ಭಾನುವಾರ, ಜನವರಿ 16, 2022
28 °C

IND vs NZ: ಭಾರತ 276ಕ್ಕೆ ಡಿಕ್ಲೇರ್; ಕಿವೀಸ್ ಗೆಲುವಿಗೆ 540 ರನ್ ಗುರಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಗೆಲುವಿಗೆ 540 ರನ್‌ಗಳ ಬೃಹತ್ ಸವಾಲನ್ನು ಭಾರತ ಒಡ್ಡಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 276 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು. 

ಬಳಿಕ ಎರಡನೇ ಇನ್ನಿಂಗ್ಸ್ ಮುಂದುವರಿಸಿರುವ ನ್ಯೂಜಿಲೆಂಡ್ ಮೂರನೇ ದಿನದಾಟದ ಟೀ ವಿರಾಮದ ವೇಳೆಗೆ 13 ರನ್ನಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಟಾಮ್ ಲಾಥಮ್ (6) ಅವರನ್ನು ರವಿಚಂದ್ರನ್ ಅಶ್ವಿನ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.

ವಿಕೆಟ್ ನಷ್ಟವಿಲ್ಲದೆ 69 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಮಯಂಕ್ ಅಗರವಾಲ್, ಚೇತೇಶ್ವರ ಪೂಜಾರ, ಶುಭಮನ್ ಗಿಲ್ ಹಾಗೂ ಅಕ್ಷರ್ ಪಟೇಲ್ ಉತ್ತಮ ಮೊತ್ತ ಪೇರಿಸಲು ನೆರವಾದರು. 

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಾಧನೆ ಮಾಡಿರುವ ಮಯಂಕ್ ಮಗದೊಂದು ಆಕರ್ಷಕ ಅರ್ಧಶತಕ (62) ಗಳಿಸಿದರು. ಅಲ್ಲದೆ ಪೂಜಾರ ಜೊತೆಗೆ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 

ಗಾಯ ಮುಕ್ತಗೊಂಡಿರುವ ಶುಭಮನ್ ಗಿಲ್ 47 ಹಾಗೂ ನಾಯಕ ವಿರಾಟ್ ಕೊಹ್ಲಿ 36 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಕೆಳ ಕ್ರಮಾಂಕದಲ್ಲಿ ಕೇವಲ 26 ಎಸೆತಗಳಲ್ಲಿ (4 ಸಿಕ್ಸರ್, 3 ಬೌಂಡರಿ) ಅಜೇಯ 41 ರನ್ ಚಚ್ಚಿದ ಅಕ್ಷರ್ ಪಟೇಲ್ ಆಸರೆಯಾದರು. ಇನ್ನುಳಿದಂತೆ ಶ್ರೇಯಸ್ ಅಯ್ಯರ್ 14 ಹಾಗೂ ವೃದ್ಧಿಮಾನ್ ಸಹಾ 13 ರನ್ ಗಳಿಸಿದರು. 

ಕಿವೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿರುವ ಎಜಾಜ್ ಪಟೇಲ್ ಮತ್ತೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 14 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು. 

ಈ ಮೊದಲು ಭಾರತದ 325 ರನ್ನಿಗೆ ಉತ್ತರವಾಗಿ ನ್ಯೂಜಿಲೆಂಡ್ ಕೇವಲ 62 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು