ಶನಿವಾರ, ಮೇ 21, 2022
23 °C
ಕರ್ನಾಟಕದ ಅನೀಶ್ವರ್ ಗೌತಮ್‌ಗೆ ಸ್ಥಾನ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌: ಭಾರತ ತಂಡಕ್ಕೆ ಯಶ್ ಧುಳ್‌ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವೆಸ್ಟ್ ಇಂಡೀಸ್‌ನಲ್ಲಿ ಜನವರಿ 14ರಿಂದ ಫೆಬ್ರುವರಿ 5ರವರೆಗೆ ನಡೆಯಲಿರುವ 19 ವರ್ಷದೊಳಗಿನವರ  ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಯಶ್ ಧುಳ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 17 ಸದಸ್ಯರ ತಂಡವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. ಕರ್ನಾಟಕದ ಅನೀಶ್ವರ್ ಗೌತಮ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. 

ನಾಲ್ಕು ಬಾರಿ ವಿಶ್ವಕಪ್ ವಿಜೇತ ಭಾರತವು ‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಉಗಾಂಡ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಡಿಸೆಂಬರ್ 23ರಿಂದ ಯುಎಇಯಲ್ಲಿ ನಡೆಯಲಿರುವ ಮುಂಬರುವ ಏಷ್ಯಾಕಪ್‌ಗೆ ನಾಯಕರಾಗಿ ನೇಮಕಗೊಂಡಿದ್ದರಿಂದ ಧುಳ್‌ ಅವರ ನೇಮಕವು ನಿರೀಕ್ಷಿತವಾಗಿತ್ತು. ಆಂಧ್ರದ ಎಸ್‌.ಕೆ. ರಶೀದ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

ಓದಿ: 

’ಅಖಿಲ ಭಾರತ ಜೂನಿಯರ್ ಆಯ್ಕೆ ಸಮಿತಿಯು 2022ರ ಜನವರಿ 14ರಿಂದ ಫೆಬ್ರುವರಿ 5ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ  ನಿಗದಿಯಾಗಿರುವ ಐಸಿಸಿ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ‘ ಎಂದು ಬಿಸಿಸಿಐ  ಪ್ರಕಟಣೆಯಲ್ಲಿ ತಿಳಿಸಿದೆ.

14ನೇ ಆವೃತ್ತಿಯ ಟೂರ್ನಿಯಲ್ಲಿ 48 ಪಂದ್ಯಗಳಲ್ಲಿ 16 ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.

ಭಾರತ ತಂಡವು 2000, 2008, 2012 ಮತ್ತು 2018ರಲ್ಲಿ ಪ್ರಶಸ್ತಿ ಜಯಿಸಿದೆ. 2016ರ ಮತ್ತು 2020ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು.

ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ದೆಹಲಿಯ ಯಶ್‌, ಈ ವರ್ಷದ ಆರಂಭದಲ್ಲಿ ವಿನೂ ಮಂಕಡ್ ಟ್ರೋಫಿಯಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ ಆಗಿದ್ದಾರೆ. ತಂಡವು ಆಡಿದ ಐದು ಪಂದ್ಯಗಳಲ್ಲಿ ದೆಹಲಿ ತಂಡಕ್ಕಾಗಿ ಅವರು 75.50 ಸರಾಸರಿಯಲ್ಲಿ 302 ರನ್‌ಗಳನ್ನು ಗಳಿಸಿದ್ದರು.

ಓದಿ: 

ಜನವರಿ 15ರಂದು ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಜನವರಿ 19 ಮತ್ತು 22ರಂದು ಕ್ರಮವಾಗಿ ಐರ್ಲೆಂಡ್ ಮತ್ತು ಉಗಾಂಡಾ ವಿರುದ್ಧ ಗುಂಪು ಹಂತದ ಪಂದ್ಯಗಳನ್ನು ಆಡಲಿದೆ.

ಆಂಟಿಗಾ ಆ್ಯಂಡ್‌ ಬಾರ್ಬಡಾ, ಗಯಾನಾ, ಸೇಂಟ್ ಕಿಟ್ಸ್ ಆ್ಯಂಡ್‌ ನೆವಿಸ್ ಮತ್ತು ಟ್ರಿನಿಡಾಡ್ ಆ್ಯಂಡ್‌ ಟೊಬಾಗೊದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಜನವರಿ 14ರಂದು ಗಯಾನಾದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ, ಸ್ಕಾಟ್ಲೆಂಡ್ಅನ್ನು ಎದುರಿಸಲಿದೆ. ಅದೇ ದಿನ ಆತಿಥೇಯ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಫೆಬ್ರುವರಿ 1 ಮತ್ತು 2ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೆಬ್ರುವರಿ 5ರಂದು ಫೈನಲ್‌ ನಡೆಯಲಿದೆ.

ಭಾರತ ತಂಡ: ಯಶ್ ಧುಳ್‌ (ನಾಯಕ), ಎಸ್‌.ಕೆ. ರಶೀದ್ (ಉಪನಾಯಕ) ಹರ್ನೂರ್ ಸಿಂಗ್, ಅಂಗ್‌ಕ್ರಿಶ್‌ ರಘುವಂಶಿ, ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ವಿಕೆಟ್‌ ಕೀಪರ್‌), ಆರಾಧ್ಯ ಯಾದವ್ (ವಿಕೆಟ್‌ ಕೀಪರ್‌), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್. ಎಸ್. ಹಂಗರ್‌ಗೇಕರ್‌, ವಾಸು ವತ್ಸ್‌ , ವಿಕ್ಕಿ ಓಸ್ವಾಲ್‌, ರವಿಕುಮಾರ್, ಗರ್ವ್ ಸಂಗ್ವಾನ್.

ಕಾಯ್ದಿರಿಸಿದ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರನ್‌, ಅಂಶ್‌ ಗೋಸಾಯಿ, ಅಮೃತರಾಜ್‌ ಉಪಾಧ್ಯಾಯ, ಪಿಎಂ ಸಿಂಗ್‌ ರಾಥೋಡ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು