ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈನಲ್ಲಿ ಎರಡನೇ ಟೆಸ್ಟ್: ತವರಿನಂಗಳದಲ್ಲಿ ಅಶ್ವಿನ್ ಸ್ಪಿನ್

ರಿಷಭ್ ಪಂತ್ ಅರ್ಧಶತಕ; ಒಂದೇ ದಿನ 15 ವಿಕೆಟ್‌ಗಳ ಪತನ
Last Updated 14 ಫೆಬ್ರುವರಿ 2021, 21:29 IST
ಅಕ್ಷರ ಗಾತ್ರ

ಚೆನ್ನೈ: ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ತವರಿನಂಗಳದಲ್ಲಿ ಪ್ರವಾಸಿ ಇಂಗ್ಲೆಂಡ್ ಬಳಗವನ್ನು ಮಣ್ಣುಮುಕ್ಕಿಸಿದರು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವದ್ವಿತೀಯ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 195 ರನ್‌ಗಳಿಂದ ಹಿನ್ನಡೆ ಅನುಭವಿಸಲು ಅಶ್ವಿನ್ ಕಾರಣರಾದರು.

ಆತಿಥೇಯ ತಂಡವು ಶನಿವಾರ ರೋಹಿತ್ ಶರ್ಮಾ ಶತಕದ ಬಲದಿಂದ ಮೊದಲ ದಿನದಾಟದಲ್ಲಿ 6 ವಿಕೆಟ್‌ಗಳಿಗೆ 300 ರನ್ ಗಳಿಸಿತ್ತು. ಭಾನುವಾರ ಬೆಳಿಗ್ಗೆ ರಿಷಭ್ ಪಂತ್ (58 ರನ್) ತಂಡದ ಮೊತ್ತವನ್ನು 329ಕ್ಕೆ ಹೆಚ್ಚಿಸಿದರು. ಊಟದ ವಿರಾಮಕ್ಕೂ ಮುಂಚೆಯೇ ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ಬಳಗವು ಚಹಾ ವಿರಾಮದ ಸ್ವಲ್ಪ ಹೊತ್ತಿನ ನಂತರ ಆಲೌಟ್ ಆಯಿತು!

ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಆಫ್‌ಸ್ಪಿನ್ನರ್ ಅಶ್ವಿನ್ (43ಕ್ಕೆ5) ಮೋಡಿಗೆ ಜೋ ರೂಟ್ ಬಳಗವು 59.5 ಓವರ್‌ಗಳಲ್ಲಿ 134 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ದಿನದಾಟ ಮುಗಿದಾಗ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 18 ಓವರ್‌ಗಳಲ್ಲಿ 1 ವಿಕೆಟ್‌ಗೆ 53 ರನ್ ಗಳಿಸಿತು. ಒಟ್ಟು 249 ರನ್‌ಗಳ ಮುನ್ನಡೆಯನ್ನೂ ಗಳಿಸಿದೆ. ಕ್ರೀಸ್‌ನಲ್ಲಿ ರೋಹಿತ್ ಶರ್ಮಾ (ಬ್ಯಾಟಿಂಗ್ 25) ಮತ್ತು ಚೇತೆಶ್ವರ್ ಪೂಜಾರ (ಬ್ಯಾಟಿಂಗ್ 7) ಇದ್ದಾರೆ.

ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (14 ರನ್) 12ನೇ ಓವರ್‌ನಲ್ಲಿ ಸ್ಪಿನ್ನರ್ ಜ್ಯಾಕ್ ಲೀಚ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು.

ಒಂದೇ ದಿನ 15 ವಿಕೆಟ್: ಸ್ಪಿನ್ ಸ್ನೇಹಿಯಾಗಿರುವ ಪಿಚ್‌ನಲ್ಲಿ ಭಾನುವಾರ ಒಂದೇ ದಿನ ಒಟ್ಟು 15 ವಿಕೆಟ್‌ಗಳು ಉರುಳಿದವು. ಅದರಲ್ಲಿ ಐದು ವಿಕೆಟ್‌ಗಳು ಅಶ್ವಿನ್ ಪಾಲಾದವು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸುಮಾರು 12 ಸಾವಿರ ಕ್ರಿಕೆಟ್ ಪ್ರೇಮಿಗಳು ಅಶ್ವಿನ್ ಮೋಡಿಗೆ ಮರುಳಾದರು.

ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ನ ಪತನ ಇನಿಂಗ್ಸ್‌ನ 3ನೇ ಎಸೆತದಲ್ಲಿ ಆರಂಭವಾಯಿತು. ಇಶಾಂತ್ ಶರ್ಮಾ ಎಸೆತವನ್ನು ಪ್ಯಾಡ್‌ಗೆ ಎಳೆದುಕೊಂಡ ರೋರಿ ಬರ್ನ್ಸ್‌ ಪೆವಿಲಿಯನ್‌ನತ್ತ ಮುಖ ಮಾಡಿದರು .

ಪಿಚ್‌ನ ಸಂಪೂರ್ಣ ಲಾಭ ಪಡೆದ ಅಶ್ವಿನ್ ಬೇಟೆ ಆರಂಭಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಡಾಮ್ ಸಿಬ್ಲಿ, ಡೆನೀಲ್ ಲಾರೆನ್ಸ್‌, ಬೆನ್ ಸ್ಟೋಕ್ಸ್, ಒಲಿ ಸ್ಟೋನ್ ಮತ್ತು ಕೊನೆಯ ಕ್ರಮಾಂಕದ ಸ್ಟುವರ್ಟ್ ಬ್ರಾಡ್ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಹೆಚ್ಚು ಎತ್ತರಕ್ಕೆ ಪುಟಿಯದ ಎಸೆತಗಳನ್ನು ಸ್ವೀಪ್ ಮತ್ತು ಮುಂದಡಿ ಇಟ್ಟು ಆಡುವ ಭರದಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್‌ಗಳು ಎಡವಿದರು.

ಅಶ್ವಿನ್‌ಗೆ ತಕ್ಕ ಜೊತೆ ನೀಡಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಇಂಗ್ಲೆಂಡ್ ನಾಯಕ ಜೋ ರೂಟ್ (6; 12ಎ) ವಿಕೆಟ್ ಗಳಿಸಿ ಸಂಭ್ರಮಿಸಿದರು. ಪದಾರ್ಪಣೆ ಟೆಸ್ಟ್ ಆಡುತ್ತಿರುವ ಅಕ್ಷರ್‌ಗೆ ಇದು ಚೊಚ್ಚಲ ವಿಕೆಟ್. ಇಲ್ಲಿಯೇ ಕಳೆದ ವಾರ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ಇಂಗ್ಲೆಂಡ್‌ನ ರೂಟ್ ಔಟಾಗಿದ್ದು ಆತಿಥೇಯರ ಉತ್ಸಾಹ ಇಮ್ಮಡಿಸಿತು.

ಎಚ್ಚರಿಕೆಯಿಂದ ಆಡುತ್ತಿದ್ದ ಒಲಿ ಪೋಪ್ (22) ಅವರಿಗೆ ಮೊಹಮ್ಮದ್ ಸಿರಾಜ್ ನಿರ್ಗಮನದ ಹಾದಿ ತೋರಿಸಿದರು. ರಿಷಭ್ ಪಡೆದ ಆಕರ್ಷಕ ಕ್ಯಾಚ್‌ಗೆ ಪೋಪ್ ಆಟ ಮುಗಿಯಿತು.

ಮೋಯಿನ್ ಅಲಿ ವಿಕೆಟ್ ಪಡೆದ ಅಕ್ಷರ್ ಮತ್ತು ಜ್ಯಾಕ್ ಲೀಚ್ ವಿಕೆಟ್ ಗಳಿಸಿದ ಇಶಾಂತ್ ಶರ್ಮಾ ಕುಣಿದಾಡಿದರು. ಚೈನಾಮ್ಯಾನ್ ಬೌಲರ್ ಕುಲದೀಪ್‌ ಯಾದವ್‌ಗೆ ಒಂದೂ ವಿಕೆಟ್ ಒಲಿಯಲಿಲ್ಲ.

ಭಾರತದ ನೆಲದಲ್ಲಿ ಮೊದಲ ಪಂದ್ಯಆಡುತ್ತಿರುವ ಬೆನ್ ಫೋಕ್ಸ್‌ (ಔಟಾಗದೆ 42, 107ಎಸೆತ) ದಿಟ್ಟತನದಿಂದ ಬ್ಯಾಟಿಂಗ್ ಮಾಡಿದರು.

ಹರಭಜನ್ ಅವರಲ್ಲಿ ಕ್ಷಮೆ ಕೋರಿದಅಶ್ವಿನ್!
ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ವದೇಶದಲ್ಲಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಆರ್‌. ಅಶ್ವಿನ್ ಅವರು ಹರಭಜನ್ ಸಿಂಗ್ ದಾಖಲೆಯನ್ನು ಮುರಿದರು. ಇದಕ್ಕಾಗಿ ಅಶ್ವಿನ್ ಅವರು ಹರಭಜನ್ ಅವರ ಕ್ಷಮೆ ಕೋರಿದ್ದಾರೆ!

ಭಾನುವಾರ ಇಂಗ್ಲೆಂಡ್ ಎದುರು ಐದು ವಿಕೆಟ್ ಗಳಿಸಿದ ಅಶ್ವಿನ್ ಖಾತೆಯಲ್ಲಿ ಈಗ 266 ವಿಕೆಟ್‌ಗಳಿವೆ. ಹರಭಜನ್ ಸಿಂಗ್ ಅವರು 265 ವಿಕೆಟ್ ಗಳಿಸಿದ್ದರು. ಇದೀಗ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅನಿಲ್ ಕುಂಬ್ಳೆ (350 ವಿಕೆಟ್) ಇದ್ದಾರೆ.

’2001ರಲ್ಲಿ ನಾನು ಭಜ್ಜಿ ಪಾಜಿ (ಹರಭಜನ್) ಅವರು ಆಡುವುದನ್ನು ನೋಡುತ್ತಿದ್ದೆ. ನಾನು ಕೂಡ ಭಾರತದ ಆಫ್‌ಸ್ಪಿನ್ನರ್ ಆಗಿ ಆಡುತ್ತೇನೆ ಎಂದು ಆಗ ಅನಿಸಿರಲಿಲ್ಲ. ಆಗಿನ್ನೂ ಬ್ಯಾಟ್ಸ್‌ಮನ್ ಆಗಿದ್ದೆ. ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತ ಸಾಗಿದ್ದು ಭಾರತದಲ್ಲಿ ಸ್ಥಾನ ಪಡೆಯಲು ಕಾರಣವಾಯಿತು. ದಾಖಲೆಯನ್ನು ಮುರಿದಿದ್ದಕ್ಕೆ ನನ್ನನ್ನು ಕ್ಷಮಿಸಿ ಭಜ್ಜಿ‘ ಎಂದು ಅಶ್ವಿನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 34ವರ್ಷದ ಆಫ್‌ಸ್ಪಿನ್ನರ್ ಅಶ್ವಿನ್ ಒಟ್ಟು 76 ಟೆಸ್ಟ್‌ಗಳನ್ನು ಆಡಿದ್ದಾರೆ. 391 ವಿಕೆಟ್‌ಗಳನ್ನು ಗಳಿಸಿದ್ದಾರೆ. ಹರಭಜನ್‌ ಖಾತೆಯಲ್ಲಿ ಒಟ್ಟು 417 ವಿಕೆಟ್‌ಗಳಿವೆ.

***

ರಿಷಭ್ ಪಂತ್ ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು. ಅವರಿಗೆ ತಮ್ಮದೇ ಆದ ಶೈಲಿ, ಸಾಮರ್ಥ್ಯ ಸಾಬೀತುಮಾಡಲು ಮುಕ್ತ ಅವಕಾಶ ಕೊಡಬೇಕು.
–ಆರ್. ಅಶ್ವಿನ್, ಭಾರತ ತಂಡದ ಬೌಲರ್

***

ಇಲ್ಲಿಯ ಪಿಚ್‌ ನಾವಂದುಕೊಂಡಿದ್ದಕ್ಕಿಂತಲೂ ಕಠಿಣವಾಗಿದೆ. ಅಲ್ಲದೆ ಭಾರತದ ವಿಶ್ವದರ್ಜೆಯ ಸ್ಪಿನ್ನರ್‌ಗಳ ಮುಂದೆ ಆಡುವುದು ಇನ್ನೂ ದೊಡ್ಡ ಸವಾಲು.
-ಗ್ರಹಾಂ ಥೋರ್ಪ್, ಸಹಾಯಕ ಕೋಚ್, ಇಂಗ್ಲೆಂಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT