ಶನಿವಾರ, ಮೇ 28, 2022
31 °C

IND vs SA: ರಾಹುಲ್, ಪಂತ್ ಅರ್ಧಶತಕ; ದ.ಆಫ್ರಿಕಾ ಗೆಲುವಿಗೆ 288 ರನ್ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ಲ್: ನಾಯಕ ಕೆ.ಎಲ್. ರಾಹುಲ್ (55) ಹಾಗೂ ರಿಷಭ್ ಪಂತ್ (85) ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಆರು ವಿಕೆಟ್ ನಷ್ಟಕ್ಕೆ 287 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಕನ್ನಡಿಗ ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ರಾಹುಲ್ ಹಾಗೂ ಶಿಖರ್ ಧವನ್ (29) ಮೊದಲ ವಿಕೆಟ್‌ಗೆ 63 ರನ್‌ಗಳ ಉಪಯುಕ್ತ ಜೊತೆಯಾಟ ಕಟ್ಟಿದರು. 

ಈ ನಡುವೆ ಶೂನ್ಯಕ್ಕೆ ಔಟ್ ಆದ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಗೂಡಿದ ರಾಹುಲ್ ಹಾಗೂ ರಿಷಭ್ ಪಂತ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. 

ತೃತೀಯ ವಿಕೆಟ್‌ಗೆ ಶತಕದ ಜೊತೆಯಾಟ (115) ಕಟ್ಟಿದ ಈ ಜೋಡಿ ತಂಡಕ್ಕೆ ನೆರವಾದರು. ಬಿರುಸಿನ ಆಟವನ್ನು ಪ್ರದರ್ಶಿಸಿದ ಪಂತ್ ಕೇವಲ 71 ಎಸೆತಗಳಲ್ಲಿ 10 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ಶತಕ ವಂಚಿತರಾದರು. 

ರಾಹುಲ್ 79 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನಿಂದ 55 ರನ್ ಗಳಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬೆನ್ನಲ್ಲೇ ಭಾರತ ಮಗದೊಮ್ಮೆ ಹಿನ್ನಡೆ ಅನುಭವಿಸಿತು. 

ಶ್ರೇಯಸ್ ಅಯ್ಯರ್ (11) ಹಾಗೂ ವೆಂಕಟೇಶ್ ಅಯ್ಯರ್ (22) ಹೆಚ್ಚು ಹೊತ್ತು ನಿಲ್ಲಲಿಲ್ಲ. 

ಅಂತಿಮ ಹಂತದಲ್ಲಿ ಮುರಿಯದ ಏಳನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ಕಟ್ಟಿದ ಶಾರ್ದೂಲ್ ಠಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ (25*) ತಂಡಕ್ಕೆ ನೆರವಾದರು. 

38 ಎಸೆತಗಳನ್ನು ಎದುರಿಸಿದ ಠಾಕೂರ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ ಎರಡು ವಿಕೆಟ್ ಕಬಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು