟ ಮುಂದುವರಿಸಿದ ಭಾರತಕ್ಕೆ ಪಂತ್ ಆಸರೆಯಾದರು. ಪೂಜಾರ 66 ರನ್ ಗಳಿಸಿ ಔಟ್ ಆದರು.

ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಪಂತ್ 57 ರನ್ ಗಳಿಸಿ ನಿರ್ಗಮಿಸಿದರು. 86 ಎಸೆತಗಳನ್ನು ಎದುರಿಸಿದ ಪಂತ್ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳು ಸೇರಿದ್ದವು.

ಈ ನಡುವೆ ಶ್ರೇಯಸ್ ಅಯ್ಯರ್ (19) ಪ್ರಭಾವಿ ಎನಿಸಲಿಲ್ಲ. ರವೀಂದ್ರ ಜಡೇಜ (7*) ಹಾಗೂ ಶಾರ್ದೂಲ್ ಠಾಕೂರ್ (0*) ಕ್ರೀಸಿನಲ್ಲಿದ್ದಾರೆ.

ಭಾರತದ 416 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲೌಟ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT