ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 1st ODI | ಬೂಮ್ರಾ ಬಿರುಗಾಳಿಗೆ ಇಂಗ್ಲೆಂಡ್ ದೂಳೀಪಟ

ಏಕದಿನ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ದಾಖಲೆ; ಭಾರತ ಜಯಭೇರಿ; ಅಲ್ಪಮೊತ್ತಕ್ಕೆ ಕುಸಿದ ಆತಿಥೇಯರು
ಅಕ್ಷರ ಗಾತ್ರ

ಲಂಡನ್ (ಪಿಟಿಐ): ತಮ್ಮ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಜಸ್‌ಪ್ರೀತ್ ಬೂಮ್ರಾ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯದ ಕಾಣಿಕೆ ನೀಡಿದರು.

ದ ಒವಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೂಮ್ರಾ (7.2–3–19–6) ಸ್ವಿಂಗ್ ದಾಳಿಗೆ ಆತಿಥೇಯ ಬಳಗವು ದೂಳೀಪಟವಾಯಿತು. 25.2 ಓವರ್‌ಗಳಲ್ಲಿ 110 ರನ್‌ ಗಳಿಸಿತು. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಎದುರು ಇಂಗ್ಲೆಂಡ್ ಗಳಿಸಿದ ಅತ್ಯಂತ ಸಣ್ಣ ಮೊತ್ತ ಇದು. 2006ರಲ್ಲಿ ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ 125 ರನ್‌ ಗಳಿಸಿತ್ತು.

ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 18.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 114 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ (ಅಜೇಯ 76; 58ಎ, 4X7, 6X5) ಮತ್ತು ಶಿಖರ್ ಧವನ್ (ಅಜೇಯ 31; 54ಎ, 4X4) ಸುಂದರ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು 10 ವಿಕೆಟ್‌ಗಳ ಜಯ ದಾಖಲಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1–0 ಮುನ್ನಡೆ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ನಿರ್ಧಾರವನ್ನು ಬೂಮ್ರಾ ಸಮರ್ಥಿಸಿಕೊಂಡರು. ಇನ್ನೊಂದು ಬದಿಯಿಂದ ಮೊಹಮ್ಮದ್ ಶಮಿ (31ಕ್ಕೆ3) ಕೂಡ ಅಮೋಘ ಬೌಲಿಂಗ್ ಮಾಡಿದರು. ಕನ್ನಡಿಗ ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಗಳಿಸಿದರು. ಇದರೊಂದಿಗೆ ಇಂಗ್ಲೆಂಡ್‌ನ ಎಲ್ಲ ವಿಕೆಟ್‌ಗಳೂ ಮಧ್ಯಮವೇಗಿಗಳ ಖಾತೆ ಸೇರಿದವು.

ಬೂಮ್ರಾ ತಮ್ಮ ಮೊದಲ ಓವರ್‌ನಲ್ಲಿಯೇ ಆರಂಭಿಕ ಬ್ಯಾಟರ್ ಜೇಸನ್ ರಾಯ್ ಮತ್ತು ಜೋ ರೂಟ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಜಾನಿ ಬೆಸ್ಟೊ (7) ವಿಕೆಟ್ ಕಬಳಿಸಿದ ಬೂಮ್ರಾ ಸಂಭ್ರಮಿಸಿದರು. ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಲಿವಿಂಗ್‌ಸ್ಟೋನ್‌ ಸ್ಪಂಪ್ ಉರುಳಿಸಿದರು. ತಮ್ಮ ಮೊದಲ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ಗಳಿಸಿದ ಅವರು, ಎರಡನೇ ಸ್ಪೆಲ್‌ನಲ್ಲಿ ಹಾಕಿದ 14 ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು.

30 ರನ್‌ ಗಳಿಸಿದ ನಾಯಕ ಜೊಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಕ್ರೇಗ್‌ ಓವರ್ಟನ್ ಅವರಿಗೆ ಪೆವಿಲಿಯನ್ ಹಾದಿ ತೋರಿದ ಶಮಿ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT