ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಅಂತಿಮ ಮಹಿಳಾ ಟಿ20 ಪಂದ್ಯ: ಬೌಲಿಂಗ್ ಸುಧಾರಿಸುವತ್ತ ಚಿತ್ತ

Published 8 ಜುಲೈ 2024, 22:52 IST
Last Updated 8 ಜುಲೈ 2024, 22:52 IST
ಅಕ್ಷರ ಗಾತ್ರ

ಚೆನ್ನೈ : ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಲು ಭಾರತ ಮಹಿಳಾ ತಂಡ ತನ್ನೆಲ್ಲಾ ಪ್ರಯತ್ನ ನಡೆಸಲಿದೆ. ಆದರೆ ಭಾರತ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಾಗಿದೆ.

ಮೊದಲ ಪಂದ್ಯವನ್ನು ಪ್ರವಾಸಿ ತಂಡ 12 ರನ್‌ಗಳಿಂದ ಗೆದ್ದುಕೊಂಡಿತ್ತು. ಭಾನುವಾರ ನಡೆದ ಎರಡನೇ ಪಂದ್ಯ ಅರ್ಧದಷ್ಟು ನಡೆದ ನಂತರ ಮಳೆಯಿಂದಾಗಿ ಭಾರತದ ಇನಿಂಗ್ಸ್‌ ಆರಂಭವಾಗುವ ಮೊದಲೇ ಸೋನೆ ಮಳೆಯಾಗಿ ನಂತರ ಪಂದ್ಯ ರದ್ದುಗೊಂಡಿತ್ತು. ಹೀಗಾಗಿ ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತ ಗೆಲ್ಲಬೇಕಾದ ಒತ್ತಡದಲ್ಲಿದೆ. ಪಂದ್ಯ ನಡೆಯಲು ಮಳೆಯು ಅನುವು ಮಾಡಿಕೊಡಬಹುದೆಂಬ ವಿಶ್ವಾಸದಲ್ಲಿ ಆತಿಥೇಯ ತಂಡವಿದೆ.

ಮೊದಲ ಎರಡೂ ಪಂದ್ಯಗಳಲ್ಲಿ ಭಾರತದ ಬೌಲರ್‌ಗಳು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ವಿಫಲರಾಗಿದ್ದು ಎದ್ದುಕಂಡಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ಆಟಗಾರ್ತಿಯರು 9 ವಿಕೆಟ್‌ಗೆ 189 ರನ್ ಗಳಿಸಿದ್ದರೆ, ಎರಡನೇ ಪಂದ್ಯದಲ್ಲಿ ಮಳೆಯಿಂದ ಪಂದ್ಯ ರದ್ದಾಗುವ ಮೊದಲು 6 ವಿಕೆಟ್‌ಗೆ 177 ರನ್ ಕಲೆಹಾಕಿದ್ದರು.

ಮೊದಲ ಪಂದ್ಯದಲ್ಲಿ ರೇಣುಕಾ ಸಿಂಗ್ ದುಬಾರಿಯಾದರೆ, ಎರಡನೇ ಪಂದ್ಯದಲ್ಲಿ ಅವರ ಬದಲು ಕಣಕ್ಕಿಳಿದಿದ್ದ ಸಜೀವನ್ ಸಜನಾ ಕೂಡ ಅಷ್ಟೇನೂ ಪರಿಣಾಮಕಾರಿ ಆಗಿರಲಿಲ್ಲ. ಎರಡನೇ ಪಂದ್ಯದಲ್ಲಿ ರಾಧಾ ಯಾದವ್ ಮತ್ತು ಶ್ರೇಯಾಂಕಾ ಪಾಟೀಲ್ ಒಂದೊಂದು ವಿಕೆಟ್‌ ಪಡೆದರೂ ರನ್‌ಗಳನ್ನು ನಿಯಂತ್ರಿಸಲು ಅವರಿಗೆ ಆಗಿರಲಿಲ್ಲ. ಹೀಗಾಗಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅವರು ಬೌಲರ್‌ಗಳಿಂದ ಸುಧಾರಿತ ನಿರ್ವಹಣೆ ನಿರೀಕ್ಷಿಸಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಜೆಮಿಮಾ ರಾಡ್ರಿಗಸ್ (ಔಟಾಗದೇ 53), ಸ್ಮೃತಿ ಮಂದಾನ (46), ಹರ್ಮನ್‌ಪ್ರೀತ್ (35) ಉಪಯುಕ್ತ ಆಟವಾಡಿದ್ದಾರೆ. ಎರಡನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ವಿಕೆಟ್‌ ಕೀಪರ್‌– ಬ್ಯಾಟರ್‌ ಉಮಾ ಚೆಟ್ರಿ ಅವರಿಗೆ ತಂಡದ ಆಡಳಿತ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ. ಅವರಿಂದ ಬ್ಯಾಟಿಂಗ್‌ನಲ್ಲೂ ತಂಡ ನಿರೀಕ್ಷೆ ಹೊಂದಿದೆ.

ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಗಮನಾರ್ಹ ಆಟವಾಡಿದ್ದಾರೆ. ತಾಜ್ನಿಮ್ ಬ್ರಿಟ್ಸ್ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ನಾಯಕಿ ಲಾರಾ ವೊಲ್ವಾರ್ಟ್‌, ಮರೈಝನ್ ಕಾಪ್‌ ಮತ್ತು ಅನೆಕೆ ಬಾಷ್‌ ಅವರೂ ಉಪಯುಕ್ತ ಆಟವಾಡಿದ್ದಾರೆ. ಕ್ಲೊ ಟ್ರಿಯಾನ್ (2 ಪಂದ್ಯಗಳಿಂದ 24 ರನ್‌) ಮಾತ್ರ ನಿರಾಸೆ ಮೂಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ಗೇ ಮೂರೇ ತಿಂಗಳು ಉಳಿದಿರುವ ಕಾರಣ ಟ್ರಿಯಾನ್ ಕೂಡ ಲಯಕ್ಕೆ ಮರಳಲು ತವಕದಿಂದ ಇದ್ದಾರೆ.

ಪಂದ್ಯ ಆರಂಭ:

ನೇರ ಪ್ರಸಾರ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT