ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI: ಕರ್ನಾಟಕದ ಪ್ರಸಿದ್ಧ ಕೃಷ್ಣ ಪ್ರದರ್ಶನಕ್ಕೆ ಇರ್ಫಾನ್ ಪಠಾಣ್ ಮೆಚ್ಚುಗೆ

Last Updated 10 ಫೆಬ್ರುವರಿ 2022, 8:12 IST
ಅಕ್ಷರ ಗಾತ್ರ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಅವರನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.

ಮೋಟೆರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ನಡೆದಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ 44 ರನ್ ಅಂತರದ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 2–0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.ಪಂದ್ಯದಲ್ಲಿ 9 ಓವರ್‌ ಬೌಲಿಂಗ್ ಮಾಡಿದ ಕೃಷ್ಣ, ಕೇವಲ 12 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿ, ಪಂದ್ಯಶ್ರೇಷ್ಠ ಎನಿಸಿಕೊಂಡರು.

ಪ್ರಸಿದ್ಧ ಪ್ರದರ್ಶನದ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಪಠಾಣ್, 'ಪ್ರಸಿದ್ಧ ಕೃಷ್ಣ ಇಂದು ಅಮೋಘ ಪ್ರದರ್ಶನ ನೀಡಿದ್ದಾರೆ. ನೀಳಕಾಯದ ವೇಗದ ಬೌಲರ್ ಪ್ರಗತಿಯತ್ತ ಸಾಗುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ. ವೆಲ್ ಡನ್ ಟೀಂ ಇಂಡಿಯಾ' ಎಂದು ಅಭಿನಂದಿಸಿದ್ದಾರೆ.

ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ (5) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (18) ವೈಫಲ್ಯ ಅನುಭವಿಸಿದರೂ, ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ (64) ಮತ್ತು ಉಪನಾಯಕ ಕೆ.ಎಲ್.ರಾಹುಲ್ (49) ಉಪಯುಕ್ತ ಕೊಡುಗೆ ನೀಡಿದರು.

ಸಾಧಾರಣ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್ಇನ್ನೂ 4 ಓವರ್ ಇರುವಾಗಲೇ 193 ರನ್ ಗಳಿಗೆ ಸರ್ವಪತನ ಕಂಡಿತು.2 ವಿಕೆಟ್ ಪಡೆದ ಶಾರ್ದೂಲ್ ಠಾಕೂರ್, ತಲಾ ಒಂದೊಂದು ವಿಕೆಟ್ ಹಂಚಿಕೊಂಡ ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಹೂಡಾ ಅವರು ಪ್ರಸಿದ್ಧ ಕೃಷ್ಣಗೆ ಉತ್ತಮ ಬೆಂಬಲ ನೀಡಿದರು.

ಇದೇ ಮೈದಾನದಲ್ಲಿ ಫೆ.6 ರಂದು ನಡೆದ ಮೊದಲ ಪಂದ್ಯವನ್ನು ರೋಹಿತ್ ಪಡೆ ಆರು ವಿಕೆಟ್ ಅಂತರದಿಂದ ಗೆದ್ದುಕೊಂಡಿತ್ತು. ಮೂರನೇ ಹಾಗೂ ಅಂತಿಮ ಪಂದ್ಯವೂ ಇದೇ ಕ್ರೀಡಾಂಗಣದಲ್ಲಿ ಫೆ.11 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT