ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 : ಭಾರತಕ್ಕೆ ಸರಣಿ ಜಯದ ತವಕ

ಬೌಲಿಂಗ್ ಪಡೆಗೆ ಪರೀಕ್ಷೆ
Last Updated 1 ಅಕ್ಟೋಬರ್ 2022, 19:38 IST
ಅಕ್ಷರ ಗಾತ್ರ

ಗುವಾಹಟಿ: ಜಸ್‌ಪ್ರೀತ್ ಬೂಮ್ರಾ ಇಲ್ಲದ ಬೌಲಿಂಗ್ ಪಡೆಯನ್ನು ಸಮತೋಲನಗೊಳಿಸುವ ಸವಾಲು ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ಬಳಗದ ಮುಂದಿದೆ.

ಅಸ್ಸಾಂ ರಾಜಧಾನಿಯ ಬರ್ಸಾಪುರದಲ್ಲಿರುವ ಡಾ.ಭೂಪೆನ್ ಹಜಾರಿಕಾ ಕ್ರೀಡಾಂಗಣದಲ್ಲಿ
ಭಾನುವಾರ ನಡೆಯಲಿರುವ ಎರಡನೇ ಟಿ20 ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಛಲ ದಲ್ಲಿರುವ ಆತಿಥೇಯರು ಬೌಲಿಂಗ್‌ ವಿಭಾಗದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗುವುದು ಖಚಿತ.

ತಿರುವನಂತಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆರ್ಷದೀಪ್ ಸಿಂಗ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಗಳಿಸಿ ದಕ್ಷಿಣ ಆಫ್ರಿಕಾ ಬಳಗಕ್ಕೆ ಬಲವಾದ ಪೆಟ್ಟುಕೊಟ್ಟಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ಬಳಗವು ಸಣ್ಣ ಮೊತ್ತ ಗಳಿಸಿತ್ತು. ಸೂರ್ಯಕುಮಾರ್ ಯಾದವ್ ಹಾಗೂ ಕೆ.ಎಲ್. ರಾಹುಲ್ ಅಜೇಯ ಅರ್ಧ ಶತಕಗಳಿಂದಾಗಿ ಗೆಲುವು ಸುಲಭವಾಗಿತ್ತು.

ತಿರುವನಂತಪುರ ಪಂದ್ಯಕ್ಕೂ ಮುನ್ನವೇ ವೇಗಿ ಜಸ್‌ಪ್ರೀತ್ ಬೂಮ್ರಾ ಬೆನ್ನುನೋವಿನಿಂದಾಗಿ ಹೊರಗುಳಿದಿದ್ದರು. ನಂತರ ವೈದ್ಯಕೀಯ ತಂಡವು ಅವರಿಗೆ ಆರು ತಿಂಗಳ ವಿಶ್ರಾಂತಿ ಅಗತ್ಯವಿರುವುದಾಗಿ ತಿಳಿಸಿತ್ತು. ಇದರಿಂದಾಗಿ ಅವರು ಮುಂದಿನ ತಿಂಗಳು ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲವೆಂದು ಬಿಸಿಸಿಐ ಮೂಲಗಳೇ ತಿಳಿಸಿದ್ದವು.

ಇದರಿಂದಾಗಿ ಆಸ್ಟ್ರೇಲಿಯಾಗೆ ತೆರಳುವ ಮುನ್ನ ಉಳಿದಿರುವ ಎರಡು ಟಿ20 ಪಂದ್ಯಗಳಲ್ಲಿ ಬೂಮ್ರಾ ಹೊಣೆ ಯನ್ನು ನಿಭಾಯಿಸುವ ಬೌಲರ್‌ಗಾಗಿ ಶೋಧ ನಡೆದಿದೆ. ಆರ್ಷದೀಪ್ ಜೊತೆಗೆ ಹರ್ಷಲ್ ಪಟೇಲ್, ದೀಪಕ್ ಚಾಹರ್ ಅವರ ಮೇಲೂ ಕಣ್ಣಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಉಮೇಶ್ ಯಾದವ್ ಅವರಿಗೆ ಅವಕಾಶ ಸಿಗುವುದು ಅನುಮಾನ.

ದುರ್ಗಾ ಪೂಜೆಯ ಸಂಭ್ರಮ, ಸಡಗರಗಳು ಮನೆ ಮಾಡಿರುವ ಗುವಾಹಟಿಯಲ್ಲಿ ಸಿಕ್ಸರ್, ಬೌಂಡಿಗಳ ಚಿತ್ತಾರ ಬಿಡಿಸಲು ಸೂರ್ಯ ತುದಿಗಾಲಿನಲ್ಲಿ ನಿಂತಿದ್ದಾರೆ. ವಿರಾಟ್, ರೋಹಿತ್, ರಿಷಭ್ ಹಾಗೂ ದಿನೇಶ್ ಕೂಡ ತಮ್ಮ ಬ್ಯಾಟಿಂಗ್ ಬಲ ತೋರುವ ವಿಶ್ವಾಸದಲ್ಲಿದ್ಧಾರೆ.

ಸರಣಿ ಗೆಲುವಿನ ಆಸೆ ಜೀವಂತವಾಗುಳಿಯಬೇಕಾದರೆ ದಕ್ಷಿಣ ಆಫ್ರಿಕಾ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ. ತೆಂಬಾ ಬವುಮಾ ಬಳಗವು ಉತ್ತಮ ಸಮತೋಲನದಿಂದ ಕೂಡಿದೆ. ಅನುಭವಿ ಕಗಿಸೊ ರಬಡಾ, ಲುಂಗಿ ಗಿಡಿ ಹಾಗೂ ಎನ್ರಿಚ್ ನಾಕಿಯಾ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಸ್ಫೋಟಕ ಶೈಲಿಯ ಬ್ಯಾಟರ್‌ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್ ಹಾಗೂ ಏಡನ್ ಮರ್ಕರಂ ಅವರು ಮಿಂಚಿದರೆ ಭಾರತದ ಬೌಲರ್‌ಗಳಿಗೆ ಕಠಿಣವಾಗಬಹುದು.

ಟಿಕೆಟ್ ಸೋಲ್ಡ್‌ ಔಟ್

ಎರಡು ವರ್ಷಗಳ ನಂತರ ಇಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದರಿಂದ ವೀಕ್ಷಣೆಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಲ್ಲ ಟಿಕೆಟ್‌ಗಳೂ ಮಾರಾಟವಾಗಿವೆ.

‘38 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 21,200 ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಉಳಿದದ್ದು ಕ್ಲಬ್‌ಗಳು, ಗಣ್ಯರು, ಪದಾಧಿಕಾರಿಗಳಿಗಾಗಿ ಮೀಸಲಾಗಿವೆ. ಜನರಿಂದ ಅಪಾರ ಬೇಡಿಕೆ ಬಂದಿದೆ’ ಎಂದು ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ.

ಪಿಚ್ ಪರಿಸ್ಥಿತಿ?

ಇಲ್ಲಿ ಈ ಹಿಂದೆ ನಡೆದಿರುವ ಐದು ಪಂದ್ಯಗಳಲ್ಲಿ ಬೃಹತ್ ಮೊತ್ತಗಳು ದಾಖಲಾಗಿಲ್ಲ. 160 ರನ್‌ ಇಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತವಾಗಿದೆ. ಬೌಲರ್‌ಗಳಿಗೇ ಹೆಚ್ಚು ನೆರವು ಸಿಗುವ ಸಾಧ್ಯತೆ ಇದೆ.

ಭಾನುವಾರ ಮಧ್ಯಾಹ್ನ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT