ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Womens World Cup | ಭಾರತಕ್ಕೆ ಜಯದ ಲಯ ಮುಂದುವರಿಸುವ ತವಕ

ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಹಾಲಿ ಚಾಂಪಿಯನ್ ಇಂಗ್ಲೆಂಡ್‌ ತಂಡದ ಸವಾಲು
Last Updated 15 ಮಾರ್ಚ್ 2022, 19:37 IST
ಅಕ್ಷರ ಗಾತ್ರ

ಮೌಂಟ್ ಮಾಂಗನುಯಿ: ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಭಾರತ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಆಡಿರುವ ಎಲ್ಲ ಮೂರು ಪಂದ್ಯಗಳನ್ನು ಸೋತಿದೆ. ಪ್ಲೇ ಆಫ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಹೀದರ್ ನೈಟ್ ಬಳಗ ಉಳಿದ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಬೇಕು. ಹೀಗಾಗಿ ಭಾರತದ ವಿರುದ್ಧ ಪ್ರಬಲ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ 155 ರನ್‌ಗಳ ಗೆಲುವು ಸಾಧಿಸಿರುವ ಮಿಥಾಲಿ ರಾಜ್ ಬಳಗ ಭರವಸೆಯ ಅಲೆಯಲ್ಲಿದೆ. ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರು ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿರುವುದು ಭಾರತದ ಪಾಳಯದಲ್ಲಿ ಸಂತಸ ಮೂಡಿಸಿದೆ. ಆರಂಭಿಕ ಬ್ಯಾಟರ್ ಯಾಷ್ಟಿಕಾ ಭಾಟಿಯಾ ಕೂಡ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಆಟವಾಡಿದ್ದರು. ಹೀಗಾಗಿ ಇಂಗ್ಲೆಂಡ್ ಎದುರು ಭರವಸೆಯಿಂದಲೇ ತಂಡ ಕಣಕ್ಕೆ ಇಳಿಯಲಿದೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿರುವ ದೀಪ್ತಿ ಶರ್ಮಾ ಮತ್ತು ನಾಯಕಿ ಮಿಥಾಲಿ ರಾಜ್ ಅವರಿಗೆ ಇನ್ನೂ ನಿರೀಕ್ಷೆಗೆ ತಕ್ಕಂತೆ ಸಾಮರ್ಥ್ಯ ತೋರಲು ಆಗಲಿಲ್ಲ ಎಂಬುದು ತಂಡವನ್ನು ಕಾಡುತ್ತಿರುವ ಸಮಸ್ಯೆ. ರಿಚಾ ಘೋಷ್ ವಿಕೆಟ್ ಹಿಂದೆ ತಮ್ಮ ಕೈಚಳಕ ತೋರಲು ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಅವರ ಮೇಲೆ ಇನ್ನಷ್ಟು ನಿರೀಕ್ಷೆಗಳು ಇವೆ. ಆಲ್‌ರೌಂಡರ್‌ಗಳಾದ ಸ್ನೇಹ್ ರಾಣಾ ಮತ್ತು ಪೂಜಾ ವಸ್ತ್ರಕರ್ ತಂಡದ ಆಸ್ತಿಯಾಗಿದ್ದಾರೆ.

ಇಂಗ್ಲೆಂಡ್‌ಗೆ ಸಿಡಿದೇಳುವ ತವಕ
ಆರಂಭದಿಂದಲೇ ನಿರಾಸೆ ಕಂಡಿರುವ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದು ಸಿಡಿದೇಳುವ ತವಕದಲ್ಲಿದೆ. ಬುಧವಾರದ ಪಂದ್ಯದಲ್ಲಿ ಸೋತರೆ ತಂಡದ ಪ್ಲೇ ಆಫ್ ಹಂತಕ್ಕೇರುವ ಆಸೆ ಕಮರಿ ಹೋಗಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT