ಭಾನುವಾರ, ಏಪ್ರಿಲ್ 2, 2023
33 °C
ಏಕದಿನ ಸರಣಿ ರೋಹಿತ್‌ ಪಡೆ ಕೈವಶ

ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯ: ರಾಹುಲ್ ಆಟ, ಭಾರತಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕನ್ನಡಿಗ ಕೆ.ಎಲ್. ರಾಹುಲ್  ಸರಿಯಾದ ಸಮಯಕ್ಕೆ ಲಯಕ್ಕೆ ಮರಳಿದರು. ಈಡನ್‌ ಗಾರ್ಡನ್‌ನಲ್ಲಿ ಗುರುವಾರ ಅವರು ಗಳಿಸಿದ ಅರ್ಧಶತಕದ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರಿನ ಏಕದಿನ ಪಂದ್ಯದಲ್ಲಿ ಜಯಿಸಿತು.

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಹುಲ್ (ಅಜೇಯ 64; 103ಎ, 4X6)  ಉತ್ತಮ ಆಟದಿಂದ ಭಾರತವು 4 ವಿಕಟ್‌ಗಳಿಂದ ಗೆದ್ದಿತು. ಅಲ್ಲದೇ ರಾಹುಲ್ ಆಟದಿಂದಾಗಿ  ಭಾರತದ ಬೌಲರ್‌ಗಳ ಅಮೋಘ ಆಟವು ವ್ಯರ್ಥವಾಗುವುದು ತಪ್ಪಿತು. 

ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊಹಮ್ಮದ್ ಸಿರಾಜ್ (30ಕ್ಕೆ3) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (51ಕ್ಕೆ3) ಅವರ ದಾಳಿಗೆ ಕುಸಿದ ಲಂಕಾ ತಂಡವು 39.4 ಓವರ್‌ಗಳಲ್ಲಿ 215 ರನ್ ಗಳಿಸಿತು. ಆರಂಭಿಕ ಬ್ಯಾಟರ್ ನುವಂದು ಫರ್ನಾಂಡೊ (50; 63ಎ) ಅರ್ಧಶತಕ ಗಳಿಸಿದರು.

ಸಾಧಾರಣ ಗುರಿ ಬೆನ್ನಟ್ಟದ ಭಾರತ ತಂಡಕ್ಕೆ ಪ್ರವಾಸಿ ತಂಡದ ಬೌಲರ್‌ಗಳು ಕಠಿಣ ಪೈಪೋಟಿಯೊಡ್ಡಿದರು. ಇದರಿಂದಾಗಿ ತಂಡವು 86 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ನಾಲ್ಕು ರನ್ ಗಳಿಸಿ ಔಟಾದರು. ರೋಹಿತ್, ಗಿಲ್ ಮತ್ತು ಶ್ರೇಯಸ್ ಕೂಡ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಈ ಹಂತದಲ್ಲಿ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ (36; 53ಎ) ತಾಳ್ಮೆಯ ಜೊತೆಯಾಟವಾಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 75 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಗೆಲುವಿನ ಹಾದಿ ಸುಲಭವಾಯಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 39.4 ಓವರ್‌ಗಳಲ್ಲಿ 215 (ಅವಿಷ್ಕಾ ಫರ್ನಾಂಡೊ 20, ನುವಾಂದು ಫರ್ನಾಂಡೊ 50, ಕುಶಾಲ ಮೆಂಡಿಸ್ 34, ವೆಳಾಲಗೆ 32, ಮೊಹಮ್ಮದ್ ಸಿರಾಜ್ 30ಕ್ಕೆ3, ಉಮ್ರಾನ್ ಮಲಿಕ್ 48ಕ್ಕೆ2, ಕುಲದೀಪ್ ಯಾದವ್ 51ಕ್ಕೆ3)

ಭಾರತ: 43.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 219 (ಶುಭಮನ್ ಗಿಲ್ 21, ಶ್ರೇಯಸ್ ಅಯ್ಯರ್ 28, ಕೆ.ಎಲ್. ರಾಹುಲ್ ಅಜೇಯ 64, ಹಾರ್ದಿಕ್ ಪಾಂಡ್ಯ 36, ಅಕ್ಷರ್ ಪಟೇಲ್ 21, ಕುಲದೀಪ್ ಯಾದವ್ ಔಟಾಗದೆ 10, ಲಹಿರು ಕುಮಾರ 64ಕ್ಕೆ2, ಚಾಮಿಕಾ ಕರುಣಾರತ್ನೆ 51ಕ್ಕೆ2)

ಫಲಿತಾಂಶ: ಭಾರತ ತಂಡಕ್ಕೆ 4 ವಿಕೆಟ್‌ಗಳ ಜಯ. 2–0ಯಿಂದ ಸರಣಿ ಕೈವಶ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು